ADVERTISEMENT

ಕಾರ್ಮಿಕರಿಗೆ ದೊರೆಯದ ‘ಧನ ಸಹಾಯ’!

80ಸಾವಿರದಲ್ಲಿ ಸರ್ಕಾರಕ್ಕೆ ಕಳುಹಿಸಿದ್ದು 26ಸಾವಿರ ಮಾತ್ರ

ಎಂ.ಮಹೇಶ
Published 30 ಏಪ್ರಿಲ್ 2020, 19:30 IST
Last Updated 30 ಏಪ್ರಿಲ್ 2020, 19:30 IST
   

ಬೆಳಗಾವಿ: ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ಕಂಗಾಲಾಗಿರುವ ಕಾರ್ಮಿಕರಲ್ಲಿ ಬಹುತೇಕರಿಗೆ ಸರ್ಕಾರದಿಂದ ಧನಸಹಾಯ ಈವರೆಗೂ ದೊರೆತಿಲ್ಲ.

ಕೊರೊನಾ ವೈರಸ್ ಹರಡುತ್ತಿರುವ ಭೀತಿಯ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಘೋಷಿಸಿರುವುದರಿಂದಾಗಿ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿವೆ. ಇದರಿಂದ ಕಾರ್ಮಿಕರಿಗೆ ಕೆಲಸವಿಲ್ಲ. ಹೀಗಾಗಿ, ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಸಹಾಯಧನ ಕೊಡುವುದಾಗಿ ಸರ್ಕಾರ ತಿಳಿಸಿದೆ.

ಜಿಲ್ಲೆಯೊಂದರಲ್ಲೇ 80ಸಾವಿರಕ್ಕೂ ಹೆಚ್ಚು ಕಾರ್ಮಿಕರು ಇಲಾಖೆಯಲ್ಲಿ ನೋಂದಾಯಿಸಿದ್ದಾರೆ. ಆದರೆ, ಈವರೆಗೆ 26,844 ಕಾರ್ಮಿಕರ ಹೆಸರನ್ನು ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲೂ 50ಸಾವಿರಕ್ಕೂ ಹೆಚ್ಚಿನ ಮಂದಿ ಧನಸಹಾಯ ಪಡೆಯಲು ಮುಂದಾಗಿಲ್ಲವೇಕೆ ಎನ್ನುವುದು ಅಚ್ಚರಿಗೆ ಕಾರಣವಾಗಿದೆ.

ADVERTISEMENT

ಪರದಾಡುವ ಸ್ಥಿತಿ:

ದುಡಿದ ನಂತರ ದಿನದ ಕೊನೆಗೆ ಸಿಗುವ ಹಣದಿಂದ ಜೀವನ ನಡೆಸುವ ಅವರು, ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ಮಾಹಿತಿ, ದಾಖಲೆ ಕೊರತೆ ಮೊದಲಾದ ಕಾರಣದಿಂದ ಸರ್ಕಾರದಿಂದ ಧನಸಹಾಯ ಪಡೆಯುವುದು ಸಾಧ್ಯವಾಗಿಲ್ಲ.

‘ಸಂಕಷ್ಟದಲ್ಲಿರುವ ಈ ಕಾರ್ಮಿಕರಿಗೆ ತಲಾ ₹ 2ಸಾವಿರ ನೀಡುವುದಾಗಿ ಸರ್ಕಾರವು ತಿಳಿಸಿದೆ. ಜಿಲ್ಲೆಯಲ್ಲಿ 2007ರಿಂದ 2016ರವರೆಗೆ ನೋಂದಣಿಯಾದ ಕಾರ್ಮಿಕರಲ್ಲಿ ನಮ್ಮ ಕಚೇರಿಯಲ್ಲಿ ಲಭ್ಯವಿದ್ದ 17ಸಾವಿರ ಫಲಾನುಭವಿಗಳ ಖಾತೆಗೆ ಧನಸಹಾಯ ಜಮೆ ಮಾಡಲು ಬ್ಯಾಂಕ್‌ಗೆ ಸಲ್ಲಿಸಲಾಗಿದೆ. ಈವರೆಗೆ 26,844 ಮಂದಿ ಮಾಹಿತಿ ನೀಡಿದ್ದಾರೆ. ಅವರಲ್ಲಿ 18ಸಾವಿರ ಮಂದಿಗೆ ಅವರವರ ಖಾತೆಗೆ ಹಣ ಬಂದಿದೆ’ ಎಂದು ಉಪ ಕಾರ್ಮಿಕ ಆಯುಕ್ತವೆಂಕಟೇಶ ಶಿಂಧಿಹಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಹಿತಿ ಸಂಗ್ರಹ:

‘ನಿತ್ಯ 400ರಿಂದ 500 ಮಂದಿ ಮಾಹಿತಿ ನೀಡುತ್ತಿದ್ದಾರೆ. ಹಿಂದಿನ ಆದೇಶದಲ್ಲಿ ಆಧಾರ್‌ ಕಡ್ಡಾಯ ಮಾಡಲಾಗಿತ್ತು. ಬಳಿಕ ಆಧಾರ್‌ ಸಂಖ್ಯೆ ಇಲ್ಲದಿದ್ದರೂ ಬ್ಯಾಂಕ್‌ ಖಾತೆ ಮಾಹಿತಿ ಹಾಗೂ ಕಾರ್ಮಿಕ ಗುರುತಿನ ಚೀಟಿ ಸಂಖ್ಯೆ ಮಾಹಿತಿ ಕೊಡಬೇಕು. ಎಲ್ಲವನ್ನೂ ಸರ್ಕಾರಕ್ಕೆ ಕಳುಹಿಸಲಾಗುವುದು. ಯಾವುದೇ ಡೆಡ್‌ಲೈನ್ ವಿಧಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಕಾರ್ಮಿಕರಿಗೆ ವೇತನ ಕಡಿತ ಮಾಡಬಾರದು ಹಾಗೂ ಹೊರಗಿನಿಂದ ಬಂದಿದ್ದವರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುವಂತೆ ಗುತ್ತಿಗೆದಾರರು ಅಥವಾ ಉದ್ಯೋಗದಾತರಿಗೆ ಸೂಚಿಸಲಾಗಿದೆ. ರಾಜಸ್ಥಾನ ಮೊದಲಾದ ಕಡೆಯಿಂದ ಬಂದಿರುವ 258 ವಲಸೆ ಕಾರ್ಮಿಕರನ್ನು ಹಾಲಬಾವಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ನೆಹರೂನಗರ ಹಾಸ್ಟೆಲ್‌ನಲ್ಲಿ ಇರಿಸಲಾಗಿದೆ. ಅವರ ಆಧಾರ್‌ ಸಂಖ್ಯೆ ಹಾಗೂ ಬ್ಯಾಂಕ್‌ ಖಾತೆ ಮಾಹಿತಿ ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದೇವೆ‌’ ಎಂದು ಮಾಹಿತಿ ನೀಡಿದರು.

‘ಸರ್ಕಾರವು ಮಾರ್ಚ್‌ 25 ಹಾಗೂ ಏ.17ರಂದು ಪ್ರತ್ಯೇಕ ಆದೇಶ ಮಾಡಿ ಗೊಂದಲ ಸೃಷ್ಟಿಸಿತು. ಬಹಳಷ್ಟು ಕಾರ್ಮಿಕರ ಬಳಿ ನಿರ್ದಿಷ್ಟ ದಾಖಲೆಗಳಿಲ್ಲ. ಗುರುತಿನ ಚೀಟಿ ನವೀಕರಿಸಿಲ್ಲ. ಆಧಾರ್‌ ಸಂಖ್ಯೆ ಇಲ್ಲ. ಹೀಗಾಗಿ, ಅವರಿಗೆ ಧನಸಹಾಯ ಪಡೆಯಲು ತೊಂದರೆಯಾಗಿದೆ. ಈಚೆಗೆ ಆಧಾರ್‌ ಕಡ್ಡಾಯವಲ್ಲ ಎಂದು ಹೇಳಿದೆ. ಧನಸಹಾಯ ಪಡೆದವರ ಪಟ್ಟಿಯನ್ನು ಇಲಾಖೆ ಬಿಡುಗಡೆ ಮಾಡಬೇಕು. ಸಂಕಷ್ಟಕ್ಕೆ ಒಳಗಾಗಿರುವ ಅವರಿಗೆ ಹಣ ಬಿಡುಗಡೆ ಪ್ರಕ್ರಿಯೆ ತ್ವರಿತಗೊಳಿಸಬೇಕು. ಇಲ್ಲವಾದಲ್ಲಿ ಲಾಕ್‌ಡೌನ್‌ ಪೂರ್ಣಗೊಂಡ ಬಳಿಕ ಪ್ರತಿಭಟನೆಗೆ ನಿರ್ಧರಿಸಿದ್ದೇವೆ’ ಎಂದು ಕಾರ್ಮಿಕರ ಪರ ಹೋರಾಟಗಾರ ಎನ್.ಆರ್. ಲಾತೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.