ಬೆಳಗಾವಿ: ‘ಗಾಂಧಿ ಭಾರತ’ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ಡಿ.27ರಂದು ಎಐಸಿಸಿ ವತಿಯಿಂದ ‘ಜೈ ಬಾಪು, ಜೈ ಬೀಮ್, ಜೈ ಸಂವಿಧಾನ’ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶ ನಡೆಯಲಿರುವ ಸಿ.ಪಿ.ಇಡಿ ಮೈದಾನದ ಸುತ್ತಲಿನ ಪ್ರದೇಶಕ್ಕೆ ಮಹಾತ್ಮ ಗಾಂಧಿ ನವನಗರವೆಂದು ನಾಮಕರಣ ಮಾಡಲಾಗಿದೆ. ದೇಶದ ಇತಿಹಾಸದಲ್ಲಿ ಈ ಕ್ಷಣ ಅಚ್ಚಳಿಯದೆ ಉಳಿಯಲಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘1924ರ ಡಿ.26ರಂದು ಮಧ್ಯಾಹ್ನ 3ಕ್ಕೆ ಬೆಳಗಾವಿಯ ವೀರಸೌಧದ ಬಳಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಸರಿಯಾಗಿ ನೂರು ವರ್ಷಕ್ಕೆ; ಅಂದರೆ ಇದೇ 26ರಂದು ಮಧ್ಯಾಹ್ನ 3ಕ್ಕೆ ಅದೇ ಸ್ಥಳದಲ್ಲಿ ಎಐಸಿಸಿ ಕಾರ್ಯಕಾರಿಣಿ ಸಮಿತಿ ಸಭೆ ನಡೆಯಲಿದೆ. ಎಲ್ಲ 150 ಸಂಸದರು, ಕಾಂಗ್ರೆಸ್ ಅಧಿಕಾರವಿರುವ ರಾಜ್ಯಗಳು ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ. ಅದಾದ ಬಳಿಕ ಡಿ.27ರಂದು ನಡೆಯುವ ಸಮಾವೇಶದಲ್ಲೂ ಅಪಾರ ಸಂಖ್ಯೆಯ ನಾಯಕರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ’ ಎಂದರು.
‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಮಾವೇಶ ಅಧ್ಯಕ್ಷತೆ ವಹಿಸಲಿದ್ದಾರೆ. ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಎರಡೂ ದಿನದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕಾರಿಣಿ ಸಭೆ ಹಾಗೂ ಸಮಾವೇಶಗಳು ನಮಗೆ ಹೊಸ ದಿಕ್ಕು ತೋರಲಿವೆ. ಕಾಂಗ್ರೆಸ್ ಆಂದೋಲನದಲ್ಲಿ ಹೊಸ ಯುಗ ಆರಂಭವಾಗಲಿದೆ’ ಎಂದೂ ಹೇಳಿದರು.
‘1924ರ ಅಧಿವೇಶನದಲ್ಲಿ ಬೆಳಗಾವಿಯವರೇ ಆದ ಗಂಗಾಧರರಾವ್ ದೇಶಪಾಂಡೆ ಸ್ವಾಗತಿ ಸಮಿತಿ ಅಧ್ಯಕ್ಷರಾಗಿದ್ದರು. ಅವರು ಹಾಗೂ ಜವಾಹರಲಾಲ್ ನೆಹರೂ ಅವರು ಆ ಸಮಯದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ಹೀಗಾಗಿ, ದೇಶಪಾಂಡೆ ಅವರ ಹೆಸರಲ್ಲೂ ಸ್ಮಾರಕ ಭವನ ನಿರ್ಮಿಸಿ, ಅವರಿಗೂ ಸೂಕ್ತ ಪ್ರಾಧಾನ್ಯತೆ ನೀಡಲಾಗಿದೆ’ ಎಂದರು.
‘ಸರ್ಕಾರ ಹಾಗೂ ಪಕ್ಷದ ವತಿಯಿಂದ ರಾಜ್ಯದಾದ್ಯಂತ ‘ಗಾಂಧಿ ಭಾರತ’ ಕಾರ್ಯಕ್ರಮ ವರ್ಷಪೂರ್ತಿ ಆಚರಿಸಲಾಗುವುದು. ಶಾಲೆ, ಕಾಲೇಜುಗಳಲ್ಲಿ ಚರ್ಚಾಸ್ಪರ್ಧೆ ನಡೆಸಲಾಗುವುದು. ಗಾಂಧಿ ತತ್ವ, ಆಚಾರ ವಿಚಾರಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಗುವುದು’ ಎಂದರು.
‘ಗಾಂಧಿ ಮದ್ಯಪಾನ ವಿರೋಧ ಮಾಡಿದ್ದರು ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡುತ್ತೀರಾ’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಆಗಿನ ಕಾಲವೇ ಬೇರೆ, ಈಗಿನ ಕಾಲವೇ ಬೇರೆ. ಆಗ ಖಾದಿ ಹಾಕುತ್ತಿದ್ದರು. ಈಗ ನೀವೆಲ್ಲ ಬೇರೆ ಬಟ್ಟೆ ಹಾಕುತ್ತಿಲ್ಲವೇ’ ಎಂದು ಮರು ಪ್ರಶ್ನಿಸಿದರು.
ಎರಡು ದಿನ ಏನೇನು ಕಾರ್ಯಕ್ರಮ?
‘1924ರ ಅಧಿವೇಶನದ ದಾಖಲೆಗಳನ್ನು ಸಂಗ್ರಹಿಸಿದ್ದು, ಅದನ್ನು ಪುಸ್ತಕ ಮಾಡಿ ನಾಳೆ ಬಿಡುಗಡೆ ಮಾಡುತ್ತಿದ್ದೇವೆ. 26ರಂದು ಬೆಳಿಗ್ಗೆ 10 ಗಂಟೆಗೆ ವೀರಸೌಧದಲ್ಲಿ ಗಾಂಧಿ ಪುತ್ಥಳಿ, ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಬೆಳಿಗ್ಗೆ 10.45ಕ್ಕೆ ಖಾದಿ ಮೇಳ ಉದ್ಘಾಟನೆ, 11.15ಕ್ಕೆ ಗಂಗಾಧರ ದೇಶಪಾಂಡೆ ಸ್ಮಾರಕ ಅನಾವರಣ ಮಾಡಲಿದ್ದೇವೆ. ಮಧ್ಯಾಹ್ನ 3 ಗಂಟೆಗೆ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ರಾತ್ರಿ 7ಕ್ಕೆ ಎಐಸಿಸಿ ಅಧ್ಯಕ್ಷರಿಂದ ಭೋಜನಕೂಟ ಏರ್ಪಡಿಸಲಾಗಿದೆ’ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.
‘27ರಂದು ಬೆಳಿಗ್ಗೆ 10.30ಕ್ಕೆ ಸುವರ್ಣ ವಿಧಾನ ಸೌಧದಲ್ಲಿ ಗಾಂಧಿ ಪ್ರತಿಮೆಯನ್ನು ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅನಾವರಣ ಮಾಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದು, ಸಭಾಧ್ಯಕ್ಷರಾದ ಯು.ಟಿ. ಖಾದರ್ ಹಾಗೂ ಸಭಾಪತಿಗಳಾದ ಬಸವರಾಜ ಹೊರಟ್ಟಿ ಮುಖಂಡತ್ವದಲ್ಲಿ ನಡೆಯಲಿ. ಎಲ್ಲ ಸಂಸದರು, ಶಾಸಕರು, ಎಲ್ಲ ಪಕ್ಷಗಳ ನಾಯಕರಿಗೂ ಆಹ್ವಾನ ನೀಡಲಾಗಿದೆ. ಮಧ್ಯಾಹ್ನ 1 ಗಂಟೆಗೆ ಕಾಂಗ್ರೆಸ್ ಸಾರ್ವಜನಿಕ ಸಮಾವೇಶ ನಡೆಯಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.