ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ಅಂತಿಮ ಸೆಮಿಸ್ಟರ್ ಬಿಇ, ಬಿ.ಟೆಕ್, ಬಿ.ಪ್ಲಾನ್, ಬಿ.ಆರ್ಕ್, ಬಿ.ಎಸ್ಸಿ (ಆನರ್ಸ್) ಪರೀಕ್ಷೆಯ ಫಲಿತಾಂಶಗಳನ್ನು ಪರೀಕ್ಷೆ ಮುಗಿದ ಒಂದೇ ಗಂಟೆಯೊಳಗೆ ಪ್ರಕಟಿಸಿದೆ.
‘ಮೇ 30ರಂದು ಸಂಜೆ 5.30ಕ್ಕೆ ಪರೀಕ್ಷೆ ಮುಗಿದಿದ್ದು, 6.30ಕ್ಕೆ ಫಲಿತಾಂಶ ಪ್ರಕಟಿಸಲಾಗಿದೆ. ಈ ಹಿಂದೆ ಮೂರು ತಾಸಿನ ಒಳಗೇ ಫಲಿತಾಂಶ ಪ್ರಕಟಿಸುವ ಮೂಲಕ ವಿಟಿಯು ಸಾಧನೆ ತೋರಿತ್ತು. ಈಗ ಅದನ್ನು ಒಂದು ತಾಸಿನೊಳಗೇ ಸಾಧ್ಯಗೊಳಿಸಿದೆ. ಶುಕ್ರವಾರ ಅಂತಿಮ ಸೆಮಿಸ್ಟರ್‌ನ 50,321 ವಿದ್ಯಾರ್ಥಿಗಳು ವಾಟ್ಸ್‌ಆ್ಯಪ್‌ನಲ್ಲಿ ಫಲಿತಾಂಶ ಪಡೆದಿದ್ದಾರೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್. ವಿದ್ಯಾಶಂಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘2019ರಲ್ಲಿ 43,662 ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಎರಡು ದಿನಗಳ ಒಳಗಾಗಿ ನೀಡಲಾಗಿತ್ತು. 2020ರಿಂದ ಮೂರು ತಾಸಿನೊಳಗೆ ಫಲಿತಾಂಶ ನೀಡಲಾಗಿತ್ತು. ಈ ಸಮಯವನ್ನು ಮತ್ತೂ ಕಡಿಮೆ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಹುಡುಕಾಟ ಮತ್ತು ಮುಂದಿನ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರಯೋಜನವಾಗುತ್ತದೆ. ಮೇ 31ರಿಂದಲೇ ವಿದ್ಯಾರ್ಥಿಗಳು ತಾತ್ಕಾಲಿಕ ಪದವಿ ಪ್ರಮಾಣ ಪತ್ರಗಳಿಗೆ (ಪಿಡಿಸಿ) ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು’ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.