ADVERTISEMENT

ಬೆಳಗಾವಿ| ಕಬ್ಬಿಗೆ ₹3,500 ದರ ನಿಗದಿಪಡಿಸಲು ಪ್ರತಿಭಟನೆ: ರೈತರು ಪೊಲೀಸ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 10:11 IST
Last Updated 2 ನವೆಂಬರ್ 2025, 10:11 IST
   

ಬೆಳಗಾವಿ: ಪ್ರತಿ ಟನ್‌ ಕಬ್ಬಿಗೆ ₹3,500 ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಸಾಂಬ್ರಾ ರಸ್ತೆಯ ರೈತ ವೃತ್ತದಲ್ಲಿ ಬೆಳಗಾವಿ–ಬಾಗಲಕೋಟೆ ರಾಜ್ಯ ಹೆದ್ದಾರಿ ತಡೆದು ಭಾನುವಾರ ಪ್ರತಿಭಟಿಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದರು.

ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ರೈತರು, ಸಕ್ಕರೆ ಕಾರ್ಖಾನೆಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಒಂದು ತಾಸಿಗೂ ಹೆಚ್ಚು ಹೊತ್ತು ರಸ್ತೆತಡೆ ನಡೆಸಿದ್ದರಿಂದ ವಾಹನ ಸವಾರರು ಪರದಾಡಿದರು.

ಮುಖಂಡ ಪ್ರಕಾಶ ನಾಯಕ, ‘ಸಕ್ಕರೆ ಕಾರ್ಖಾನೆಗಳು ಟನ್‌ ಕಬ್ಬಿಗೆ ₹3,500 ನೀಡಬೇಕು ಎಂದು ಒತ್ತಾಯಿಸಿ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್‌ನಲ್ಲಿ ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಅದನ್ನು ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲಾಕೇಂದ್ರವಾಗಿ ಹೋರಾಟ ಮಾಡುತ್ತಿದ್ದೇವೆ’ ಎಂದರು.

ADVERTISEMENT

‘ನ್ಯಾಯಯುತವಾದ ದರ ಸಿಗದೆ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ನೆರವಿಗೆ ಧಾವಿಸಬೇಕಿದ್ದ ಜಿಲ್ಲಾಡಳಿತ ಏನು ಮಾಡುತ್ತಿದೆ’ ಎಂದು ಪ್ರಶ್ನಿಸಿದ ಅವರು, ‘ನಮ್ಮ ಬೇಡಿಕೆಯಂತೆ ಕಬ್ಬಿಗೆ ದರ ನಿಗದಿಪಡಿಸಬೇಕು. ಬಳಿಕ ಕಬ್ಬು ನುರಿಸುವ ಹಂಗಾಮು ಆರಂಭಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಶಿವಾನಂದ ಮುಗಳಿಹಾಳ, ರಾಜು ಮರ್ವೆ, ಅಡಿವೇಶ ಇಟಗಿ, ಕಿಶನ್‌ ನಂದಿ, ರಮೇಶ ವಾಲಿ, ಶ್ರೀನಿವಾಸ ಗೌಡರ, ಅರ್ಜುನ ಮಡಿವಾಳ, ಭಿಷ್ಠಪ್ಪ ಶಿಂಧೆ, ಜಾವೀದ್‌ ಮುಲ್ಲಾ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.