ಬೆಳಗಾವಿ: ‘ನಗರದ ವಿವಿಧ ಮಾರ್ಗಗಳ ಅಂದ ಹೆಚ್ಚಲಿ ಮತ್ತು ಹಸಿರುಮಯ ವಾತಾವರಣ ನಿರ್ಮಾಣವಾಗಲಿ’ ಎಂಬ ಆಶಯದಿಂದ ಸ್ಮಾರ್ಟ್‌ಸಿಟಿ ಯೋಜನೆಯಡಿ ರಸ್ತೆಬದಿ ಇರಿಸಿದ್ದ ಹೂವಿನ ಕುಂಡಗಳಲ್ಲಿನ ಸಸಿಗಳಿಗೆ ಈಗ ನೀರುಣಿಸುವವರು, ಆರೈಕೆ ಮಾಡುವವರೇ ಇಲ್ಲ.
ಸ್ಥಳೀಯರು ಮತ್ತು ವ್ಯಾಪಾರಿಗಳ ಕಾಳಜಿಯಿಂದ ಕೆಲವು ಕುಂಡ ನಿರ್ವಹಣೆಯಾಗುತ್ತಿದ್ದು, ಅಷ್ಟಿಷ್ಟು ಸಸಿ ಬೆಳೆದಿವೆ. ಆದರೆ, ಬಹುತೇಕ ಕುಂಡ ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ. ಕಸ ಮತ್ತು ಮದ್ಯದ ಬಾಟಲಿ ಎಸೆಯಲು, ಜಾಹೀರಾತು ಫಲಕ ಇರಿಸಲು ಬಳಕೆಯಾಗುತ್ತಿವೆ!
ನೆಹರೂ ನಗರ, ಶಿವಬಸವ ನಗರ, ಶ್ರೀನಗರ, ವಂಟಮುರಿ ಕಾಲೊನಿ, ಆಂಜನೇಯ ನಗರದ ಮುಖ್ಯರಸ್ತೆಗಳ ಬದಿ 2021ರಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯವರು ಹೂವಿನ ಕುಂಡ ಇರಿಸಿದ್ದರು. ‘₹4,119ಕ್ಕೆ ಖರೀದಿಸಿದ ಪ್ರತಿ ಕುಂಡದಲ್ಲಿ ಮಣ್ಣು ತುಂಬಲು ₹1,550, ಗೊಬ್ಬರಕ್ಕೆ ₹500, ಕಾಂಪೋಸ್ಟ್‌ಗೆ ₹15, ಪ್ರತಿ ಸಸಿಗೆ ₹275 ಖರ್ಚಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದರು.
ಕೆಲ ದಿನಗಳವರೆಗೆ ಉತ್ತಮವಾಗಿ ನಿರ್ವಹಣೆಯಾದ ಕುಂಡಗಳು, ನಂತರ ನಿರ್ಲಕ್ಷ್ಯಕ್ಕೆ ಒಳಗಾದವು. ಅವುಗಳ ನಿರ್ವಹಣೆಗೆ ತಮ್ಮ ಬಳಿ ಸಂಪನ್ಮೂಲ ಲಭ್ಯವಿಲ್ಲ ಎಂದು ಸ್ಮಾರ್ಟ್‌ಸಿಟಿ ಯೋಜನೆಯವರು, 2025ರ ಜನವರಿಯಲ್ಲಿ ಪಾಲಿಕೆಗೆ ಹಸ್ತಾಂತರಿಸಿದ್ದಾರೆ. ಆದರೆ, ಈಗಲೂ ಅವು ನಿರ್ವಹಣೆಯಾಗುತ್ತಿಲ್ಲ. ಇದರಿಂದಾಗಿ ಮಹತ್ವದ ಯೋಜನೆಯೊಂದು ಹಳ್ಳ ಹಿಡಿದಿದೆ.
ಕೆಲವು ಕುಂಡಗಳು ಒಡೆದು ವಿನ್ಯಾಸವನ್ನೇ ಕಳೆದುಕೊಂಡಿದ್ದರೆ, ಇನ್ನೂ ಕೆಲವನ್ನು ಬೇಕಾಬಿಟ್ಟಿಯಾಗಿ ಎಸೆಯಲಾಗಿದೆ. ಕಸದಿಂದಲೇ ತುಂಬಿದ ಹಲವು ಕುಂಡಗಳಲ್ಲಿ ಗೇಣುದ್ದ ಸಸಿಗಳೂ ಬೆಳೆದಿಲ್ಲ.
ಪ್ರತಿವರ್ಷ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆದಾಗ ಕುಂಡಗಳಲ್ಲಿ ಸಸಿ ನೆಟ್ಟು ಕೆಲದಿನ ಆರೈಕೆ ಮಾಡಲಾಗುತ್ತದೆ. ಅಧಿವೇಶನ ಮುಗಿದ ನಂತರ, ಮತ್ತೆ ಅದೇ ಪರಿಸ್ಥಿತಿ.
‘ಆರಂಭದಲ್ಲಿ ನಾವು ಸರಿಯಾಗಿಯೇ ಕುಂಡ ನಿರ್ವಹಿಸಿದ್ದೆವು. ಪಾಮ್ ಮತ್ತು ನಾಲ್ಕೈದು ತಳಿಗಳ ಹೂವಿನ ಸಸಿ ನೆಟ್ಟಿದ್ದೆವು. ಆದರೆ, ಅವುಗಳ ಆರೈಕೆಗೆ ನಮ್ಮೊಂದಿಗೆ ಸ್ಥಳೀಯರು ಸಹಕರಿಸಲಿಲ್ಲ. ಕೆಲವರು ಅಲ್ಲಿಯೇ ತ್ಯಾಜ್ಯ ಎಸೆಯಲು ಆರಂಭಿಸಿದರು. ಈ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಜಾನುವಾರುಗಳು ಸಸಿ ತಿಂದವು. ವಾಯುವಿಹಾರಕ್ಕೆ ಬಂದ ಕೆಲವರೂ ಹೂವಿನ ಸಸಿ ಕಿತ್ತೊಯ್ದರು. ಯೋಜನೆ ಸಫಲವಾಗದಿರಲು ಇದೂ ಕಾರಣ’ ಎಂದು ಅಧಿಕಾರಿಗಳು ಹೇಳುತ್ತಾರೆ.
Highlights - ಕುಂಡಗಳಲ್ಲಿ ಮದ್ಯದ ಬಾಟಲಿಗಳ ಎಸೆತ ಹಲವು ಕುಂಡಗಳಲ್ಲಿ ಗೇಣುದ್ದ ಬೆಳೆಯದ ಸಸಿಗಳು ಪ್ರತಿವರ್ಷ ಅಧಿವೇಶನದಲ್ಲಷ್ಟೇ ನಿರ್ವಹಣೆ
Quote - ‘ಸುಂದರ ಮತ್ತು ಸ್ವಚ್ಛ ಬೆಳಗಾವಿ’ ನಿರ್ಮಾಣಕ್ಕಾಗಿ ನಮ್ಮ ಎಸ್‌ಜಿಬಿಐಟಿಯ ಎನ್‌ಎಸ್‌ಎಸ್ ಘಟಕದಿಂದ ರಸ್ತೆ ವಿಭಜಕ ದತ್ತು ಪಡೆದಿದ್ದೇವೆ ಅಲ್ಲಮಪ್ರಭು ಸ್ವಾಮೀಜಿ ನಾಗನೂರು ರುದ್ರಾಕ್ಷಿಮಠ ಬೆಳಗಾವಿ
Quote - ಇತ್ತೀಚೆಗೆ ಎರಡು ಸಲ ಕುಂಡಗಳಲ್ಲಿ ಮಣ್ಣು ಹಾಕಿಸಿ ಸಸಿ ನೆಟ್ಟಿದ್ದೆವು. ಆದರೆ ಸ್ಥಳೀಯರ ಅಸಹಕಾರದಿಂದ ಅವು ನಿರ್ವಹಣೆಯಾಗುತ್ತಿಲ್ಲ. ಮುಂದೆ ಕುಂಡಗಳ ನಿರ್ವಹಣೆಗೆ ಕ್ರಮ ವಹಿಸುತ್ತೇವೆ ಬಿ.ಶುಭ ಆಯುಕ್ತೆ ಮಹಾನಗರ ಪಾಲಿಕೆ
Quote - ಅಶೋಕ ನಗರದಲ್ಲಿ ನಮ್ಮ ಮಳಿಗೆ ಮುಂದಿರುವ ಕುಂಡಗಳನ್ನು ಸ್ಥಳೀಯರೇ ನಿರ್ವಹಿಸುತ್ತಿದ್ದೇವೆ. ಪಾಲಿಕೆಯವರು ಸರಿಯಾಗಿ ನಿರ್ವಹಿಸಿ ರಸ್ತೆಗಳ ಅಂದ ಹೆಚ್ಚಿಸಬೇಕು ದೀಪಕ ಗುಡಗನಟ್ಟಿ ಕನ್ನಡ ಹೋರಾಟಗಾರ
Quote - ಎಸ್‌ಜಿಬಿಐಟಿ ಮಾದರಿಯಲ್ಲಿ ತಾವೂ ರಸ್ತೆ ವಿಭಜಕಗಳನ್ನು ದತ್ತು ಪಡೆಯುವಂತೆ ಇತರೆ ಸಂಘ–ಸಂಸ್ಥೆಯವರನ್ನು ಸಂಪರ್ಕಿಸಿ ಕೋರುತ್ತೇವೆ ಸಯೀದಾ ಆಫ್ರೀನ್‌ಭಾನು ಬಳ್ಳಾರಿ ವ್ಯವಸ್ಥಾಪಕ ನಿರ್ದೇಶಕಿ ಸ್ಮಾರ್ಟ್‌ಸಿಟಿ ಯೋಜನೆ
Cut-off box - ‘ಸಸಿ ನೆಡುತ್ತಿದ್ದಾರೆ’ ಬೆಳಗಾವಿಯ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ(ಎಸ್‌ಜಿಬಿಐಟಿ) ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್) ಘಟಕದವರು ಇತ್ತೀಚೆಗೆ ಶಿವಬಸವ ನಗರದ ರಸ್ತೆ ವಿಭಜಕಗಳನ್ನು ದತ್ತು ಪಡೆದಿದ್ದಾರೆ. ವಿಭಜಕಗಳ ಜತೆಗೆ ಹೂವಿನ ಕುಂಡಗಳನ್ನು ಶುಚಿಗೊಳಿಸಿ ಅವುಗಳಲ್ಲಿ ಸಸಿ ನೆಡುತ್ತಿದ್ದಾರೆ.
Cut-off box - ಅಂಕಿ–ಸಂಖ್ಯೆ 1283 ಹೂವಿನ ಕುಂಡಗಳು ₹6459 ಪ್ರತಿ ಕುಂಡಕ್ಕೆ ವ್ಯಯಿಸಿದ ಒಟ್ಟು ಮೊತ್ತ ₹82.86 ಲಕ್ಷ ಯೋಜನೆಗೆ ವ್ಯಯಿಸಿದ ವೆಚ್ಚ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.