ADVERTISEMENT

ಪ್ರತಿ ಟನ್ ಕಬ್ಬಿಗೆ ₹3500 ದರ ನಿಗದಿಗೆ ಆಗ್ರಹ: ಸರ್ಕಾರ ವಿರುದ್ಧ ಬಾರಕೋಲು ಚಳವಳಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 4:04 IST
Last Updated 8 ನವೆಂಬರ್ 2025, 4:04 IST
ಬೈಲಹೊಂಗಲದಲ್ಲಿ ರೈತರು ಐದನೇ ದಿನದ ಧರಣಿ ಮುಂದುವರಿಸಿ ಶುಕ್ರವಾರ ಬಾರಕೋಲು ಚಳವಳಿ ನಡೆಸಿದರು 
ಬೈಲಹೊಂಗಲದಲ್ಲಿ ರೈತರು ಐದನೇ ದಿನದ ಧರಣಿ ಮುಂದುವರಿಸಿ ಶುಕ್ರವಾರ ಬಾರಕೋಲು ಚಳವಳಿ ನಡೆಸಿದರು    

ಬೈಲಹೊಂಗಲ: ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದ ಆಶ್ವಾರೂಢ ಮೂರ್ತಿ ಎದುರು ವಿವಿಧ ರೈತಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಕಬ್ಬು ಬೆಳೆಗಾರರಿಂದ ಶುಕ್ರವಾರ ನಡೆದ ಐದನೇ ದಿನದ  ಧರಣಿ ಸತ್ಯಾಗ್ರಹಕ್ಕೆ ತಾಲ್ಲೂಕಿನ ವಿವಿಧ ಗ್ರಾಮಸ್ಥರು ಬೆಂಬಲ ನೀಡಿ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಟನ್ ಕಬ್ಬಿಗೆ ₹3,500 ದರ ನೀಡಬೇಕು ಎಂದು ಆಗ್ರಹಿಸಿದರು. ರೈತರ ಸಮಸ್ಯೆ ಆಲಿಸಲು ಸ್ಥಳಕ್ಕೆ ಬಂದ ತಹಶೀಲ್ದಾರ್‌ ಎಚ್.ಎನ್.ಶಿರಹಟ್ಟಿ ಅವರನ್ನು ಆತ್ಮೀಯತೆಯಿಂದ ಬರಮಾಡಿಕೊಂಡ, ರೈತರು ಐದು ದಿನ ನಿರಂತರ ಹೋರಾಟ ನಡೆಸಿದರೂ ಸ್ಥಳಕ್ಕೆ ಬಾರದ ಉಪವಿಭಾಗಾಧಿಕಾರಿ ಪ್ರವೀಣ ಜೈನ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ಹೊರಹಾಕಿದರು.

ಕೂಡಲೇ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ರೈತರ ಒತ್ತಾಯದಿಂದ ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿಗೆ ರೈತರು ಕೆಲಕಾಲ ಘೇರಾವ್ ಹಾಕಿದರು. ಕೂಡಲೇ ಜಿಲ್ಲಾಧಿಕಾರಿ  ಹಾಗೂ ಈ ಭಾಗದ ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ಕರೆಯಿಸಿ ರೈತರ ಎದುರು ಮಾತುಕತೆ ನಡೆಸಿ ಪ್ರತಿಟನ್ ಕಬ್ಬಿಗೆ ₹3500 ದರ ನೀಡುವಂತೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ರೈತರ ಆಕ್ರೋಶಕ್ಕೆ ಉಪವಿಭಾಗಾಧಿಕಾರಿಗಳು ಹೋರಾಟ ಸ್ಥಳದಿಂದ ಕಾಲಕಿತ್ತರು.

ADVERTISEMENT

ಬೆಂಬಲ ನೀಡಿದ ವಿವಿಧ ಗ್ರಾಮಗಳ ರೈತರು, ಸಂಘಟನೆಗಳ ಮುಖಂಡರು, ಕಾರ್ಯಕರ್ತರು ವಾದ್ಯಮೇಳಗಳೊಂದಿಗೆ ಆಗಮಿಸಿ ಸರ್ಕಾರದ ನಡೆ ಖಂಡಿಸಿದರು.

ಕೆಲ ಗ್ರಾಮಗಳ ರೈತರು ತಲೆ ಮೇಲೆ ಬುತ್ತಿ, ಕಬ್ಬು ಹೊತ್ತುಕೊಂಡು ಕೈಯಲ್ಲಿ ಬಾರಕೋಲು ಹಿಡಿದು ರಸ್ತೆಯುದ್ದಕ್ಕೂ ಸರ್ಕಾರ ವಿರುದ್ಧ  ಅಸಮಾಧಾನ ವ್ಯಕ್ತಪಡಿಸಿದರು.

ಅಸುಂಡಿ, ನಾಗನೂರ, ಮೂಗಬಸವ, ಸಂಗೊಳ್ಳಿ, ಮರಡಿನಾಗಲಾಪೂರ, ವನ್ನೂರ, ಚಿವಟಗುಂಡಿ, ಮರಕುಂಬಿ, ಸುತ್ತಮುತ್ತಲಿನ ಗ್ರಾಮಸ್ಥರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ, ಜಯ ಕರ್ನಾಟಕ ಸಂಘಟನೆ ಮುಖಂಡರು, ಪದಾಧಿಕಾರಿಗಳು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು. 

ರೈತ ಮುಖಂಡರಾದ ಮಹಾಂತೇಶ ಕಮತ, ಮಲ್ಲಿಕಾರ್ಜುನ ಹುಂಬಿ, ಶಂಕರ ಬೋಳನ್ನವರ, ಶಂಕರ ಮಾಡಲಗಿ, ಎಫ್.ಎಸ್.ಸಿದ್ಧನಗೌಡರ, ಸೋಮಲಿಂಗಪ್ಪ ಮೆಳ್ಳಿಕೇರಿ, ಮಹಾಂತೇಶ ಕಮತ, ಸುರೇಶ ಸಂಪಗಾಂವ ಸೇರಿದಂತೆ ಅನೇಕರು ಇದ್ದರು.

ಬೈಲಹೊಂಗಲದಲ್ಲಿ ಐದನೇ ದಿನದ ರೈತರ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಪ್ರವೀಣ ಜೈನ ಅವರಿಗೆ ರೈತರು ಘೇರಾವ್ ಹಾಕಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.