ಬೆಳಗಾವಿಯ ಹೊಸ ಗಾಂಧಿ ನಗರದಲ್ಲಿ ಬುಧವಾರ ಇಬ್ಬರು ಕಾರ್ಮಿಕರು, ಮಣ್ಣು ಕುಸಿದು ಮೃತಪಟ್ಟ ಜಾಗ
ಬೆಳಗಾವಿ: ಇಲ್ಲಿನ ಹೊಸ ಗಾಂಧಿ ನಗರದಲ್ಲಿ ಬುಧವಾರ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ವೇಳೆ ಮಣ್ಣು ಕುಸಿದ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೂಡಲಗಿ ತಾಲೂಕಿನ ಪಟಗುಂಡಿ ಗ್ರಾಮದ ಬಸವರಾಜ ಸರವಿ (38) ಹಾಗೂ ಶಿವಲಿಂಗ ಸರವಿ (20) ಮೃತಪಟ್ಟರು.
ಕರ್ನಾಟಕ ರಾಜ್ಯ ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆಯಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಹೊಸ ಗಾಂಧಿ ನಗರದ ಪೈ ರೆಸಾರ್ಟ್ ಹಿಂದಿನ ರಸ್ತೆಯ ಬದಿ ಮಣ್ಣು ಅಗೆಯುತ್ತಿದ್ದರು. ಮುಂಚೆ ಜೆಸಿಬಿಯಿಂದ ಅಗೆಯಲಾಗಿತ್ತು. ಪೈಪ್‌ಲೈನ್ ಅವಡಿಕೆಗೆ ಆಳವಾಗಿ ಅಗೆಯಲು ಕಾರ್ಮಿಕರು ಕೆಳಗೆ ಇಳಿದಿದ್ದರು. ಈ ವೇಳೆ ಮೇಲಿನಿಂದ ಮಣ್ಣು ಕುಸಿದು ಇಬ್ಬರೂ ಅದರಡಿ ಸಿಲುಕಿದರು. ಜತೆಗಿದ್ದ ಕಾರ್ಮಿಕರು ಹಾಗೂ ಸುತ್ತಲಿನ ಜನ ಸಹಾಯಕ್ಕೆ ಧಾವಿಸಿದರು. ಆದರೆ, ಮತ್ತಷ್ಟು ಮಣ್ಣು ಕುಸಿಯುವ ಭೀತಿಯಿಂದಾಗಿ ಯಾರೂ ಕೆಳಗೆ ಇಳಿಯುವ ಧೈರ್ಯ ತೋರಲಿಲ್ಲ.
ಕೆಲ ಹೊತ್ತಿನ ನಂತರ ಜೆಸಿಬಿಯಿಂದ ಮಣ್ಣು ಎತ್ತಲಾಯಿತು. ಕಾರ್ಮಿಕರನ್ನು ಹೊರಕ್ಕೆ ತೆಗೆದು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಅಷ್ಟೊತ್ತಿಗೆ ಇಬ್ಬರೂ ಪ್ರಾಣ ಕಳೆದುಕೊಂಡಿದ್ದರು.
ಮಾಳಮಾರುತಿ ಠಾಣೆ ಪೊಲೀಸರು ಸ್ಥಳದಲ್ಲಿದ್ದು ಜನರನ್ನು ನಿಯಂತ್ರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.