ADVERTISEMENT

ಚಿಕ್ಕೋಡಿ: 60 ಬಡ ಮಕ್ಕಳ ಶೈಕ್ಷಣಿಕ ದತ್ತು ಪಡೆದ ಶಿಕ್ಷಕ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 3:12 IST
Last Updated 5 ಸೆಪ್ಟೆಂಬರ್ 2025, 3:12 IST
ವಿಶ್ವನಾಥ ಧುಮಾಳ
ವಿಶ್ವನಾಥ ಧುಮಾಳ   

ಚಿಕ್ಕೋಡಿ (ಬೆಳಗಾವಿ): ತಾಲ್ಲೂಕಿನ ನವಲಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವಿಶ್ವನಾಥ ಧುಮಾಳ ಪ್ರತಿ ವರ್ಷ 10 ಬಡ ಮಕ್ಕಳನ್ನು ದತ್ತು ಪಡೆದು ಶಿಕ್ಷಣ ಕೊಡಿಸುತ್ತಾರೆ. ಈವರೆಗೆ 60 ಬಡ ಮಕ್ಕಳನ್ನು ದತ್ತು ಪಡೆದಿದ್ದು, ಅವರ ಸಂಪೂರ್ಣ ಶೈಕ್ಷಣಿಕ ವೆಚ್ಚ ಭರಿಸಿದ್ದಾರೆ.

ಹೀಗೆ ದತ್ತು ಪಡೆದ ಮಕ್ಕಳಲ್ಲಿ ಶಾಲೆಯಿಂದ ಹೊರಗುಳಿದವರು, ದನ ಕಾಯುವವರು, ಬೆಟ್ಟ–ಗುಡ್ಡಗಳಲ್ಲಿ, ತೋಟದ ಮನೆಗಳಲ್ಲಿದ್ದವರು ಮತ್ತು ಅಲೆಮಾರಿಗಳ ಮಕ್ಕಳೇ ಹೆಚ್ಚು ಇದ್ದಾರೆ.

ಪ್ರತಿ ದಿನ ಒಂದು ಗಂಟೆ ಮುಂಚಿತವಾಗಿ ಶಾಲೆಗೆ ಬರುವ ವಿಶ್ವನಾಥ ಅವರು, ಮಕ್ಕಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುತ್ತಾರೆ. ನವೋದಯ ಶಾಲೆ, ಸೈನಿಕ ಶಾಲೆಗಳಿಗೆ ಸೇರಲು ಮಕ್ಕಳನ್ನು ತಯಾರು ಮಾಡುತ್ತಾರೆ.

ADVERTISEMENT

ಪ್ರತಿ ವರ್ಷ ಉಚಿತ ಬೇಸಿಗೆ ಶಿಬಿರ ಇರುತ್ತದೆ. ಸಂಗೀತ, ಅಭಿನಯ, ಸ್ಕೇಟಿಂಗ್ ತರಬೇತಿ, ಇಂಗ್ಲಿಷ್‌ ಭಾಷಾಭ್ಯಾಸ, ಕಂಪ್ಯೂಟರ್ ತರಬೇತಿಗಳನ್ನೂ ನಿರಂತರ ನಡೆಸುತ್ತಾರೆ.

‘ವಿಜ್ಞಾನ ಬೆಳವಣಿಗೆಗೆ ವಿಜ್ಞಾನಿಗಳ ಕೊಡುಗೆ, ‘ನುಡಿ ಕನ್ನಡ’, ‘ನಮ್ಮೂರಲ್ಲಿ ಗಾಂಧೀಜಿ’, ‘ಮಹಾಪರಿನಿರ್ವಾಣ’, ‘ಸಂತ ರೋಹಿದಾಸವಾಣಿ’ ಮುಂತಾದ ಕಿರು ಹೊತ್ತಿಗೆಗಳನ್ನು ಪ್ರಕಟಿಸಿದ ಈ ಶಿಕ್ಷಕ, ಗಡಿ ಭಾಗದ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸುತ್ತಾರೆ.

‘300 ವಿದ್ಯಾರ್ಥಿಗಳಿರುವ ನವಲಿಹಾಳ ಶಾಲೆಗೆ ವಿಶ್ವನಾಥ ಅವರು ಬಂದ ಬಳಿಕ ಗ್ರಾಮಸ್ಥರು ಮತ್ತು ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಸದಸ್ಯರೊಂದಿಗೆ ಸೇರಿ ಪಾಠೋಪಕರಣ, ಪೀಠೋಪಕರಣ ಖರೀದಿಸಿದ್ದಾರೆ. ಮೈದಾನ, ಕಾಂಪೌಂಡ, ಹಸಿರು ವನಗಳನ್ನು ಸಿದ್ಧಪಡಿಸಿದ್ದಾರೆ’ ಎಂದು ಗ್ರಾಮಸ್ಥರು ತಿಳಿಸಿದರು.

ಚಿಕ್ಕೋಡಿ ತಾಲ್ಲೂಕಿನ ನವಲಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಹಸಿರಿನಿಂದ ಕಂಗೊಳಿಸುತ್ತಿದೆ
ನಮ್ಮೂರಿನ ಸರ್ಕಾರಿ ಶಾಲೆ ಈಗ ಕಾನ್ವೆಂಟ್ ಶಾಲೆಗಳಿಗೆ ಸ್ಪರ್ಧೆ ಒಡ್ಡಿ ಮುನ್ನುಗ್ಗುತ್ತಿದೆ. ಶಿಕ್ಷಕ ವಿಶ್ವನಾಥ ಧುಮಾಳ ಅವರ ಶ್ರಮದ ಫಲವಿದು
ಶ್ರುತಿ ಸಂಜಯ ಚನ್ನಪಟ್ಟಣ ಅಧ್ಯಕ್ಷೆ ಎಸ್‌ಡಿಎಂಸಿ ನವಲಿಹಾಳ
ಸರ್ಕಾರಿ ಶಾಲೆ ಮಕ್ಕಳು ಯಾರಿಗೂ ಕಡಿಮೆ ಇರುವುದಿಲ್ಲ. ಅವರಿಗೆ ಆಪ್ತ ಮತ್ತು ಗುಣಮಟ್ಟದ ಬೋಧನೆ ಅಗತ್ಯ ಎಂಬುದು ನನ್ನ ನಂಬಿಕೆ
ವಿಶ್ವನಾಥ ಧುಮಾಳ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನವಲಿಹಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.