ADVERTISEMENT

ಜುಲೈ 4ರಂದು ವಿಟಿಯು ಘಟಿಕೋತ್ಸವ: ಮೂವರು ಸಾಧಕರಿಗೆ ‘ಡಾಕ್ಟರ್‌ ಆಫ್‌ ಸೈನ್ಸ್‌’

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 11:28 IST
Last Updated 1 ಜುಲೈ 2025, 11:28 IST
<div class="paragraphs"><p>ಡಾ.ವಿ.ನಾರಾಯಣನ್‌,&nbsp;ಪ್ರಶಾಂತ್‌ ಪ್ರಕಾಶ್‌ ಹಾಗೂ&nbsp;ಸಿ.ಎಸ್‌.ಸುಂದರ್‌ರಾಜು</p></div>

ಡಾ.ವಿ.ನಾರಾಯಣನ್‌, ಪ್ರಶಾಂತ್‌ ಪ್ರಕಾಶ್‌ ಹಾಗೂ ಸಿ.ಎಸ್‌.ಸುಂದರ್‌ರಾಜು

   

ಬೆಳಗಾವಿ: ‘ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ 25ನೇ ವಾರ್ಷಿಕ ಘಟಿಕೋತ್ಸವ(ಭಾಗ–1) ಜುಲೈ 4ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ’ ಎಂದು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯ ಅತಿಥಿಯಾದ ಕೇಂದ್ರ ಸರ್ಕಾರದ ಪ್ರಧಾನ ವೈದ್ಯಕೀಯ ಸಲಹೆಗಾರ ಪ್ರೊ.ಅಜಯ್‌ಕುಮಾರ್‌ ಸೂದ್‌ ಘಟಿಕೋತ್ಸವ ಭಾಷಣ ಮಾಡುವರು. ಥಾವರಚಂದ್ ಗೆಹ್ಲೋತ್‌ ಅಧ್ಯಕ್ಷತೆ ವಹಿಸುವರು. ಗೌರವ ಅತಿಥಿಯಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಆಗಮಿಸುವರು’ ಎಂದು ತಿಳಿಸಿದರು.

ADVERTISEMENT

ಮೂವರಿಗೆ ಗೌರವ ಡಾಕ್ಟರೇಟ್‌:

‘ವಿಜ್ಞಾನ, ತಾಂತ್ರಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಮೂವರಿಗೆ ಈ ಬಾರಿ ‘ಡಾಕ್ಟರ್‌ ಆಫ್ ಸೈನ್ಸ್‌’ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧ್ಯಕ್ಷ ಡಾ.ವಿ.ನಾರಾಯಣನ್‌, ಎಕ್ಸೆಲ್‌ ಇಂಡಿಯಾ ಸಂಸ್ಥಾಪಕ ಪ್ರಶಾಂತ್‌ ಪ್ರಕಾಶ್‌ ಮತ್ತು ಬೆಂಗಳೂರಿನ ಎಟ್ರಿಯ ವಿಶ್ವವಿದ್ಯಾಲಯದ ಕುಲಾಧಿಪತಿ ಸಿ.ಎಸ್‌.ಸುಂದರ್‌ರಾಜು ಗೌರವಕ್ಕೆ ಭಾಜನವಾಗುವರು’ ಎಂದು ವಿವರಿಸಿದರು.

60,052 ಪದವಿ ಪ್ರದಾನ:

‘ಈ ಸಲದ ಘಟಿಕೋತ್ಸವದಲ್ಲಿ 60,052 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಈ ಪೈಕಿ 58,561 ವಿದ್ಯಾರ್ಥಿಗಳಿಗೆ(ಸ್ವಾಯತ್ತ ಮಹಾವಿದ್ಯಾಲಯದ 20,707 ವಿದ್ಯಾರ್ಥಿಗಳು) ಬಿ.ಇ, 117 ವಿದ್ಯಾರ್ಥಿಗಳಿಗೆ ಬಿ.ಟೆಕ್‌, 10 ವಿದ್ಯಾರ್ಥಿಗಳಿಗೆ ಬಿ.ಪ್ಲ್ಯಾನ್‌, 1,040 ವಿದ್ಯಾರ್ಥಿಗಳಿಗೆ(ಸ್ವಾಯತ್ತ ಮಹಾವಿದ್ಯಾಲಯದ 234 ವಿದ್ಯಾರ್ಥಿಗಳು) ಬಿ.ಆರ್ಕ್‌, 24 ವಿದ್ಯಾರ್ಥಿಗಳಿಗೆ ಬಿ.ಎಸ್ಸಿ(ಆನರ್ಸ್‌) ಪದವಿ ಪ್ರದಾನ ಮಾಡಲಾಗುವುದು. ಅಲ್ಲದೆ, 262 ಪಿಎಚ್‌.ಡಿ ಮತ್ತು ಎರಡು ಇಂಟಿಗ್ರೇಟೇಡ್‌ ಡ್ಯುಯಲ್‌ ಡಿಗ್ರಿ ನೀಡಲಾಗುವುದು’ ಎಂದು ತಿಳಿಸಿದರು.

ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್‌.ಶ್ರೀನಿವಾಸ ಇತರರಿದ್ದರು.

ನಮ್ರತಾ ಅವರಿಗೆ 13 ಚಿನ್ನದ ಪದಕ

ಬೆಂಗಳೂರಿನ ಆಕ್ಸ್‌ಫರ್ಡ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನ ಸಿವಿಲ್‌ ವಿಭಾಗದ ನಮ್ರತಾ ಸಿ.ಪ್ರಭು 13 ಚಿನ್ನದ ಪದಕ ಗಳಿಸಿದ್ದಾರೆ.

ಬೆಂಗಳೂರಿನ ಆರ್‌.ವಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್‌ ವಿಭಾಗದ ನವ್ಯಶ್ರೀ ಗಣಪಿಶೆಟ್ಟಿ 11, ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಮೆಕ್ಯಾನಿಕಲ್‌ ವಿಭಾಗದ ಕಾರ್ತಿಕ್‌ ಎಲ್‌. 7, ಮೈಸೂರಿನ ಜಿಎಸ್‌ಎಸ್‌ಎಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಫಾರ್‌ ವುಮೆನ್‌ನ ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ವಿಭಾಗದ ಕವನಾ ಎ. 7, ಬೆಂಗಳೂರಿನ ದಯಾನಂದ ಸಾಗರ ಅಕಾಡೆಮಿ ಆಫ್ ಟೆಕ್ನಾಲಜಿ ಅಂಡ್‌ ಮ್ಯಾನೇಜ್‌ಮೆಂಟ್‌ನ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಮೋಹಿನಿ ವಿ. 6 ಪದಕ ಪಡೆದಿದ್ದಾರೆ.

ಬೆಂಗಳೂರಿನ ಆರ್‌ಎನ್‌ಎಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್‌ ಅಂಡ್‌ ಇನ್ಸ್ಟ್ರುಮೆಂಟೇಷನ್‌ ವಿಭಾಗದ ಜಾಹ್ನವಿ ಕೆ. ಮತ್ತು ಮೂಡಬಿದರೆಯ ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಅಂಡ್‌ ಎಂಜಿನಿಯರಿಂಗ್‌ನ ಇನ್‌ಫಾರ್ಮೇಷನ್‌ ಸೈನ್ಸ್‌ ವಿಭಾಗದ ಮೇದಿನಿ ಎಸ್‌.ರಾವ್‌ ತಲಾ 4 ಹಾಗೂ ಬೆಂಗಳೂರಿನ ಈಸ್ಟ್‌ ವೆಸ್ಟ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನ ಏರೋನಾಟಿಕಲ್‌ ವಿಭಾಗದ ರಕ್ಷಿತಾ ಎಂ. 2 ಪದಕ ಗಳಿಸಿದ್ದಾರೆ.

ಮೂಡಬಿದರೆಯ ಕಾಲೇಜಿಗೆ 16 ರ್‍ಯಾಂಕ್‌:

‘ಮೂಡಬಿದರೆಯ ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಅಂಡ್‌ ಎಂಜಿನಿಯರಿಂಗ್‌ ಸ್ನಾತಕ ವಿಭಾಗದಲ್ಲಿ 16, ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ 13, ಬೆಂಗಳೂರಿನ ಎಸಿಎಸ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌, ಬೆಂಗಳೂರಿನ ಬಿಎಂಎಸ್‌ ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌, ಬೆಂಗಳೂರಿನ ಈಸ್ಟ್‌ ವೆಸ್ಟ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿ ಮತ್ತು ಬಂಟ್ವಾಳದ ಕೆನರಾ ಎಂಜಿನಿಯರಿಂಗ್‌ ಕಾಲೇಜು ತಲಾ 10 ರ್‍ಯಾಂಕ್‌ ಪಡೆದಿವೆ’ ಎಂದು ವಿದ್ಯಾಶಂಕರ್‌ ಹೇಳಿದರು.

‘ಪಠ್ಯಕ್ರಮ ಬದಲಾವಣೆ’

‘ 2025–26ನೇ ಸಾಲಿನಿಂದಲೇ ಸ್ನಾತಕ ಕೋರ್ಸ್‌ಗಳ ಪಠ್ಯಕ್ರಮ ಬದಲಿಸಿದ್ದೇವೆ. ಪ್ರಸ್ತುತ ದಿನಗಳಲ್ಲಿ ಕೈಗಾರಿಕೆಗಳು ಬಯಸುವ, ಕೌಶಲ ಆಧಾರಿತವಾದ ಈ ಪಠ್ಯಕ್ರಮ ದೇಶದಲ್ಲೇ ಮಾದರಿಯಾಗಿದೆ. ಕೈಗಾರಿಕೋದ್ಯಮಿಗಳು ಸೇರಿ ವಿವಿಧ ರಂಗದವರ ಜತೆಗೆ ಚರ್ಚಿಸಿ ಇದನ್ನು ರೂಪಿಸಿದ್ದೇವೆ. ಇದನ್ನು ಬೋಧಿಸುವವರಿಗೂ ತರಬೇತಿ ಕಾರ್ಯಕ್ರಮ ನಡೆಸುತ್ತಿದ್ದೇವೆ’ ಎಂದು ಎಸ್‌.ವಿದ್ಯಾಶಂಕರ ಹೇಳಿದರು.

‘ಸಂಶೋಧನೆ ಮತ್ತು ನಾವೀನ್ಯತೆಗೆ ಒತ್ತು ನೀಡಲಾಗುತ್ತಿದ್ದು, ಹೊಸ ಬೋಧನಾ ಆಯಾಮಗಳ ಬಗ್ಗೆ ಚಿಂತನೆ ನಡೆಸಿದ್ದೇವೆ. ವಿದೇಶಿ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಔದ್ಯೋಗಿಕ ರಂಗದ ದಿಗ್ಗಜರೊಂದಿಗೆ ಇಂಟರ್ನ್‌ಶಿಪ್‌, ತರಬೇತಿ ಮತ್ತು ಅಧ್ಯಾಪಕರು/ವಿದ್ಯಾರ್ಥಿ ವಿನಿಯಮದಂಥ ಯೋಜನೆ ಹಾಕಿಕೊಂಡಿದ್ದೇವೆ’ ಎಂದರು.

‘ಅಂತರರಾಷ್ಟ್ರೀಯ ಶೈಕ್ಷಣಿಕ ವೇಳಾಪಟ್ಟಿ ಮಾದರಿಯಲ್ಲೇ, ನಮ್ಮ ವೇಳಾಪಟ್ಟಿಯನ್ನೂ ರೂಪಿಸಿದ್ದೇವೆ. ತ್ವರಿತವಾಗಿ ಫಲಿತಾಂಶ ಪ್ರಕಟಿಸಿ, ಉನ್ನತ ಶಿಕ್ಷಣಕ್ಕಾಗಿ ವಿದೇಶ ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದೇವೆ’ ಎಂದು ತಿಳಿಸಿದರು.

‘ಪ್ರತಿ ಶೈಕ್ಷಣಿಕ ವರ್ಷದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದವರಿಗಾಗಿ ಪ್ರತ್ಯೇಕವಾಗಿ ಎರಡು ಘಟಿಕೋತ್ಸವ ನಡೆಸುತ್ತಿದ್ದೇವೆ’ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.