ADVERTISEMENT

ಬೇಕಿರುವುದು FRP ಅಲ್ಲ: SAP; ಮಹಾರಾಷ್ಟ್ರದಲ್ಲಿ ಸಿಗುವುದು ಇಲ್ಲೇಕೆ ಇಲ್ಲ?

ರಿಕವರಿ ಎಷ್ಟೇ ಬಂದರೂ ₹3,300 ದರ ನೀಡಲೇಬೇಕು ಎಂಬುದು ಬೇಡಿಕೆ: ರಂಗೋಲಿ ಕೆಳಗೆ ನುಸುಳಿದ ಸಕ್ಕರೆ ಕಾರ್ಖಾನೆಗಳು

ಸಂತೋಷ ಈ.ಚಿನಗುಡಿ
Published 17 ನವೆಂಬರ್ 2025, 4:20 IST
Last Updated 17 ನವೆಂಬರ್ 2025, 4:20 IST
ಕಬ್ಬು ದರ ಪರಿಷ್ಕರಣೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್‌ ಬಳಿ ರೈತರು ನಡೆಸಿದ ಅನಿರ್ದಿಷ್ಟಾವಧಿ ಮುಷ್ಕರ ಡ್ರೋನ್‌ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕಬ್ಬು ದರ ಪರಿಷ್ಕರಣೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್‌ ಬಳಿ ರೈತರು ನಡೆಸಿದ ಅನಿರ್ದಿಷ್ಟಾವಧಿ ಮುಷ್ಕರ ಡ್ರೋನ್‌ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ   

ಬೆಳಗಾವಿ: ಕಬ್ಬು ಬೆಳೆಗಾರರಿಗೆ ನಿಜವಾಗಿಯೂ ನ್ಯಾಯ ಸಿಕ್ಕಿತೇ ಎಂಬ ಪ್ರಶ್ನೆಗೆ ಯಾರಲ್ಲೂ ಸ್ಪಷ್ಟವಾದ ಉತ್ತರವಿಲ್ಲ. ರೈತರಿಗೆ ನಿಜವಾಗಿಯೂ ಬೇಕಾದ್ದು ಏನು? ಕೊಟ್ಟಿದ್ದು ಏನು ಎಂಬ ಚರ್ಚೆ ಜನಮನದಲ್ಲಿ ನಡೆದಿದೆ. ಸರ್ಕಾರಗಳು, ಕಾರ್ಖಾನೆಗಳು ಪದೇಪದೇ ಎಫ್‌ಆರ್‌ಪಿ (ನ್ಯಾಯಯುತ ಹಾಗೂ ಲಾಭದಾಯಕ ದರ) ಕಡೆಯತ್ತ ಮಾತ್ರ ಬೊಟ್ಟು ಮಾಡುತ್ತಿವೆ. ಆದರೆ, ಎಫ್‌ಆರ್‌ಪಿಗಿಂತ ಮುಖ್ಯವಾದುದು ಎಸ್‌.ಎ.ಪಿ (ರಾಜ್ಯ ಸಲಹಾ ಸಮಿತಿ) ಎಂಬುದು ಚರ್ಚಾಸ್ಪದ ವಿಷಯ.

ಎಫ್‌ಆರ್‌ಪಿಯನ್ನು ನಿರ್ಧಾರ ಮಾಡುವುದು ಕೇಂದ್ರ ಸರ್ಕಾರ. ಅದು ಕೂಡ ಇಡೀ ದೇಶದ ಕಬ್ಬು ಬೆಳೆಗೆ ಸಂಬಂಧಿಸಿ ಕೇಂದ್ರ ಈ ನಿರ್ಧಾರ ಮಾಡುತ್ತದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಇಳುವರಿ ಬರುತ್ತದೆ ಎಂಬುದರ ಬಗ್ಗೆ ಇದರಲ್ಲಿ ಪರಿಗಣನೆಯೇ ಇಲ್ಲ. ಹೀಗಾಗಿ, ಇದು ಅವೈಜ್ಞಾನಿಕ ನಿರ್ಧಾರ ಎಂಬುದು ರೈತ ಮುಖಂಡರ ಕಿಡಿ.

ಎಫ್‌ಆರ್‌ಪಿ ನಿರ್ಧಾರ ಮಾಡುವ ಮುನ್ನವೇ ಎಸ್‌ಎಪಿ ರಚನೆ ಮಾಡಬೇಕು ಎಂಬುದು ನಿಯಮ. ಆದರೆ, ಕಳೆದ 15 ವರ್ಷಗಳಿಂದ ಯಾವುದೇ ಸರ್ಕಾರ ಎಸ್‌ಎಪಿ ರಚನೆ ಮಾಡಿಲ್ಲ. ಜಗದೀಶ ಶೆಟ್ಟರ್‌ ಮುಖ್ಯಮಂತ್ರಿ ಆಗಿದ್ದಾಗ ಒಂದು ಬಾರಿ ಈ ಸಮಿತಿ ರಚನೆ ಮಾಡಿದ್ದರು.

ADVERTISEMENT

ಏನಿದು ಎಸ್‌ಎಪಿ: ರಾಜ್ಯ ಸಲಹಾ ಸಮಿತಿ ಎನ್ನುವುದು ಪರಿಣತರ ಗುಂಪು. ಆಯಾ ರಾಜ್ಯದಲ್ಲಿರುವ ರೈತ ಮುಖಂಡರು, ಸಕ್ಕರೆ ಸಚಿವ, ಕೃಷಿ ವಿಜ್ಞಾನಿಗಳು, ಕಾರ್ಖಾನೆಗಳ ಪ್ರತಿನಿಧಿಗಳು, ಅಧಿಕಾರಿಗಳು ಈ ಸಮಿತಿಯಲ್ಲಿ ಇರುತ್ತಾರೆ. ಕಬ್ಬು ಕೃಷಿಗೆ ಮಾಡಿದ ವೆಚ್ಚ, ಇಳುವರಿ, ರೈತರ ಸ್ಥಿತಿಗತಿ, ಸಕ್ಕರೆ ಕಾರ್ಖಾನೆಗಳ ಪ್ರಾಬಲ್ಯ, ನಿಗದಿ ಮಾಡಬೇಕಾದ ದರ ಹಾಗೂ ರಿಕವರಿ ಬಗ್ಗೆ ಈ ಸಮಿತಿ ನಿರ್ದೇಶನ ನೀಡುತ್ತದೆ. ಅದನ್ನು ಆಧರಿಸಿ ಸರ್ಕಾರ ದರ ಗೊತ್ತುಪಡಿಸಬೇಕು.

ಇದಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆಯೇ ಕೇಂದ್ರ ಸರ್ಕಾರ ಎಫ್‌ಆರ್‌ಪಿ ನಿಗದಿ ಮಾಡುತ್ತ ಬಂದಿದೆ. ಈ ಬಾರಿ ಕೂಡ 10.25 ರಿಕವರಿ ಬಂದರೆ ಮಾತ್ರ ₹3,500 ದರ ಘೋಷಣೆ ಮಾಡಿದೆ. ಅಂದರೆ ಒಂದು ಟನ್‌ ಕಬ್ಬಿಗೆ 102.50 ಕೆ.ಜಿ ಸಕ್ಕರೆ ಇಳುವರಿ ಬಂದರೆ ಮಾತ್ರ ಅದಕ್ಕೆ ₹3,500 ದರ ಕೊಡಲಾಗುತ್ತದೆ.

ಸರ್ಕಾರವೇನೋ ದರ ನಿಗದಿ ಮಾಡುತ್ತದೆ. ಅದರೆ, ಇದೂವರೆಗೆ ರಾಜ್ಯದ ಒಂದು ಕಾರ್ಖಾನೆಯೂ ಎಫ್‌ಆರ್‌ಪಿ ಆಧರಿಸಿ ದರ ನೀಡುತ್ತಿಲ್ಲ ಎಂಬುದು ರೈತರ ಆಕ್ರೋಶ. ರಾಜ್ಯದಲ್ಲಿರುವ 81 ಕಾರ್ಖಾನೆಗಳ ಪೈಕಿ ಬೆಳಗಾವಿ ಜಿಲ್ಲೆಯ 29 ಕಾರ್ಖಾನೆಗಳು ಮಾತ್ರ 10.25ರಿಂದ 11.25ರವರೆಗೆ ರಿಕವರಿ ಪಡೆಯುತ್ತವೆ. ಉಳಿದೆಲ್ಲವೂ ಶೇ 9ರೊಳಗೇ ಇವೆ. ಹಾಗಿದ್ದ ಮೇಲೆ ಎಫ್‌ಆರ್‌ಪಿ ಸಿಗಲು ಹೇಗೆ ಸಾಧ್ಯ? ಎಂಬುದು ಮೂಲಭೂತ ಪ್ರಶ್ನೆ.

ಇಲ್ಲಿ ಇನ್ನೊಂದು ಅಂಶ ಗಮನಾರ್ಹ. ನಿಗದಿತ ಎಫ್‌ಆರ್‌ಪಿಗಿಂತ ಶೇ 1ರಷ್ಟು ರಿಕವರಿ ಹೆಚ್ಚಾದರೆ ಟನ್‌ ಕಬ್ಬಿಗೆ ₹346 ಹೆಚ್ಚು ನೀಡಬೇಕು ಎಂಬುದು ನಿಯಮ. ಅದೇ ರೀತಿ ಶೇ 1ರಷ್ಟು ರಿಕವರಿ ಕಡಿಮೆಯಾದರೆ ಟನ್‌ಗೆ ₹346 ಕಡಿಮೆ ಕೂಡ ಆಗುತ್ತದೆ..!

ಮುಗಿಯದ ಗೊಂದಲ: ಕಬ್ಬು ದರ ನಿಗದಿ ವಿಚಾರದಲ್ಲಿ ಉಂಟಾದ ಗೊಂದಲಗಳು ಒಂದೆರಡಲ್ಲ. ದಿನೇದಿನೇ ಒಂದಿಲ್ಲೊಂದು ಸಂದೇಹ ಜಿಲ್ಲೆಯಲ್ಲಿ ಸುಳಿದಾಡುತ್ತಲೇ ಇದೆ. ಹೋರಾಟ ಮುಂದುವರಿಸಬೇಕೇ ಅಥವಾ ಇಲ್ಲಿಗೇ ಕೈ ಬಿಡಬೇಕೇ ಎಂಬ ಬಗ್ಗೆ ರೈತ ಮುಖಂಡರು ಹಾಗೂ ಹೋರಾಟಗಾರರಲ್ಲಿ ದ್ವಂದ್ವಗಳಿವೆ. ಏತನ್ಮಧ್ಯೆ, ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಹಂಗಾಮು ಆರಂಭಿಸಿವೆ. ರೈತರ ಹೋರಾಟ ತಣ್ಣಗಾಗಿದೆ. ಗೊಂದಲ ಮಾತ್ರ ಹಾಗೆಯೇ ಉಳಿದಿದೆ.

ಬೈಲಹೊಂಗಲದ ಸೋಮೇಶ್ವರ ಸಹಕಾರ ಸಕ್ಕರೆ ಕಾರ್ಖಾನೆ

ರೈತರು ಹೇಳುವುದೇನು?

ಪ್ರತಿ ಎಕರೆ ಕಬ್ಬು ಬೆಳೆಯಲು ₹40 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತದೆ. ಆದರೆ ಆದಾಯ ಬರುವುದು ಹೆಚ್ಚೆಂದರೆ ₹60 ಸಾವಿರದಿಂದ ₹70 ಸಾವಿರ. ಅಂದರೆ ಒಂದಿಡೀ ವರ್ಷ ದುಡಿದ ಮೇಲೂ ರೈತರಿಗೆ ಸಿಗುವುದು ₹20 ಸಾವಿರದಿಂದ ₹30 ಸಾವಿರ ಆದಾಯ ಮಾತ್ರ. ಇದು ಅವೈಜ್ಞಾನಿಕ ಅಲ್ಲವೇ? ಸೀಮಂತ‌‍ಪ್ಪ ಕೊ‍ಪ್ಪದ ರೈತ ಬೈಲಹೊಂಗಲ ಬೇಕಾಬಿಟ್ಟಿ ದರ ನಿಗದಿ ಎಫ್‌ಆರ್‌ಪಿಗಿಂತ ಎಸ್‌ಎಪಿ ರಚನೆ ಮಾಡುವುದು ಬಹಳ ಮುಖ್ಯ. ಆದರೆ ಬಹಳಷ್ಟು ರೈತರಿಗೆ ತಾವು ಕೇಳಬೇಕಾದ ನ್ಯಾಯ ಏನು ಎಂಬುದೇ ಅರ್ಥವಾಗಿಲ್ಲ. ಸಲಹಾ ಸಮಿತಿ ಇಲ್ಲದ ಕಾರಣ ಬೇಕಾಬಿಟ್ಟಿ ದರ ನಿಗದಿ ಮಾಡುವುದು ಬೇಕಾಬಿಟ್ಟಿ ಬಿಲ್‌ ಕೊಡುವುದು ಸಾಮಾನ್ಯವಾಗಿದೆ. ಪರಪ್ಪ ಚಂದನಹೊಸೂರ ರೈತರ ತೂಕದಲ್ಲೂ ಮೋಸ ಕಾರ್ಖಾನೆಗಳು ತೂಕದಲ್ಲೂ ಮೋಸ ಮಾಡುತ್ತವೆ. ದರ ನೀಡುವಲ್ಲಿಯೂ ಮೋಸ ಮಾಡುತ್ತವೆ. ಎಲ್ಲ ರಾಜಕಾರಣಿಗಳೇ ಸಕ್ಕರೆ ಕಾರ್ಖಾನೆ ನಡೆಸುತ್ತಿರುವ ಕಾರಣ ರೈತರ ಹೋರಾಟಕ್ಕೆ ಬೆಲೆ ಇಲ್ಲವಾಗಿದೆ. ಬಸವರಾಜ ಹಿರೇಮಠ ರೈತ ಅವೈಜ್ಞಾನಿಕ ಪದ್ಧತಿ ಕೇಂದ್ರ ಸರ್ಕಾರ 9.50 ರಿಕವರಿಗೆ ₹3500 ಘೋಷಣೆ ಮಾಡಬೇಕು. ಅದು ರೈತರಿಗೆ ತುಸು ಅನುಕೂಲ. ಆದರೆ ದರ ಹೆಚ್ಚು ಮಾಡಿದ ಕೂಡಲೇ ರಿಕವರಿ ಪ್ರಮಾಣವನ್ನೂ ಹೆಚ್ಚು ಮಾಡುವುದು ಏಕೆ? ಇದು ಅವೈಜ್ಞಾನಿಕ ಪದ್ಧತಿ. ಸಿದಗೌಡ ಮೋದಗಿ ಅಧ್ಯಕ್ಷ ಭಾರತೀಯ ಕೃಷಿಕ ಸಮಾಜ (ರೈತ ಸಂಘಟನೆ)

ರೈತರಿಗೆ ಬೇಕಾಗಿದ್ದೇನು?

ಸಕ್ಕರೆ ರಿಕವರಿ ಎಷ್ಟೇ ಬಂದರೂ ಟನ್‌ ಕಬ್ಬಿಗೆ ₹3300 ನೀಡಲೇಬೇಕು ಎಂಬುದು ರೈತರಿಗೆ ಬೇಕಾಗಿರುವ ಸಂಗತಿ. ಇದೊಂದೇ ಆಕ್ರೋಶ ಸಂಘರ್ಷಕ್ಕೆ ಕಾರಣವಾದುದು. ₹3300 ದರ ಕೊಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಇದರಿಂದ ಬೆಳಗಾವಿ ಜಿಲ್ಲೆಯಲ್ಲಿ ಹೋರಾಟ ತಣ್ಣಗಾಯಿತು. ಆದರೆ ಬಾಗಲಕೋಟೆಯಲ್ಲಿ ಸಂಘರ್ಷ ಏರ್ಪಟ್ಟಿತು. ಇದಕ್ಕೆ ಮುಖ್ಯ ಕಾರಣ ಸರ್ಕಾರದ ದ್ವಂದ್ವ ನಡೆ. ₹3250 ದರ ನೀಡಲು ಸಕ್ಕರೆ ಕಾರ್ಖಾನೆಗಳು ಒಪ್ಪಿವೆ. ಇದಕ್ಕೆ ಸರ್ಕಾರ ಪ್ರತಿ ಟನ್‌ಗೆ ₹50 ಸಹಾಯ ಧನ ಸೇರಿಸಿದಾಗ ₹3300 ಆಗುತ್ತದೆ. ಆದರೆ ಈ ನೆರವಿನ ಹಣವನ್ನು ಸರ್ಕಾರ ಆರು ತಿಂಗಳ ಬಳಿಕ ಏಕೆ ಕೊಡುತ್ತದೆ ಎಂಬುದು ರೈತರ ತರ್ಕಕ್ಕೆ ನಿಲುಕುತ್ತಿಲ್ಲ. ಮುಖ್ಯವಾಗಿ ಸಕ್ಕರೆ ಕಾರ್ಖಾನೆಗಳು 11.25 ರಿಕವರಿ ಕಡ್ಡಾಯ ಮಾಡಿವೆ. ಏನಿದರ ಅರ್ಥ? ಕೇಂದ್ರ ಸರ್ಕಾರವೇ 10.25 ನಿಗದಿ ಮಾಡಿರಬೇಕಾದರೆ ಅದಕ್ಕೂ ಶೇ 10ರಷ್ಟನ್ನು ಕಾರ್ಖಾನೆಗಳು ಹೆಚ್ಚು ಮಾಡಬಹುದೇ? ಎಂಬುದು ಉತ್ತರ ಸಿಗದ ಪ್ರಶ್ನೆ.

ಮಹಾರಾಷ್ಟ್ರದಲ್ಲಿ ಸಿಗುವುದು ಇಲ್ಲೇಕೆ ಇಲ್ಲ?

ರಾಜ್ಯದ ಕಾರ್ಖಾನೆಗಳು ಇಷ್ಟೆಲ್ಲ ತಿಕ್ಕಾಟ ನಡೆಸಿವೆ. ಇದರ ಲಾಭ ಪಡೆಯಲು ಮಹಾರಾಷ್ಟ್ರದ ಕಾರ್ಖಾನೆಗಳು ದರ ಸಮರ ಆರಂಭಿಸಿವೆ. ಗಡಿ ಭಾಗದಲ್ಲಿರುವ 8 ಕಾರ್ಖಾನೆಗಳು ಈಗಾಗಲೇ ಕನಿಷ್ಠ ₹3450ರಿಂದ ₹3700ರವರೆಗೂ ದರ ಘೋಷಣೆ ಮಾಡಿವೆ. ಇದರಿಂದ ಆ ಭಾಗದ ರೈತರು ತಮ್ಮ ಕಬ್ಬನ್ನು ಮಹಾರಾಷ್ಟ್ರಕ್ಕೇ ಸಾಗಿಸಲು ಇಷ್ಟಪಡುತ್ತಿದ್ದಾರೆ. ಇಲ್ಲಿನ ಕಬ್ಬಿಗೆ ಅಲ್ಲಿ ಇಷ್ಟೊಂದು ದರ ಸಿಗಬೇಕಾದರೆ ಇಲ್ಲಿ ಏಕೆ ಕೊಡುವುದಿಲ್ಲ ಎಂಬುದು ರೈತರನ್ನು ಕಾಡುತ್ತಿರುವ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.