ADVERTISEMENT

ವಿಟಿಯು ಘಟಿಕೋತ್ಸವ: ಸಾಧಿಸುವ ಛಲವಿದ್ದರೆ, ಕಷ್ಟಗಳೂ ಗೌಣ

ವಿಟಿಯು ಘಟಿಕೋತ್ಸವದಲ್ಲಿ ಸಂಭ್ರಮಿಸಿದ ವಿದ್ಯಾರ್ಥಿನಿಯರು

ಇಮಾಮ್‌ಹುಸೇನ್‌ ಗೂಡುನವರ
Published 8 ಫೆಬ್ರುವರಿ 2025, 23:43 IST
Last Updated 8 ಫೆಬ್ರುವರಿ 2025, 23:43 IST
ಬೆಳಗಾವಿಯ ವಿಟಿಯುದಲ್ಲಿ ಶನಿವಾರ ನಡೆದ 24ನೇ ಘಟಿಕೋತ್ಸವದಲ್ಲಿ (ಭಾಗ–2) ಸಾಧಕ ವಿದ್ಯಾರ್ಥಿಗಳು ಚಿನ್ನದ ಪದಕ ಮತ್ತು ಪ್ರಮಾಣಪತ್ರಗಳನ್ನು ಪ್ರದರ್ಶಿಸಿದರು
ಬೆಳಗಾವಿಯ ವಿಟಿಯುದಲ್ಲಿ ಶನಿವಾರ ನಡೆದ 24ನೇ ಘಟಿಕೋತ್ಸವದಲ್ಲಿ (ಭಾಗ–2) ಸಾಧಕ ವಿದ್ಯಾರ್ಥಿಗಳು ಚಿನ್ನದ ಪದಕ ಮತ್ತು ಪ್ರಮಾಣಪತ್ರಗಳನ್ನು ಪ್ರದರ್ಶಿಸಿದರು   

ಬೆಳಗಾವಿ: ‘ಹಾವೇರಿ ಜಿಲ್ಲೆಯ ಗುತ್ತಲ ನನ್ನೂರು. 70 ಕಿ.ಮೀ ದೂರದ ದಾವಣಗೆರೆಯಲ್ಲಿ ಇರುವ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿಗೆ ಬಸ್‌ನಲ್ಲಿ ಹೋಗುತ್ತಿದ್ದೆ. ಬೆಳಿಗ್ಗೆ ಹೊರಟರೆ, ಸಂಜೆ ಮನೆಗೆ ಮರಳುತ್ತಿದ್ದೆ. ಸಮಯ ವ್ಯರ್ಥ ಮಾಡದೇ ಬಸ್‌ನಲ್ಲೂ ಓದುತ್ತಿದ್ದೆ. ಕಷ್ಟಪಟ್ಟು ಓದಿದೆ. ಚಿನ್ನದ ಪದಕ ಸಿಕ್ಕಿದೆ’

ಇಲ್ಲಿ ಶನಿವಾರ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) 24ನೇ ಘಟಿಕೋತ್ಸವದಲ್ಲಿ (ಭಾಗ–2) ಎಂ.ಟೆಕ್‌ (ಪರಿಸರ ಎಂಜಿನಿಯರಿಂಗ್) ವಿದ್ಯಾರ್ಥಿನಿ ಭೂಮಿಕಾ ಕುಬಸದ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡಿದ್ದು ಹೀಗೆ. ಅವರ ತಂದೆ ವೀರಣ್ಣ ಸಾರಿಗೆ ಸಂಸ್ಥೆಯಲ್ಲಿ ಸಂಚಾರ ನಿಯಂತ್ರಕ. ತಾಯಿ ಮೀನಾಕ್ಷಿ ಗೃಹಿಣಿ. 

‘ಹಾಸ್ಟೆಲ್‌ನಲ್ಲಿ ಇದ್ದು, ಓದಬಹುದಿತ್ತು. ಆದರೆ, ಕುಟುಂಬದವರ ಜೊತೆಗಿದ್ದು, ಓದುವ ಆಸೆ ನನ್ನದಾಗಿತ್ತು. ಸಾಧಿಸುವ ಛಲವಿದ್ದರೆ ಎಲ್ಲಾ ಕಷ್ಟಗಳೂ ಗೌಣವಾಗುತ್ತವೆ’ ಎಂದು ಭೂಮಿಕಾ ತಿಳಿಸಿದರು.

ADVERTISEMENT

ಸರ್ಕಾರಿ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವರು ಸಿದ್ಧತೆ ನಡೆಸಿದ್ದಾರೆ. ಪಿಎಚ್‌.ಡಿ ಮಾಡುವ ಗುರಿಯನ್ನೂ ಹೊಂದಿದ್ದಾರೆ.

ಬಂಗಾರದ ಫಸಲು

‘ನನ್ನ ಊರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ. ತಂದೆ ಉಮೇಶ ಕೃಷಿಕ. ₹2 ಲಕ್ಷ ಶೈಕ್ಷಣಿಕ ಸಾಲ, ವಿದ್ಯಾರ್ಥಿ ವೇತನದ ಹಣದ ನೆರವಿನಿಂದ ಓದಿದೆ. ತರಗತಿಯಲ್ಲಿ ಸ್ಪಷ್ಟವಾಗಿ ಪಾಠ ಆಲಿಸಿದೆ ಮತ್ತು ಪರೀಕ್ಷೆಗೆ ಏಕಾಗ್ರತೆಯಿಂದ ಓದಿದೆ. ನಾಲ್ಕು ಚಿನ್ನದ ಪದಕ ಸಿಕ್ಕಿದ್ದು ಖುಷಿ ತಂದಿದೆ. ಹೆತ್ತವರ ಕಷ್ಟಕ್ಕೆ ಫಲ ಸಿಕ್ಕಿದೆ’ ಎಂದು ಬೆಂಗಳೂರಿನ ಸಾಯಿ ವಿದ್ಯಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎಂಬಿಎ ವಿಭಾಗದ ವಿದ್ಯಾರ್ಥಿನಿ ಶ್ವೇತಾ ಎಚ್‌.ಯು ತಿಳಿಸಿದರು. ಕೆಎಎಸ್‌ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಸಿದ್ಧತೆಯಲ್ಲಿ ಅವರು ತೊಡಗಿದ್ದಾರೆ.

ಸರ್ಕಾರಿ ನೌಕರಿಯ ಕನಸು

ಮೂರು ಚಿನ್ನದ ಪದಕಗಳನ್ನು ಗಳಿಸಿರುವ ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎಂಸಿಎ ವಿಭಾಗದ ವಿದ್ಯಾರ್ಥಿನಿ ರಚನಾ ಆರ್‌. ಅವರು, ‘ವಿದ್ಯಾರ್ಥಿ ವೇತನದ ಹಣದಲ್ಲೇ ನಾನು ಅಧ್ಯಯನ ಕೈಗೊಂಡಿದ್ದು, ಸತತ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಈ ಸಾಧನೆಯನ್ನು ಉಪನ್ಯಾಸಕ ಬಳಗ ಮತ್ತು ತಾಯಿಗೆ ಅರ್ಪಿಸುವೆ. ಹೆಚ್ಚಿನ ಶಿಕ್ಷಣ ಪಡೆದು, ಸರ್ಕಾರಿ ನೌಕರಿ ಗಳಿಸಿ ಮಕ್ಕಳಿಗೆ ನೆರವಾಗುವ ಆಸೆ ಇದೆ’ ಎಂದರು.

ರಾಜ್ಯಪಾಲ ಥಾವರಚಂದ ಗೆಹ್ಲೋತ್‌, ಕನ್ಯಾಕುಮಾರಿಯ ನೂರುಲ್ ಇಸ್ಲಾಂ ಉನ್ನತ ಶಿಕ್ಷಣ ಕೇಂದ್ರದ ಕುಲಪತಿ ಟೆಸ್ಸಿ ಥಾಮಸ್, ವಿಟಿಯು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ ಅವರು ಸಾಧಕ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಿದರು. 

ಘಟಿಕೋತ್ಸವದಲ್ಲಿ 7,194 ಎಂಬಿಎ, 3,784 ಎಂಸಿಎ, 1,313 ಎಂ.ಟೆಕ್‌, 83 ಎಂ.ಆರ್ಕ್, 23 ಎಂ.ಪ್ಲ್ಯಾನ್‌, 425 ಪಿಎಚ್.ಡಿ, 3 ಎಂ.ಎಸ್ಸಿ(ಎಂಜಿನಿಯರಿಂಗ್‌) ಬೈ ರಿಸರ್ಚ್ ಹಾಗೂ 5 ಇಂಟಿಗ್ರೇಟೆಡ್ ಡ್ಯುಯಲ್‌ ಡಿಗ್ರಿ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.