ADVERTISEMENT

ಚಿಕ್ಕೋಡಿ: ಜ. 28ರಂದು ಕೆಎಲ್‌ಇ ಶಾಲೆ ಉದ್ಘಾಟಿಸಲಿರುವ ಕೇಂದ್ರ ಸಚಿವ ಜೈಶಂಕರ್‌

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 12:57 IST
Last Updated 26 ಫೆಬ್ರುವರಿ 2024, 12:57 IST
<div class="paragraphs"><p>ಎಸ್‌. ಜೈಶಂಕರ್‌</p></div>

ಎಸ್‌. ಜೈಶಂಕರ್‌

   

ಬೆಳಗಾವಿ: ‘ಚಿಕ್ಕೋಡಿಯಲ್ಲಿ ನಿರ್ಮಿಸಿದ ಕೆಎಲ್‌ಇ ಶಾಲೆಯನ್ನು (ಸಿಬಿಎಸ್‌ಇ) ಫೆ.28ರಂದು ಬೆಳಿಗ್ಗೆ 10.30ಕ್ಕೆ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಉದ್ಘಾಟಿಸಲಿದ್ದಾರೆ’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಆಗಮಿಸುವರು. ಗೌರವ ಅತಿಥಿಗಳಾಗಿ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ಗಣೇಶ ಹುಕ್ಕೇರಿ, ಚಿಕ್ಕೋಡಿ ಪುರಸಭೆ ಮಾಜಿ ಅಧ್ಯಕ್ಷ ಪ್ರವೀಣ ಕಾಂಬಳೆ ಆಗಮಿಸುವರು. ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸುವರು’ ಎಂದರು.

ADVERTISEMENT

‘ಐದು ಎಕರೆಯಲ್ಲಿ 1.05 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಈ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಹೈಟೆಕ್‌ ದರ್ಜೆಯ ಶಿಕ್ಷಣಕ್ಕೆ ಅಗತ್ಯವಿರುವ ಅಂತರರಾಷ್ಟ್ರೀಯ ಗುಣಮಟ್ಟದ ಮೂಲಸೌಕರ್ಯ ಒದಗಿಸಲು ₹17 ಕೋಟಿ ವೆಚ್ಚ ಮಾಡಲಾಗಿದೆ. ವಿದೇಶಾಂಗ ಸಚಿವ ಜೈಶಂಕರ್‌ ಈ ಹಿಂದೆ ಐಎಫ್‌ಎಸ್ ಪ್ರೊಬೇಷನರ್ ಅವಧಿಯಲ್ಲಿದ್ದಾಗ, ಎಂಟು ತಿಂಗಳು ಚಿಕ್ಕೋಡಿಯಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಮಾಡಿದ್ದಾರೆ. ನಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಂತಸದಿಂದ ಒಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.

‘1916ರಲ್ಲಿ ಸ್ಥಾಪನೆಯಾದ ಕೆಎಲ್‌ಇ ಸಂಸ್ಥೆಯು ಶೈಕ್ಷಣಿಕ, ಆರೋಗ್ಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಜಾಗತಿಕ ಮನ್ನಣೆಗೆ ‍ಪಾತ್ರವಾಗಿದೆ. ಚಿಕ್ಕೋಡಿಯ ನೂತನ ಶಾಲೆಯಲ್ಲಿ ಕಂಪ್ಯೂಟರ್, ವಿಜ್ಞಾನ ಪ್ರಯೋಗಾಲಯಗಳು, ಡಿಜಿಟಲ್ ಸೌಲಭ್ಯ ಒಳಗೊಂಡ ಗ್ರಂಥಾಲಯ, ಉತ್ಕೃಷ್ಟ ದರ್ಜೆಯ ಕ್ರೀಡಾ ಸೌಕರ್ಯ, ಸಂಗೀತ ಮತ್ತು ಕಲೆಗಳಿಗೆ ತರಬೇತಿ ನೀಡುವ ಸೌಲಭ್ಯ ಒದಗಿಸಲಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ. 2020ರಲ್ಲೇ ಇದು ತನ್ನ ಶೈಕ್ಷಣಿಕ ಚಟುವಟಿಕೆ ಆರಂಭಿಸಿದ್ದು, ನರ್ಸರಿಯಿಂದ ಎಂಟನೇ ತರಗತಿಯವರೆಗೆ ಪ್ರಸ್ತುತ 400 ವಿದ್ಯಾರ್ಥಿಗಳು ಓದುತ್ತಿದ್ದಾರೆ’ ಎಂದು ಹೇಳಿದರು.

‘ಕೆಎಲ್‌ಇ ಸಂಸ್ಥೆಯು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ 15 ಸಿಬಿಎಸ್‌ಇ, 7 ರಾಜ್ಯ ಪಠ್ಯಕ್ರಮದ ಆಂಗ್ಲ ಮಾಧ್ಯಮ ಶಾಲೆಗಳನ್ನು ಮುನ್ನಡೆಸುತ್ತಿದೆ. 21 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ವಿವಿಧ ದೇಶಗಳಿಗೆ ಭೇಟಿ ನೀಡಿದಾಗ, ಭಾರತದ ಬೋಧನಾ ಪದ್ಧತಿಯೇ ಅತ್ಯುತ್ತಮವಾಗಿದೆ ಎಂಬುದನ್ನು ಗಮನಿಸಿದ್ದೇವೆ. ವಿದೇಶಿ ಶಾಲೆಗಳು ಹೆಚ್ಚಿನ ಕ್ರೀಡಾ ಸೌಲಭ್ಯ ಹೊಂದಿರಬಹುದು. ಆದರೆ, ನಮ್ಮ ಶೈಕ್ಷಣಿಕ ವ್ಯವಸ್ಥೆ ಉತ್ತಮವಾಗಿದೆ. ನಮಗೆ ವಿದೇಶಿ ಶಾಲೆಗಳ ಸಹಭಾಗಿತ್ವ ಅಗತ್ಯವಿಲ್ಲ’ ಎಂದರು.

ಕೆಎಲ್‌ಇ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ, ಆಜೀವ ಸದಸ್ಯ ಡಾ.ಸುನೀಲ ಜಲಾಲಪುರೆ ಇದ್ದರು.

‘₹3,600 ಕೋಟಿ ಬಜೆಟ್‌’

‘ಕೆಎಲ್‌ಇ ಸಂಸ್ಥೆಯ 2023–24ನೇ ಸಾಲಿನ ಬಜೆಟ್ ₹3,600 ಕೋಟಿ ಇದೆ. ಬೆಳಗಾವಿಯಲ್ಲಿ ಹೊಸ ಕ್ಯಾನ್ಸರ್‌ ಆಸ್ಪತ್ರೆ, ಹುಬ್ಬಳ್ಳಿಯಲ್ಲಿ ಆಸ್ಪತ್ರೆ, ಮುಂಬೈಯಲ್ಲಿ ಶಾಲೆ ಮತ್ತು ಇತರೆ ಸೌಲಭ್ಯಗಳನ್ನು ಶೀಘ್ರ ಉದ್ಘಾಟಿಸಲಾಗುವುದು. ರಾಜ್ಯದಲ್ಲಿ ಕೃಷಿ ಕಾಲೇಜು ತೆರೆಯಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಇನ್ನೂ ಅನುಮತಿ ಸಿಕ್ಕಿಲ್ಲ. ಮಹಾರಾಷ್ಟ್ರದಲ್ಲಿ ಪ್ರತಿ ಜಿಲ್ಲೆಯಲ್ಲಿ 2ರಿಂದ 3 ಬಿ.ಎಸ್ಸಿ(ಕೃಷಿ) ಕಾಲೇಜುಗಳಿವೆ. ಹಾಗಾಗಿ ಕರ್ನಾಟಕದ ಮಕ್ಕಳು ಅಲ್ಲಿಗೆ ಓದಲು ಹೋಗುತ್ತಿದ್ದಾರೆ’ ಎಂದು ಪ್ರಭಾಕರ ಕೋರೆ ತಿಳಿಸಿದರು.

ಕೆಎಲ್‌ಇ ಶಾಲೆಗಳ ಸಂಯೋಜಕಿ ಡಾ.ಪ್ರೀತಿ ದೊಡವಾಡ, ‘ನಾವು ಕೃತಕ ಬುದ್ಧಿಮತ್ತೆ(ಎ.ಐ) ತಂತ್ರಜ್ಞಾನವನ್ನು ಕೆಎಲ್‌ಇ ಸಂಸ್ಥೆಯ ಎಲ್ಲ ಶಾಲೆಗಳಲ್ಲಿ ಇದೇ ಶೈಕ್ಷಣಿಕ ವರ್ಷ ಅಳವಡಿಸಿಕೊಂಡಿದ್ದೇವೆ. ಈಗ 9ನೇ ತರಗತಿ ಮೇಲ್ಪಟ್ಟವರು ಇದರ ಸದುಪಯೋಗ ಪಡೆಯುತ್ತಿದ್ದಾರೆ. ಎ.ಐ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳು ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿ ವಿವಿಧ ವಿಷಯ ಕಲಿಯಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.