ಅಸುಂಡಿ (ಸವದತ್ತಿ): ‘ತಂದೆ, ತಾಯಿ, ಪತ್ನಿ, ಮಕ್ಕಳು, ಬಂಧುಗಳು, ಮಿತ್ರರು; ಎಲ್ಲ ಸಂಬಂಧಗಳೂ ಬಹಳ ಮುಖ್ಯ. ಆದರೆ, ಎಲ್ಲವನ್ನೂ ಮೀರಿದ್ದು ತಾಯ್ನಾಡಿನ ಬಂಧ. ಈಗ ಯುದ್ಧದ ಕಾರ್ಮೋಡ ಕವಿದಿದೆ. ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿದ ರಕ್ತಪಿಪಾಸುಗಳ ಹುಟ್ಟಡಗಿಸುವ ಅವಕಾಶ ಒದಗಿಬಂದಿದೆ. ಇಂಥ ಸಂದರ್ಭದಲ್ಲಿ ನನಗೆ ಕುಟುಂಬಕ್ಕಿಂತ ಕರ್ತವ್ಯವೇ ಮುಖ್ಯ. ಇಡೀ ದೇಶದ ಕುಟುಂಬ ನೆಮ್ಮದಿಯಿಂದ ಇದ್ದಾಗಲೇ ಸೈನಿಕ ನೆಮ್ಮದಿಯಿಂದ ಇರುತ್ತಾನೆ. ನಾನು ಈ ಅವಕಾಶ ಕಳೆದುಕೊಳ್ಳುವುದಿಲ್ಲ. ಇಂದೇ ಹೊರಟಿದ್ದೇನೆ...’
ಅಸುಂಡಿ ಗ್ರಾಮದ ಯೋಧ ಸಂಗಮೇಶ ಹುಡೇದ ಅವರ ಒಂದೊಂದು ಮಾತೂ ಎದೆಯಾಳದಿಂದ ಹೊರಬರುತ್ತಿತ್ತು. ಈಚೆಗಷ್ಟೇ ಹಸೆಮಣೆ ಏರಿದ ಅವರಿಗೆ ಇನ್ನೂ ‘ಹಸಿ ಮೈ’ ಇದೆ. ಆಗಲೇ ಅವರು ಬಂದೂಕು ಹೆಗಲೇರಿಸಿಕೊಂಡು ರುದ್ರಾವತಾರ ತೋರಲು ಗಡಿಯತ್ತ ಹೊರಟು ನಿಂತಿದ್ದಾರೆ.
ಐತಿಹಾಸಿಕ ಮಹತ್ವದ ಪಡೆದ ಅಸುಂಡಿ ಗ್ರಾಮ ಈಗ ಜಿಲ್ಲೆಗೆ ಹಿರಿಮೆ ತಂದಿದೆ. ಈ ಊರಿನಲ್ಲಿ 40ಕ್ಕೂ ಹೆಚ್ಚು ಯೋಧರು ಸೇವೆಯಲ್ಲಿದ್ದಾರೆ. ಅವರಲ್ಲಿ ಐವರು ರಜೆಗೆ ಬಂದಿದ್ದರು.
ಯೋಧರಾದ ಸಂಗಮೇಶ ಹುಡೇದ ಹಾಗೂ ಇವರ ತಮ್ಮ ಉಮೇಶ ಹುಡೇದ ಅವರ ಮದುವೆ ಏ.21ರಂದು ಆಗಿದೆ. ಇದೇ ಊರಿನ ಯೋಧ ಶಿವರಾಜ ಚಿಕ್ಕಣ್ಣವರ ಅವರ ಮದುವೆ ಏ.18ರಂದು ಆಗಿದೆ. ಇನ್ನೊಬ್ಬ ತರುಣ ಯೋಧ ಯಲ್ಲಪ್ಪ ಚಿಕ್ಕಣ್ಣವರ ಅವರಿಗೆ ಮೇ 4ರಂದು ನಿಶ್ಚಿತಾರ್ಥ ಆಗಿದೆ. ಮದುವೆ ದಿನಾಂಕ ಗೊತ್ತುಮಾಡಲು ಓಡಾಡುತ್ತಿದ್ದರು. ಮಂಜುನಾಥ ಬಿಸಿರೊಟ್ಟಿ ಅವರೂ ತಮ್ಮ ಕುಟುಂಬದೊಂದಿಗೆ ರಜೆಯ ದಿನ ಕಳೆಯಲು ಬಂದಿದ್ದರು.
ಉಮೇಶ ಅವರು ಶುಕ್ರವಾರವೇ ಕರ್ತವ್ಯಕ್ಕೆ ಮರಳಿದ್ದಾರೆ. ಶಿವರಾಜ ಮೇ 11, ಸಂಗಮೇಶ ಮೇ 14ಕ್ಕೆ, ಯಲ್ಲಪ್ಪ ಹಾಗೂ ಮಂಜುನಾಥ ಮೇ 16ಕ್ಕೆ ಕರ್ತವ್ಯಕ್ಕೆ ಮರಳಲಿದ್ದಾರೆ. ಈ ಎಲ್ಲರಿಗೂ ಇನ್ನೂ 18ರಿಂದ 25 ದಿನಗಳ ರಜೆ ಬಾಕಿ ಇದ್ದವು.
ಸ್ಪೆಷಲಿಸ್ಟ್‌ಗಳದ್ದೇ ಊರು:
26 ವರ್ಷ ವಯಸ್ಸಿನ ಯೋಧ ಸಂಗಮೇಶ ಅವರು 2017ರಲ್ಲಿ ಸೇನೆ ಸೇರಿದ್ದಾರೆ. ಸೈನ್ಯದಲ್ಲಿ ಸಿಗ್ನಲ್ ಕಮ್ಯುನಿಕೇಷನ್ ವಿಭಾಗದ ಸ್ಪೆಷಲಿಸ್ಟ್ ಆಗಿದ್ದಾರೆ. ಸದ್ಯ ಜಮ್ಮುವಿನಲ್ಲಿ ಅವರ ಪೋಸ್ಟಿಂಗ್ ಇದೆ. ಯಾವಾಗಲೂ ಹದ್ದಿನ ಕಣ್ಣು ಇಡುವುದು, ವೈರಿಗಳ ಸಂವಹನ ಪತ್ತೆ ಮಾಡುವುದು, ಮಾಧ್ಯಮಗಳ ಜವಾಬ್ದಾರಿ ಕೂಡ ಇವರಿಗೆ ಇದೆ. ದ್ವಿತೀಯ ಪಿಯು ವಿಜ್ಞಾನ ಓದಿರುವ ಸಂಗಮೇಶ ಅವರು, ಸೇನೆಗೆ ಸೇರಿದ ಮೇಲೆ ಮೂರು ವರ್ಷಗಳ ತರಬೇತಿ ಪಡೆದು ಈ ಹುದ್ದೆ ಗಿಟ್ಟಿಸಿಕೊಂಡಿದ್ದು ವಿಶೇಷ.
ಇವರ ಕಿರಿಯ ಸಹೋದರ, 23 ವರ್ಷದ ಉಮೇಶ ಕೂಡ 2019ರಲ್ಲಿ ಸೇನೆ ಸೇರಿದ್ದು ಜಮ್ಮುವಿನಲ್ಲೇ ಇದ್ದಾರೆ. ಸೈನ್ಯದ ‘ಸ್ಪೆಷಲ್ ಫೋರ್ಸ್ ಕಮಾಂಡೊ’ ಎಂಬುದು ಇವರಿಗೆ ಇರುವ ಹುದ್ದೆ. ಎಂಥದ್ದೇ ದುರ್ಗಮ ಸನ್ನಿವೇಶದಲ್ಲೂ ಜಲಮಾರ್ಗದ ಮೂಲಕ ವೈರಿಗಳನ್ನು ಪುಡಿಗಟ್ಟುವ ಕಲೆ ಇವರಿಗೆ ಸಾಧಿಸಿದೆ. ಪ್ಯಾರಾಜಂಪಿಂಗ್, ಸಬ್‌ಮರಿನ್ಸ್‌ಗಳ ಕದನ ಕಲೆಗಳಲ್ಲಿ ಉಮೇಶ ತರಬೇತಿ ಪಡೆದಿದ್ದಾರೆ. ಇಂಥ ತರಬೇತಿ ಪಡೆದ ಸವದತ್ತಿ ತಾಲ್ಲೂಕಿನ ಏಕಮಾತ್ರ ಯೋಧ ಉಮೇಶ ಎಂಬುದು ಹಿರಿಮೆ.
ವೀರ ಸೇನಾನಾನಿ ಶಿವರಾಜ ಚಿಕ್ಕಣ್ಣವರ ಅವರು ‘ಆರ್ಮಿ ಏವಿಯೇಷನ್’ ವಿಭಾಗದ ಮೆಕ್ಯಾನಿಕ್ ಆಗಿದ್ದಾರೆ. ಯುದ್ಧ ವಿಮಾನ, ಯುದ್ಧ ಹೆಲಿಕಾಪ್ಟರ್‌ಗಳನ್ನು ಸಿದ್ಧಗೊಳಿಸುವ ಹುದ್ದೆಯಲ್ಲಿದ್ದಾರೆ ಇವರು.
ಯಲ್ಲಪ್ಪ ಚಿಕ್ಕಣ್ಣವರ ಕೂಡ ಜಮ್ಮುವಿನಲ್ಲಿ ‘ಗನ್ನರ್’ ಆಗಿದ್ದಾರೆ. ವಾರದ ಹಿಂದಷ್ಟೇ ಅವರ ಮದುವೆ ಗೊತ್ತಾಗಿದೆ. ಇದೇ ರಜೆಯ ದಿನಗಳಲ್ಲಿ ಮದುವೆ ಮಾಡಿಕೊಂಡು ಪತ್ನಿ ಸಮೇತ ಕರ್ತವ್ಯದ ಊರಿಗೆ ಹೋಗಬೇಕು ಎಂಬ ಉದ್ದೇಶ ಅವರಿಗೆ ಇತ್ತು. ತಕ್ಷಣಕ್ಕೆ ಕರೆ ಬಂದ ಕಾರಣ ಅವರು ಸ್ವಂತ ಬದುಕನ್ನು ಹಿಂದಿಟ್ಟು, ದೇಶಕ್ಕೆ ಮುನ್ನುಗ್ಗಿದ್ದಾರೆ.
ಸೈನಿಕ ಮಂಜುನಾಥ ಬಿಸಿರೊಟ್ಟಿ ಅವರು ವಾರದ ಹಿಂದಷ್ಟೇ ರಜೆ ಪಡೆದು ಬಂದಿದ್ದರು. ಇನ್ನೂ 25 ದಿನಗಳ ರಜೆ ಇದ್ದಾಗಲೂ ಅವರಿಗೆ ಕರೆ ಬಂದಿದೆ. ಉದ್ದೇಶಿತ ಕೆಲಸಗಳನ್ನೆಲ್ಲ ಬದುಗೊತ್ತಿ ಅವರು ಗನ್ನು ಹೆಗಲೇರಿಸಿಕೊಂಡಿದ್ದಾರೆ.
ಇಬ್ಬರೂ ಗಂಡುಮಕ್ಕಳ ಮದುವೆ ಮಾಡಿದ ಸಡಗರದಲ್ಲಿದ್ದೇವೆ. ಆದರೆ ಅವರು ಯುದ್ಧಕ್ಕೆ ಹೊರಡುತ್ತೇವೆ ಅಂದರು. ಗೆದ್ದುಬನ್ನಿ ಎಂದು ಆಶೀರ್ವಾದ ಮಾಡಿ ಕಳುಸಿದ್ದೇನೆ.ಯಲ್ಲವ್ವ ಮುದಕಪ್ಪ ಹುಡೇದ, ಯೋಧರ ತಾಯಿ, ಅಸುಂಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.