ADVERTISEMENT

ವಿಧಾನಪರಿಷತ್‌ ಚುನಾವಣೆ: ವೆಚ್ಚಕ್ಕೆ ಮಿತಿ ಇಲ್ಲ, ಅಕ್ರಮವಾದರೆ ಕ್ರಮ

ಚುನಾವಣಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಮೇ 2022, 13:13 IST
Last Updated 13 ಮೇ 2022, 13:13 IST
ವಾಯವ್ಯ ಶಿಕ್ಷಕರು ಮತ್ತು ಪದವೀಧರರ ಮತಕ್ಷೇತ್ರದ ವಿಧಾನಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿಸಂಹಿತೆ ಜಾರಿಯಾದ್ದರಿಂದ ಬೆಳಗಾವಿಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಬಹುದಾದ ಬ್ಯಾನರ್, ಕಟೌಟ್‌ಗಳನ್ನು ಮಹಾನಗರಪಾಲಿಕೆ ಸಿಬ್ಬಂದಿ ಶುಕ್ರವಾರ ತೆರವುಗೊಳಿಸಿದರು.
ವಾಯವ್ಯ ಶಿಕ್ಷಕರು ಮತ್ತು ಪದವೀಧರರ ಮತಕ್ಷೇತ್ರದ ವಿಧಾನಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿಸಂಹಿತೆ ಜಾರಿಯಾದ್ದರಿಂದ ಬೆಳಗಾವಿಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಬಹುದಾದ ಬ್ಯಾನರ್, ಕಟೌಟ್‌ಗಳನ್ನು ಮಹಾನಗರಪಾಲಿಕೆ ಸಿಬ್ಬಂದಿ ಶುಕ್ರವಾರ ತೆರವುಗೊಳಿಸಿದರು.   

ಬೆಳಗಾವಿ: ‘ಕರ್ನಾಟಕ ಪಶ್ಚಿಮ ಶಿಕ್ಷಕರ ಹಾಗೂ ವಾಯವ್ಯ ಪದವೀಧರರ ಮತ್ತು ಶಿಕ್ಷಕರ ಮತಕ್ಷೇತ್ರದಿಂದ ವಿಧಾನಪರಿಷತ್‌ಗೆ ಜೂನ್‌ 13ರಂದು ನಡೆಯಲಿರುವ ಚುನಾವಣೆಯಲ್ಲಿ ಅಭ್ಯರ್ಥಿಗಳ ವೆಚ್ಚಕ್ಕೆ ಮಿತಿ ನಿಗದಿಪಡಿಸಿಲ್ಲ’ ಎಂದು ಚುನಾವಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿಗಳ ಪ್ರಕಾರ ಚುನಾವಣೆ ನಡೆಸಲಾಗುವುದು. ಮತದಾರರ ಮೇಲೆ ಪ್ರಭಾವ ಬೀರುವಂತಹ ಚಟುವಟಿಕೆಗಳು ಹಾಗೂ ಅಕ್ರಮ ವೆಚ್ಚದ ಮೇಲೆ ನಿಗಾ ವಹಿಸಲಾಗುವುದು. ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ವಾಯವ್ಯ ಪದವೀಧರರ ಮತ್ತು ಶಿಕ್ಷಕರ ಮತಕ್ಷೇತ್ರಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಾಗೂ ಪಶ್ಚಿಮ ಶಿಕ್ಷಕರ ಮತಕ್ಷೇತ್ರಕ್ಕೆ ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ವೇಲೆ ಐವರಿಗಷ್ಟೆ ಅವಕಾಶ ಇರುತ್ತದೆ’ ಎಂದು ಹೇಳಿದರು.

ADVERTISEMENT

‘ಸ್ಪರ್ಧಿಸುವವರ ವಯಸ್ಸು 30 ವರ್ಷಕ್ಕಿಂತ ಕಡಿಮೆ ಇರಬಾರದು. ರಾಜ್ಯದ ಯಾವುದಾದರೂ ವಿಧಾನಸಭಾ ಕ್ಷೇತ್ರದ ಮತದಾರರಾಗಿರಬೇಕು. ಯಾವುದೇ ಕಾನೂನಿನಲ್ಲಿ ಅನರ್ಹರಾಗಿರಬಾರದು. ಕ್ಷೇತ್ರಕ್ಕೆ ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿದ ಶಿಕ್ಷಕರು ಮತ್ತು ಪದವೀಧರರು ಮಾತ್ರ ಅರ್ಹ ಮತದಾರರಾಗಿರುತ್ತಾರೆ’ ಎಂದು ಸ್ಪಷ್ಟಪಡಿಸಿದರು.

‘ಮೇ 19ರಂದು ಅಧಿಸೂಚನೆ ಹೊರಬೀಳಲಿದ್ದು, ಅಂದಿನಿಂದಲೇ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಸಾಮಾನ್ಯ ಪ್ರವರ್ಗದ ಉಮೇದುವಾರರು ₹ 10ಸಾವಿರ, ಪರಿಶಿಷ್ಟ ಜಾತಿ/ಪಂಗಡದವರು ₹ 5ಸಾವಿರ ಠೇವಣಿಯನ್ನು ನಾಮಪತ್ರ ಸಲ್ಲಿಕೆ ಕಾಲಕ್ಕೆ ನೀಡಬೇಕು. ನಾಮಪತ್ರ ಸಲ್ಲಿಕೆಗೆ ಮೇ 26 ಕೊನೆಯ ದಿನವಾಗಿದ್ದು, ಅಂದು ಮಧ್ಯಾಹ್ನ 3ರೊಳಗೆ ಎಲ್ಲ ಪ್ರಮಾಣಪತ್ರಗಳನ್ನು ಸಲ್ಲಿಸಬೇಕಾಗುತ್ತದೆ’ ಎಂದು ವಿವರ ನೀಡಿದರು.

‘ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕಕ್ಕಿಂತ 10 ದಿನಗಳ ಮುಂಚಿನವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ನಿಗದಿತ ದಿನಾಂಕದ ಬಳಿಕ ಸಲ್ಲಿಕೆಯಾಗುವ ಅರ್ಜಿಗಳನ್ನು ಈ ಚುನಾವಣಾ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಪರಿಗಣಿಸುವುದಿಲ್ಲ. ಮೇ 16ರೊಳಗೆ ಅರ್ಜಿ ಸಲ್ಲಿಸಬೇಕು’ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ ಇದ್ದರು.

ಮತದಾರರ ವಿವರ

ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರ

ಜಿಲ್ಲೆ;ಸಂಖ್ಯೆ

ಉತ್ತರಕನ್ನಡ;3,612

ಧಾರವಾಡ;6,271

ಹಾವೇರಿ;4,680

ಗದಗ;3,284

ಒಟ್ಟು;17,847

ವಾಯವ್ಯ ಶಿಕ್ಷಕರ ಕ್ಷೇತ್ರ

ಬೆಳಗಾವಿ;13,191

ಬಾಗಲಕೋಟೆ;4,813

ವಿಜಯಪುರ;6,299

ಒಟ್ಟು;24,303

ವಾಯವ್ಯ ಪದವೀಧರರ ಕ್ಷೇತ್ರ

ಬೆಳಗಾವಿ;40,179

ಬಾಗಲಕೋಟೆ;26,820

ವಿಜಯಪುರ;17,255

ಒಟ್ಟು;84,254

(ಮೇ 13ರವರೆಗಿನ ಮಾಹಿತಿ)

ಮತಗಟ್ಟೆಗಳ ವಿವರ

ಪಶ್ಚಿಮ ಶಿಕ್ಷಕರ ಮತಕ್ಷೇತ್ರ

ಜಿಲ್ಲೆ;ಮೂಲ ಮತಗಟ್ಟೆಗಳು;ಹೆಚ್ಚುವರಿ;ಒಟ್ಟು

ಧಾರವಾಡ;21;00;21

ಹಾವೇರಿ;26;00;26

ಉತ್ತರ ಕನ್ನಡ;15;00;15

ಗದಗ;14;01;15

ವಾಯವ್ಯ ಶಿಕ್ಷಕರು/ ಪದವೀಧರರ ಕ್ಷೇತ್ರ

ಬೆಳಗಾವಿ;78;04;82

ಬಾಗಲಕೋಟೆ;32;06;38

ವಿಜಯಪುರ;40;00;40

ಒಟ್ಟು;150;10;160

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.