ADVERTISEMENT

ಮಹಾರಾಷ್ಟ್ರದಲ್ಲಿ ಒಂದಾದ ಶಿವಸೇನಾ ಬಣಗಳು: ಬೆಳಗಾವಿಯಲ್ಲಿ ಎಂಇಎಸ್‌ ಬಲ ದ್ವಿಗುಣ

ಸಂತೋಷ ಈ.ಚಿನಗುಡಿ
Published 27 ಡಿಸೆಂಬರ್ 2025, 3:26 IST
Last Updated 27 ಡಿಸೆಂಬರ್ 2025, 3:26 IST
<div class="paragraphs"><p>ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ </p></div>

ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ

   

ಪಿಟಿಐ ಚಿತ್ರಗಳು

ಬೆಳಗಾವಿ: ಮಹಾರಾಷ್ಟ್ರದಲ್ಲಿ ಶಿವಸೇನಾ ಬಣಗಳು ಎರಡು ದಶಕಗಳ ಬಳಿಕ ಒಂದಾಗಿದ್ದು, ಗಡಿಯಲ್ಲಿ ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕಿವೆ. ಇಲ್ಲಿನ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಮತ್ತು ಶಿವಸೇನೆ ಮುಖಂಡರೂ ಒಂದಾಗಿ ಮರಾಠಿಗರ ‘ಅಸ್ಮಿತೆ’ ವಿಷಯ ಮುನ್ನೆಲೆಗೆ ತರುವ ಯತ್ನ ನಡೆಸಿದ್ದಾರೆ.

ADVERTISEMENT

‘ಮರಾಠಿ ಮಾನುಸ್‌’ ಎಂಬ ಧ್ಯೇಯಕ್ಕಾಗಿ ಬಾಳ ಠಾಕ್ರೆ ಶಿವಸೇನಾ ಆರಂಭಿಸಿದ್ದರು. ವಿಶ್ವದಲ್ಲಿ ಎಲ್ಲೇ ಇದ್ದರೂ ಮರಾಠಿ ಮನುಷ್ಯನಿಗೇ ಆದ್ಯತೆ ಎಂಬುದು ಇದರ ಭಾವಾರ್ಥ. ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದವೇ ಇವರ ಎರಡನೇ ಅಜೆಂಡ ಆಗಿತ್ತು.

2005ರಲ್ಲಿ ಉದ್ಧವ್ ಠಾಕ್ರೆ ಮತ್ತು ರಾಜ್‌ ಠಾಕ್ರೆ ಬಣಗಳಾಗಿ ಒಡೆದ ಮೇಲೆ ಒಳಜಗಳಗಳೇ ಹೆಚ್ಚಾದವು. ಇದರಿಂದ ಕರ್ನಾಟಕ–ಮಹಾರಾಷ್ಟ್ರ ಗಡಿಯತ್ತ ಅವರು ತಲೆ ಹಾಕಲಿಲ್ಲ. ಎಂಇಎಸ್‌ ಮುಗ್ಗರಿಸಿ ಬೀಳಲು ಇದು ಕೂಡ ಕಾರಣವಾಗಿತ್ತು.

ಕರ್ನಾಟಕದೊಳಗೆ ಇರುವ ಬಹುತೇಕ ಮರಾಠಿಗರು ಈಗ ಮುಖ್ಯವಾಹಿನಿಗೆ ಬಂದಿದ್ದಾರೆ. ಭಾವನಾತ್ಮಕ, ವ್ಯಾವಹಾರಿಕ ಮತ್ತು ಸಾಂಸ್ಕೃತಿಕವಾಗಿ ಕನ್ನಡಿಗರೊಂದಿಗೆ ಬೆರೆತಿದ್ದಾರೆ. ಮತ್ತೆ ಠಾಕ್ರೆ ಸಹೋದರರು ‘ಮರಾಠಿ ಮಾನುಸ್‌’ ಅಜೆಂಡವನ್ನೇ ಮುನ್ನೆಲೆಗೆ ತಂದಿದ್ದಾರೆ. 20 ವರ್ಷಗಳಿಂದ ಮರೆತುಹೋಗಿದ್ದ ಘೋಷಣೆ ಮತ್ತೆ ಮೊಳಗಿದೆ. ಕನ್ನಡಿಗರು–ಮರಾಠಿಗರನ್ನು ಭಾವನಾತ್ಮಕವಾಗಿ ಬೇರ್ಪಡಿಸಲು ಎಂಇಎಸ್‌ ಇದನ್ನೇ ಬಳಸಿಕೊಳ್ಳಲು ಮುಂದಾಗಿದೆ.

‘ಇಲ್ಲಿರುವ ನಾಯಕರೆಲ್ಲ ಶಿವಸೇನೆಯ ಬಾಲಂಗೋಚಿಗಳೇ. ದಶಕಗಳವರೆಗೆ ಇವರಿಗೆ ಶಿವಸೇನೆಯೇ ಆರ್ಥಿಕ ನೆರವು ನೀಡುತಿತ್ತು. ಬಣಗಳಾದ ಬಳಿಕ ಆರ್ಥಿಕ ಬಲ ಮತ್ತು ನಾಯಕರ ಬೆಂಬಲ ನಿಂತಿತ್ತು. 2022ರಲ್ಲಿ ಏಕನಾಥ ಶಿಂದೆ ಶಿವಸೇನಾವನ್ನು ಮತ್ತೊಂದು ತುಂಡು ಮಾಡಿ, ಹೊಸ ಸರ್ಕಾರ ರಚಿಸಿದರು. ಅದು ಗಡಿಯಲ್ಲಿ ಎಂಇಎಸ್‌ ಹೋರಾಟ ದಿಕ್ಕು ತಪ್ಪಲು ಕಾರಣವಾಯಿತು’ ಎಂದು ಕನ್ನಡಪರ ಹೋರಾಟಗಾರರೊಬ್ಬರು ತಿಳಿಸಿದರು.

‘ಈ ಎಲ್ಲ ಬೆಳವಣಿಗೆಗಳಿಂದ ಎಂಇಎಸ್‌ಗೆ ಹಿನ್ನಡೆಯಾಗಿತ್ತು. ಪರಿಣಾಮ, ಮರಾಠಿಗರೇ ಎಂಇಎಸ್‌ನಿಂದ ದೂರ ಸರಿದು ಕನ್ನಡಿಗರೊಂದಿಗೆ ಬೆರೆಯುತ್ತ ಸಾಗಿದ್ದರು. ಇದನ್ನು ಸಹಿಸಿಕೊಳ್ಳದ ಎಂಇಎಸ್‌ ನಾಯಕರು ‘ಅಂತರ’ ಸೃಷ್ಟಿಸುವ ಯತ್ನ ನಡೆಸಿಯೇ ಇದ್ದಾರೆ. ಮರಾಠಿಗರಿಗೆ ಮಾತ್ರ ಆರೋಗ್ಯ ವಿಮೆ, ಉಚಿತ ಉನ್ನತ ಶಿಕ್ಷಣ, ಉಚಿತ ವಸತಿ ನಿಲಯ ಮುಂತಾದ ಯೋಜನೆಗಳು ಜಾರಿಗೆ ಬಂದಿದ್ದೂ ಇದೇ ಉದ್ದೇಶದಿಂದ’ ಎಂದು ಅವರು ಹೇಳಿದರು.

ಎಚ್‌.ಕೆ.ಪಾಟೀಲ ಅವರಿಗೆ ಗಡಿ ಉಸ್ತುವಾರಿ ಸಚಿವ ಸ್ಥಾನ ನೀಡಿದ್ದು ಹೊರತುಪಡಿಸಿದರೆ ರಾಜ್ಯ ಸರ್ಕಾರ ಗಡಿ ವಿಚಾರದಲ್ಲಿ ಎಚ್ಚೆತ್ತುಕೊಂಡಿಲ್ಲ. ಗಡಿ ಕನ್ನಡಿಗರಲ್ಲಿ ಭ್ರಮನಿರಸನ ಮೂಡಿಸಬೇಡಿ
ಅಶೋಕ ಚಂದರಗಿ ಸದಸ್ಯ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ
ಶಿವಸೇನಾ ಬಣಗಳೊಂದಿಗೆ ನಮ್ಮ ಸಾಮರ್ಥ್ಯ ದುಪ್ಪಟ್ಟಾಗಿದೆ. ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಹೋರಾಟ ಉಗ್ರವಾಗಲಿದೆ
ಮನೋಹರ ಕಿಣೇಕರ ಅಧ್ಯಕ್ಷ ಎಂಇಎಸ್‌ ಬೆಳಗಾವಿ

ಜ.21ಕ್ಕೆ ಸುಪ್ರೀಂನಲ್ಲಿ ಗಡಿ ವ್ಯಾಜ್ಯ

ಗಡಿ ವಿವಾದ ಕುರಿತು ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟಿಗೆ ಸಲ್ಲಿಸಿದ ಅರ್ಜಿ  2026ರ ಜನವರಿ 21ರಂದು ವಿಚಾರಣೆಗೆ ಬರಲಿದೆ. ಇದಕ್ಕಾಗಿ ಮಹಾರಾಷ್ಟ್ರದಲ್ಲಿ ಮೂರು ಸಮಿತಿಗಳಿವೆ. ಮುಖ್ಯಮಂತ್ರಿ ನೇತೃತ್ವದಲ್ಲಿ ‘ಉನ್ನತಾಧಿಕಾರ ಸಮಿತಿ (ಹೈಪವರ್‌ ಕಮಿಟಿ)’ ಸಂಸದ ಜಯಶೀಲ ಮಾನೆ ನೇತೃತ್ವದ ಕಾನೂನು ತಜ್ಞರ ಸಮಿತಿ ಹಾಗೂ ಇಬ್ಬರು ಗಡಿ ಉಸ್ತುವಾರಿ ಸಚಿವರ ನೇತೃತ್ವದ ತಂಡ ಕ್ರಿಯಾಶೀಲವಾಗಿವೆ. ಮುಖ್ಯವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಹಿರಿಯ ವಕೀಲ ಹರೀಶ ಸಾಳ್ವೆ ಅವರನ್ನು ಮಹಾ ಸರ್ಕಾರ ಈ ಪ್ರಕರಣಕ್ಕೆ ನಿಯೋಜಿಸಿದೆ.

‘ನಮ್ಮಲ್ಲೂ ಉನ್ನತಾಧಿಕಾರ ಸಮಿತಿ ರಚಿಸಬೇಕು. ಕಾನೂನು ಪರಿಣತರ ತಂಡ ಕಟ್ಟಬೇಕು ಎಂದು ಒತ್ತಾಯಿಸಿದ್ದರೂ ಸರ್ಕಾರ ಕಿವಿಗೊಟ್ಟಿಲ್ಲ’ ಎಂಬುದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ ದೂರು. ಇದರ ಮಧ್ಯೆ ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಅವರು ಡಿ.8ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅದನ್ನು ಅಂಗೀಕರಿಸಿ ಹೊಸ ಅಧ್ಯಕ್ಷರನ್ನು ನೇಮಿಸಬೇಕೋ ಅಥವಾ ಅವರನ್ನೇ ಮುಂದುವರಿಸಬೇಕೋ ಎಂಬ ಬಗ್ಗೆ ಕನಿಷ್ಠ ಚರ್ಚೆಯೂ ಆಗಿಲ್ಲ ಎಂದು ಮೂಲಗಳು ಖಚಿತ‍ಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.