ಬೆಳಗಾವಿ: ‘ಕಾಂಗ್ರೆಸ್ ಬೆಳಗಾವಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಲಾಬಿ ಇಲ್ಲ. ನಾವು ಒಬ್ಬರ ಹೆಸರನ್ನೇ ಅಂತಿಮಗೊಳಿಸಿ ಹೈಕಮಾಂಡ್‌ಗೆ ಕಳುಹಿಸಿದ್ದೇವೆ. ಎಲ್ಲ ನಾಯಕರೂ ಸೇರಿಕೊಂಡು ಒಂದೇ ಹೆಸರು ಪ್ರಸ್ತಾಪ ಮಾಡಿದ್ದೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
‘ಜಿಲ್ಲಾಧ್ಯಕ್ಷರ ನೇಮಕದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಬೆಳಗಾವಿ ಅಧ್ಯಕ್ಷರ ನೇಮಕ ಪ್ರಕ್ರಿಯೆಯನ್ನು ಯಾರೂ ತಡೆಹಿಡಿದಿಲ್ಲ. ರಾಜ್ಯದಲ್ಲಿ 20 ಜಿಲ್ಲಾ ಘಟಕದ ಅಧ್ಯಕ್ಷರ ನೇಮಕ ಪ್ರಕ್ರಿಯೆ ಬಾಕಿ ಉಳಿದಿದೆ’ ಎಂದು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಬೆಳಗಾವಿಯಲ್ಲಿ ಈಚೆಗೆ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಸ್ಥಳೀಯ ನಾಯಕರನ್ನು ಕಡೆಗಣಿಸಲಾಯಿತೇ’ ಎಂಬ ಪ್ರಶ್ನೆಗೆ, ‘ಅಧಿವೇಶನದ ಶತಮಾನೋತ್ಸವ ಆಚರಣೆಯಲ್ಲಿ ಯಾರನ್ನೂ ಕಡೆಗಣಿಸಿಲ್ಲ. ಕೆಪಿಸಿಸಿ ಅಧ್ಯಕ್ಷರಾದ ಕಾರಣ ಅವರು ಮುಂದಾಳತ್ವ ವಹಿಸಿ ಕೆಲಸ ಮಾಡಿದ್ದಾರೆ. ಶತಮಾನೋತ್ಸವ ಸಮಿತಿ ಅಧ್ಯಕ್ಷರಾಗಿದ್ದ ಎಚ್.ಕೆ.ಪಾಟೀಲ ಅವರೂ ವಿವಿಧ ಸ್ಥಳಗಳಿಗೆ ಭೇಟಿ ಕೊಟ್ಟಿದ್ದಾರೆ. ನಮಗೆ ಒಪ್ಪಿಸಿದ ಜವಾಬ್ದಾರಿಯನ್ನು ನಾವೂ ನಿರ್ವಹಿಸಿದ್ದೇವೆ’ ಎಂದರು.
‘ಶತಮಾನೋತ್ಸವದಲ್ಲಿ ಡಿ.ಕೆ.ಶಿವಕುಮಾರ್ ಅವರೇ ಉತ್ಸವ ಮೂರ್ತಿಯಾದರಲ್ವ’ ಎಂಬ ಪ್ರಶ್ನೆಗೆ, ‘ಅವರು ಕೆಪಿಸಿಸಿ ಅಧ್ಯಕ್ಷ. ಹಾಗಾಗಿ ಅವರೇ ಉತ್ಸವ ಮೂರ್ತಿ ಆಗಬೇಕು. ಶತಮಾನೋತ್ಸವ ವಿಚಾರದಲ್ಲಿ ಅವರು ಹೈಜಾಕ್ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ನಕ್ಕರು.
ಸಂಪುಟ ಪುನರ್‌ರಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಸತೀಶ, ‘ಅನೇಕ ನಾಯಕರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಈ ಬಗ್ಗೆ ಪಕ್ಷದ ಹೈಕಮಾಂಡ್‌ನವರು, ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ನಿರ್ಣಯ ಕೈಗೊಳ್ಳುತ್ತಾರೆ. ಸದ್ಯಕ್ಕೆ ಅಂಥ ಯಾವುದೇ ಬೆಳವಣಿಗೆ ಇಲ್ಲ’ ಎಂದರು.
‘ಎಸ್‌ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆಗೆ ಕಾರಣವಾದ, ತಹಶೀಲ್ದಾರ ಬಸವರಾಜ ನಾಗರಾಳ ಅವರನ್ನು ಮತ್ತೆ ಅದೇ ಸ್ಥಾನಕ್ಕೆ ಸರ್ಕಾರ ನಿಯೋಜನೆ ಮಾಡಿದ್ದು ಸರಿಯಲ್ಲ’ ಎಂಬ ಸಂಸದ ಜಗದೀಶ ಶೆಟ್ಟರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸತೀಶ, ‘ತಹಶೀಲ್ದಾರ್ ನಾಗರಾಳ ಅವರನ್ನು ಸರ್ಕಾರ ಬದಲಿಸಿಲ್ಲ. ರಜೆ ಮೇಲೆ ತೆರಳಿದ್ದರು. ಈಗ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆ ಬಗ್ಗೆ ಜಿಲ್ಲಾಧಿಕಾರಿ ಮತ್ತು ಸರ್ಕಾರದ ಮಟ್ಟದಲ್ಲಿ ಕೇಳಬೇಕು’ ಎಂದರು.
‘ಜಾತಿಯ ಬಣ್ಣ ಕಟ್ಟಬೇಡಿ’
ಅನಗೋಳದ ಸಂಭಾಜಿ ಪ್ರತಿಮೆ ಅನಾವರಣ ವಿಷಯದಲ್ಲಿ ಗೊಂದಲ ಸೃಷ್ಟಿಯಾಗಿದೆಯೇ ಪ್ರಶ್ನೆಗೆ ಉತ್ತರಿಸಿದ ಸತೀಶ, ‘ಈ ವಿಚಾರದಲ್ಲಿ ಯಾವ ಗೊಂದಲವೂ ಇಲ್ಲ. ಪಾಲಿಕೆಯಲ್ಲಿ ಆಡಳಿತದಲ್ಲಿರುವ ಬಿಜೆಪಿಯವರೇ ಗೊಂದಲ ಮಾಡುತ್ತಿದ್ದಾರೆ. ಪ್ರತಿಮೆ ಪ್ರತಿಷ್ಠಾಪನೆಗೆ ಪಾಲಿಕೆ ಅನುದಾನ ಕೊಟ್ಟಿದೆ. ಕಾಮಗಾರಿ ಮುಗಿಯದ ಕಾರಣ, ಅನಾವರಣ ಕಾರ್ಯಕ್ರಮ ಮುಂದೂಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಜ.5ರಂದು ನಡೆಯಬೇಕಿದ್ದ ಕಾರ್ಯಕ್ರಮ ಮುಂದೂಡುವ ಕುರಿತಾಗಿ ಆಯುಕ್ತರು ಮೇಯರ್‌ಗೆ ಪತ್ರ ಬರೆದಿದ್ದಾರೆ’ ಎಂದರು.
‘ಪರಿಶಿಷ್ಟರು ಎಂಬ ಕಾರಣಕ್ಕೆ ಮೇಯರ್ ಸವಿತಾ ಕಾಂಬಳೆ ಅವರಿಂದ ಪ್ರತಿಮೆ ಅನಾವರಣ ಮಾಡಲು ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆಯೇ’ ಎಂಬ ಪ್ರಶ್ನೆಗೆ, ‘ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ನ್ಯಾಯಾಲಯದ ನಿರ್ದೇಶನದ ಜತೆಗೆ, ಶಿಷ್ಟಾಚಾರ ಪಾಲಿಸಬೇಕಿದೆ. ಕಾಮಗಾರಿ ಮುಗಿಸಲು ಒಂದು ತಿಂಗಳ ಸಮಯ ಕೇಳಲಾಗಿದೆ. ಆದರೆ, ಮೇಯರ್ ಅಧಿಕಾರವಧಿ ಇನ್ನೂ ಸಾಕಷ್ಟಿದೆ. ಹಾಗಾಗಿ ಅದಕ್ಕೆ ಜಾತಿಯ ಬಣ್ಣ ಕಟ್ಟುವ ಅಗತ್ಯವಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.