ADVERTISEMENT

ಸುರೇಶ ಅಂಗಡಿ ಶಿವಗಣಾರಾಧನೆ

ಬೆಳಗಾವಿಯಲ್ಲಿ ಸ್ಮಾರಕ ನಿರ್ಮಿಸಲು ಚರ್ಚೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 13:30 IST
Last Updated 25 ಸೆಪ್ಟೆಂಬರ್ 2020, 13:30 IST
ಬೆಳಗಾವಿಯಲ್ಲಿ ಸುರೇಶ ಅಂಗಡಿ ಅವರ ಸ್ವಗೃಹದಲ್ಲಿ ಶುಕ್ರವಾರ ನಡೆದ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಪತ್ನಿ ಮಂಗಳಾ ಪೂಜೆ ನೆರವೇರಿಸಿದರು
ಬೆಳಗಾವಿಯಲ್ಲಿ ಸುರೇಶ ಅಂಗಡಿ ಅವರ ಸ್ವಗೃಹದಲ್ಲಿ ಶುಕ್ರವಾರ ನಡೆದ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಪತ್ನಿ ಮಂಗಳಾ ಪೂಜೆ ನೆರವೇರಿಸಿದರು   

ಬೆಳಗಾವಿ: ಕೋವಿಡ್–19ನಿಂದ ನಿಧನರಾದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಶಿವಗಣಾರಾಧನೆ ಕಾರ್ಯಕ್ರಮ ಇಲ್ಲಿನ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿರುವ ಸ್ವಗೃಹದಲ್ಲಿ ಶುಕ್ರವಾರ ನೆರವೇರಿತು.

ಕುಟುಂಬದವರ, ಬೀಗರೂ ಆಗಿರುವ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಕುಟುಂಬದವರು, ಆಪ್ತರು, ಅಧಿಕಾರಿಗಳು ಹಾಗೂ ಗಣ್ಯರು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಪೊಲೀಸ್ ಆಯುಕ್ತ ತ್ಯಾಗರಾಜನ್, ಡಿಸಿಪಿ ವಿಕ್ರಮ್ ಅಮಟೆ, ಬೆಳಗಾವಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ, ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್‌. ಜಗದೀಶ್ ಮೊದಲಾದವರು ಅಗಲಿದ ನಾಯಕನ ಫೋಟೊಗೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

ADVERTISEMENT

ನಿಯಮಾವಳಿ ಅಡ್ಡಿಯಾಯಿತು:ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶೆಟ್ಟರ್‌, ‘ಬೆಳಗಾವಿಯಲ್ಲಿ ಸುರೇಶ ಅಂಗಡಿ ಹೆಸರಲ್ಲಿ ಸ್ಮಾರಕ ನಿರ್ಮಿಸಬೇಕು ಎನ್ನುವುದು ಅಭಿಮಾನಿಗಳ ಅಭಿಲಾಷೆ ಆಗಿದೆ. ಮುಂದಿನ ದಿನಗಳಲ್ಲಿ ಕುಟುಂಬದವರು ಮತ್ತು ಸ್ಥಳೀಯ ನಾಯಕರೊಂದಿಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು’ ಎಂದು ತಿಳಿಸಿದರು.

‘ಸರಳ, ಸಜ್ಜನಿಕೆಯ ರಾಜಕಾರಣಿಯಾಗಿದ್ದ ಅವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಪಾರ್ಥಿವ ಶರೀರವನ್ನು ಬೆಳಗಾವಿಗೆ ತರಲು ಬಹಳ ಪ್ರಯತ್ನ ಮಾಡಿದೆ. ಆದರೆ, ಕೋವಿಡ್–19 ನಿಯಮಾವಳಿಯಂತೆ ಅಲ್ಲಿಯೇ ಅಂತ್ಯಕ್ರಿಯೆ ಮಾಡಬೇಕಾಯಿತು’ ಎಂದರು.

‘ಕೊರೊನಾ ಜಾಗೃತಿ ಮೂಡಿಸಲು ಅವರು ರಾಜ್ಯದಾದ್ಯಂತ ಸಂಚರಿಸಿದ್ದರು. ಜನರ ಹಿತ ಕಾಪಾಡಲು ಹೋಗಿ ಅವರ ಆರೋಗ್ಯ ನಿರ್ಲಕ್ಷ್ಯ ಮಾಡಿದರು ಎನಿಸುತ್ತದೆ. ರಾಜ್ಯ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬಹಳ ಕನಸು ಹೊತ್ತಿದ್ದರು. ಅವರನ್ನು ಕಳೆದುಕೊಂಡು ರಾಜ್ಯ ರಾಜಕಾರಣ ಬಡವಾಗಿದೆ’ ಎಂದು ಭಾವುಕವಾಗಿ ನುಡಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ‘ಸುರೇಶ ಅಂಗಡಿ ಜೊತೆಗಿನ ನಂಟು ಬಹಳ ಹಳೆಯದು. 2003ರಿಂದಲೂ ನನಗೆ ಪರಿಚಯ. ಅತ್ಯಂತ ಸೌಜನ್ಯ ವ್ಯಕ್ತಿಯಾಗಿದ್ದ ಅವರನ್ನು ಕಳೆದುಕೊಂಡು ತುಂಬಾ ನೋವಾಗಿದೆ’ ಎಂದು ಹೇಳಿದರು.

‘ನಾನು ಗದಗ ಜಿಲ್ಲಾಧಿಕಾರಿಯಾಗಿದ್ದಾಗ, ನೆರೆ ಬಂದು ಜನರಿಗೆ ತೊಂದರೆಯಾಗಿತ್ತು. ಅವರನ್ನು ಸಾಗಿಸಲು ವಾಹನ ಇರಲಿಲ್ಲ. ಹೀಗಾಗಿ ರೈಲು ಬಿಡುವಂತೆ ಸಚಿವರಿಗೆ ಮನವಿ‌ ಮಾಡಿದ್ದೆವು. ಕೇವಲ 2 ಗಂಟೆಯಲ್ಲಿ ರೈಲು ಬಿಡಿಸಿದ್ದರು. ಕೊರೊನಾ ನಡುವೆಯೂ ಅವರು ಸಾಕಷ್ಟು ಕೆಲಸ ಮಾಡಿದ್ದರು’ ಎಂದು ಸ್ಮರಿಸಿದರು.

ಅವರಿಲ್ಲದ ಮನೆಗೆ ಹೇಗೆ ಹೋಗಲಿ?

ನವದೆಹಲಿಯಲ್ಲಿ ಸುರೇಶ ಅಂಗಡಿ ಅಂತ್ಯಕ್ರಿಯೆ ನೆರವೇರಿಸಿದ ಬಳಿಕ ಕುಟುಂಬದವರು ಶುಕ್ರವಾರ ಬೆಳಿಗ್ಗೆ ಮನಗೆ ಬರುತ್ತಿದ್ದಂತೆಯೇ, ಅಕ್ರಂದನ ಮುಗಿಲು ಮುಟ್ಟಿತು.

ಕುಟುಂಬದವರು, ಸಂಬಂಧಿಗಳು, ಸಿಬ್ಬಂದಿ, ವಾಹನಗಳ ಚಾಲಕರು ಹಾಗೂ ಸಿಬ್ಬಂದಿ ಅಂಗಡಿ ಅವರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತರು.

‘ಅವರು ಇಲ್ಲದೆ ಮನೆಯೊಳಗೆ ಹೇಗೆ ಹೋಗಲಿ, ಅತ್ತೆಗೆ ಏನೆಂದು ಸಮಾಧಾನಪಡಿಸಲಿ, ಬರಿಗೈಯಲ್ಲಿ ಬಂದ್ಯಾ ಎಂದು ಕೇಳಿದರೆ ಏನೇಳಲಿ? ಎಂದು ಪತ್ನಿ ಮಂಗಳಾ ಮನೆ ಬಾಗಿಲಲ್ಲಿ ನಿಂತು ಮಗಳನ್ನು ಅಪ್ಪಿಕೊಂಡು ಕಣ್ಣೀರಿಟ್ಟರು. ಈ ದೃಶ್ಯ ನೆರೆದಿದ್ದವರ ಮನ ಕಲಕಿತು. ಪುತ್ರಿ ಶ್ರದ್ಧಾ, ಸ್ಫೂರ್ತಿ, ಮೊಮ್ಮಗಳು, ಅಳಿಯಂದಿರೆಲ್ಲರೂ ಕಣ್ಣೀರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.