ಸವದತ್ತಿ: ದಕ್ಷಿಣ ಭಾರತದ ಶ್ರದ್ಧಾ ಕೇಂದ್ರವಾಗಿರುವ ಇಲ್ಲಿನ ಯಲ್ಲಮ್ಮನ ಗುಡ್ಡಕ್ಕೆ ಈಗ ಶುಕ್ರದೆಸೆ ಆರಂಭವಾಗಿದೆ. ಗುಡ್ಡದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ಸಾಹ ತೋರಿವೆ. ಆದರೆ, ಗುಡ್ಡದಲ್ಲಿ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾವಲುಗಳ ಸಾಲೇ ಇದೆ. ಅದರಲ್ಲೂ ಮುಖ್ಯವಾಗಿ ಎದುರಾಗಿರುವುದು ಒತ್ತುವರಿ ತೆರವು...
ಹೌದು. ಇಡೀ ಯಲ್ಲಮ್ಮನ ಗುಡ್ಡದಲ್ಲಿ ಪ್ರತಿ ಹೆಜ್ಜೆಹೆಜ್ಜೆಗೂ ಜಾಗ ಒತ್ತುವರಿ ಮಾಡಿಕೊಳ್ಳಲಾಗಿದೆ. ಕಳೆದ ಒಂದು ದಶಕದಿಂದಲೂ ಒತ್ತುವರಿ ತೆರವಿನ ಬಗ್ಗೆ ಮಾತುಗಳು ಕೇಳಿಬರುತ್ತಲೇ ಇವೆ. ಅಧಿಕಾರಿಗಳು ಆಗಾಗ ಕಾರ್ಯಾಚರಣೆಗೆ ಇಳಿಯುತ್ತಾರೆ. ಅದು ಎಂಟೇ ದಿನಗಳಲ್ಲಿ ಮತ್ತೆ ಮರೆತುಹೋಗಿ, ವ್ಯಾಪಾರಿಗಳು ಮತ್ತೆ ಒತ್ತುವರಿ ಮಾಡಿಕೊಳ್ಳುತ್ತಾರೆ. ಈ ಮೇಲಾಟ ಮೇಲಿಂದ ಮೇಲೆ ನಡೆದೇ ಇದೆ.
ಸದ್ಯ ಯಲ್ಲಮನಗುಡ್ಡ ಅಭಿವೃದ್ಧಿಗೆ ₹100 ಕೋಟಿ ಮಂಜೂರಾಗಿದೆ. ಅದಕ್ಕಿಂತ ಮುಖ್ಯವಾಗಿ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಕೂಡ ರಚಿಸಲಾಗಿದೆ. ಇದರಡಿ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಲಾಗಿದೆ. ಗುಡ್ಡದ ಮೇಲೆ ಏನೆಲ್ಲ ಅಭಿವೃದ್ಧಿ ಮಾಡಬೇಕು, ಭಕ್ತರಿಗೆ, ವ್ಯಾಪಾರಿಗಳಿಗೆ ಏನೆಲ್ಲ ಸೌಕರ್ಯ ಕಲ್ಪಿಸಬೇಕು ಎಂಬುದರ ಬಗ್ಗೆ ಈಗಾಗಲೇ ನೀಲಿ ನಕಾಶೆ ಸಿದ್ಧಪಡಿಸಲಾಗಿದೆ. ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಹರಿದುಬರುತ್ತಿರುವ ಕೋಟ್ಯಂತರ ಹಣ ಕೂಡ ಇದಕ್ಕೆ ನರವಾಗಿದೆ.
ಪ್ರಾಥಮಿಕ ಹೆಜ್ಜೆ ಎಂಬಂತೆ ಪ್ರಾಧಿಕಾರದ ಆಯುಕ್ತ ಅಶೋಕ ದುಡಗುಂಟಿ ಅವರ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ಯಾವುದೇ ಒತ್ತಡಕ್ಕೂ ಮಣಿಯದ ಈ ಅಧಿಕಾರಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಗುಡ್ಡದಲ್ಲಿ ಶಿಸ್ತು ಮೂಡಿಸಲು ಸಾಕಷ್ಟು ಕ್ರಮಗಳನ್ನೂ ಕೈಗೊಂಡಿದ್ದಾರೆ. ಅದರಲ್ಲಿ ಒತ್ತು ತೆರವೂ ಒಂದು.
ಮುಗಿಯದ ವಾಹನ ಸವಾರರ ಗೋಳು: ಜಾತ್ರೆ ಸಂದರ್ಭದಲ್ಲಿ 10 ಕಿಲೋ ಮೀಟರ್‌ಗಳವರೆಗೆ ವಾಹನಗಳ ಸಂಚಾರ ದಟ್ಟಣೆ ಆಗುತ್ತದೆ. ನಿಯಂತ್ರಿಸಲು ಚತುಷ್ಪಥ ರಸ್ತೆ ನಿರ್ಮಾಣದ ಆದ್ಯತೆಯೂ ಪ್ರಾಧಿಕಾರದ ಮುಂದಿದೆ. ಆದರೆ, ಪ್ರತಿ ಬಾರಿ ನಡೆಯುವ ಹುಣ್ಣಿಮೆ ಸಂದರ್ಭದಲ್ಲಿ ನಾಲ್ಕೂ ದಿಕ್ಕುಗಳಲ್ಲಿ ಸಂಚಾರ ಸಂಕಷ್ಟ ಹೆಚ್ಚಾಗುತ್ತಲೇ ಇದೆ.
ಉಗರಗೋಳ, ಹಿರೇಕುಂಬಿ, ಚುಳಕಿ ಸೇರಿ ಸುತ್ತಲಿನ ಗ್ರಾಮಗಳಲ್ಲದೇ ಸ್ಥಳೀಯ ಜನರು ಯಲ್ಲಮ್ಮ ದೇವಸ್ಥಾನದ ವ್ಯಾಪಾರ ನೆಚ್ಚಿ ಬದುಕು ಕಟ್ಟಿಕೊಂಡಿದ್ದಾರೆ. ಈ ಜನರಿಗೆ ದೇವಸ್ಥಾನವೇ ಆರ್ಥಿಕ ಶಕ್ತಿಯಾಗಿದೆ. ಗುಡ್ಡದ ಪರಿಸರದಲಿ ನೂರಾರು ಗೂಡಂಗಡಿಗಳಿದ್ದು, ಅಮ್ಮನ ಭಕ್ತರಿಗೆ ಪೂಜಾ ಸಾಮಗ್ರಿಗಳಿಂದ ಊಟ, ಉಪಾಹಾರ, ಉಳಿದುಕೊಳ್ಳವ ವ್ಯವಸ್ಥೆ ಸಹಿತ ನೂರಾರು ಚಿಕ್ಕಚಿಕ್ಕ ಗೂಡಂಗಡಿಗಳನ್ನು ಹಾಕಿ ವಹಿವಾಟು ನಡೆಸಿದ್ದಾರೆ.
ಮೂರು ದಶಕಗಳ ವ್ಯಾಜ್ಯ: ಯಲ್ಲಮ್ಮ ದೇವಸ್ಥಾನ ಮತ್ತು ಉಗರಗೋಳ ಗ್ರಾಮ ಪಂಚಾಯಿತಿ ನಡುವೆ 30 ವರ್ಷಗಳಿಂದ ಜಾಗೆ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯವಿದೆ. ಮೂಲತಃ ಉಗರಗೋಳ ಪಂಚಾಯಿತಿ ವ್ಯಾಪ್ತಿಗೆ ಒಳ ಪಡುವ ದೇವಸ್ಥಾನ ದಶಕಗಳ ಹಿಂದೆ ಟ್ರಸ್ಟ್ ಸ್ಥಾಪನೆಯಾಗಿ ಆಡಳಿತ ಮಂಡಳಿ ಮತ್ತು ಜಿಲ್ಲಾಧಿಕಾರಿ ಸುಪರ್ದಿಗೆ ಹೋಗಿದೆ. ಹಿಂದಿನ ಜಿಲ್ಲಾಧಿಕಾರಿಯಿಂದ ಆದ ಗೊಂದಲ ಇಂದಿಗೂ ಬಗೆಹರಿದಿಲ್ಲ. ಗುಡ್ಡದ ಪರಿಸರದಲ್ಲಿ ದೇವಸ್ಥಾನ, ಉಗರಗೋಳ ಪಂಚಾಯಿತಿ ಮತ್ತು ಲಿಂಗರಾಜ ಟ್ರಸ್ಟ್ ಆಸ್ತಿಗಳಿದ್ದು, ಇವುಗಳ ಪೈಕಿ ಒಂದಕ್ಕೂ ಗಡಿ ಇಲ್ಲ.
ಇವರೇನಂತಾರೆ?
ಚೈನ್ ಗೇಟ್ 80 ಅಡಿಯ ರಸ್ತೆ ಸವದತ್ತಿ– ಹಂಚಿನಾಳ ರಸ್ತೆ ಉಗರಗೋಳ ರಸ್ತೆ ಜಮದಗ್ನಿ ರಸ್ತೆ ಸೇರಿ ಎಲ್ಲೆಡೆ ತೆರವು ನಡೆಸಲಾಗಿದೆ. ಶೇ 70ರಷ್ಟು ಈಗಾಗಲೇ ಪೂರ್ಣಗೊಂಡಿದೆ. ಇನ್ನೂ ತೆರವು ಕಾರ್ಯ ಮುನ್ನಡೆಯಲಿದೆ. ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಹಾಗೂ ದೇವಸ್ಥಾನದ ಅಭಿವೃದ್ಧಿಗೆ ಒತ್ತುವರಿ ತೆರವು ಅನಿವಾರ್ಯವಾಗಿದೆ.
–ಆಶೋಕ ದುಡಗುಂಟ ಪ್ರಾಧಿಕಾರ ಕಾರ್ಯದರ್ಶ
______
ಈಚೆಗೆ ಅಧಿಕಾರಿ ಮತ್ತು ಪೊಲೀಸರಿಗೆ ಘೇರಾವ್ ಹಾಕಿ ಅತಿಕ್ರಮಣ ತೆರವು ಕಾರ್ಯಾಚರಣೆ ತಡೆಯಲು ಪ್ರಯತ್ನಿಸಲಾಗಿತ್ತು. ಆದರೆ ತೆರವು ಮಾಡಲಾಗಿದೆ. ದೇವಸ್ಥಾನದ ಅಧಿಕಾರಿಗಳ ಕೋರಿಕೆ ಮೇರೆಗೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.
–ಡಾ.ಭೀಮಾಶಂಕರ ಗುಳೇದ ಎಸ್ಪಿ
______
ವ್ಯಾಪಾರದಿಂದಲೇ ಇಲ್ಲಿ ನೂರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ ಇದೀಗ ಅಭಿವೃದ್ಧಿ ನೆಪದಲ್ಲಿ ಬಡ ಕುಟಂಬಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಮಹಿಳೆಯರು ಮಕ್ಕಳು ಎನ್ನದೇ ಎಲ್ಲರ ಮೇಲೆ ಹಲ್ಲೆ ನಡೆಸಿ ದರ್ಪ ತೋರುತ್ತಿದ್ದಾರೆ. ಜೊತೆಗೆ ಇಲ್ಲಿನ ಬಂಜಾರ ಸಮುದಾಯದ ಸಂತ ಸೇವಾಲಾಲ ರಿಕ್ಷಾ ನಿಲ್ದಾಣದ ನಾಮಫಲಕವನ್ನು ಕನಿಷ್ಠ ಸೌಜನ್ಯವಿಲ್ಲದೇ ತೆರವು ಮಾಡಿ ಧ್ವಜ ಕಿತ್ತೆಸೆಯಲಾಗಿದೆ. ಇದು ಖಂಡನೀಯ.
–ರಾಮಾಚಾರಿ ಲಮಾಣಿ ವ್ಯಾಪರಸ್ಥರ ಪ್ರಮುಖ
______
ಶತಮಾನಗಳಿಂದ ಉಗರಗೋಳ ಯಲ್ಲಮ್ಮನ ತಾಂಡಾ ಮತ್ತು ಹರ್ಲಾಪೂರ ಗ್ರಾಮಗಳ ಜನರು ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಉಗರಗೋಳದ 1097 ಎಕೆರೆ ಯಲ್ಲಮ್ಮ ದೇವಸ್ಥಾನದ 88 ಎಕೆರೆ ಜಾಗೆ ಕುರಿತು ಗಡಿ ಗುರುತಿಸಿದ ನಂತರ ತೆರವು ಮುಂದುವರೆಸಬೇಕು.
–ಮಂಜುನಾಥ ಕಾಳಪ್ಪನವರ ಗ್ರಾ.ಪಂ ಅಧ್ಯಕ್ಷ ಉಗರಗೋಳ
______
ದೇವಸ್ಥಾನದ ಸುತ್ತಲಿನ ಗೂಡಂಗಡಿಗಳನ್ನು ತೆರವು ಕಾರ್ಯ ನಡೆದಿದ್ದು ಅಂಗಡಿಕಾರರು ಸ್ವತಃ ತಾವೇ ಅಂಗಡಿಗಳ ತೆರವು ಮಾಡಿ ಸಹಕರಿಸಿದ್ದಾರೆ. ಸದ್ಯಕ್ಕೆ ತೆರವು ಅನಿವಾರ್ಯವಾಗಿದೆ. ಭಕ್ತರಿಗೆ ಶಾಂತಚಿತ್ತದಿಂದ ಅಮ್ಮನ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗುವುದು. ವ್ಯಾಪಾರಸ್ಥರನ್ನು ಕಡೆಗಣಿಸುವುದಿಲ್ಲ.
–ಎಂ.ಎನ್. ಹೆಗ್ಗನ್ನವರ ತಹಶೀಲ್ದಾರ
ಕಾಲಮಿತಿಯಲ್ಲಿ ಅಭಿವೃದ್ಧಿ ಆಗುವುದೇ?
‘ಯಲ್ಲಮ್ಮನ ಗುಡ್ಡದಲ್ಲಿ ಭಕ್ತರ ಅನುಕೂಲಕ್ಕಾಗಿ ಮೂಲಸೌಕರ್ಯ ಕಲ್ಪಿಸುವ ಸಮಗ್ರ ಯೋಜನೆ ಸಿದ್ಧ ಗೊಂಡಿದ್ದು ಕಾಲಮಿತಿಯಲ್ಲಿ ಅನುಷ್ಠಾ ನಗೊಳಿಸಬೇಕು’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ ಅವರು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕಟ್ಟಪ್ಪಣೆ ಮಾಡಿದ್ದಾರೆ. ಆದರೆ ಸದ್ಯ ನಡೆದ ಕಾರ್ಯಾಚರಣೆಯ ರೂಪ ನೋಡಿದರೆ ಕಾಲಮಿತಿಯಲ್ಲಿ ಎಲ್ಲವೂ ಮುಗಿಯುವುದೇ ಎಂಬ ಅನುಮಾನ ಸಚಿವರಿಗೂ ಇದೆ.
‘ಗೌರವ ಕೊಟ್ಟು ತೆರವು ಮಾಡಿ’
ಈಚೆಗೆ ಗೂಡಂಗಡಿಗಳ ತೆರವು ಮಾಡಲು ಮುಂದಾದ ಅಧಿಕಾರಿ ಹಾಗೂ ಜನರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಅಧಿಕಾರಿಯೊಬ್ಬ ಅವಾಚ್ಯ ಪದ ಬಳಸಿ ನಿಂದಿಸಿದ್ದಾರೆ ಎಂದು ಆರೋಪಿಸಿ ಲಂಬಾಣಿ ಸಮುದಾಯದ ಜನ ಧರಣಿ ಕೂಡ ನಡೆಸಿದರು. 80 ಅಡಿ ರಸ್ತೆಯಲ್ಲಿ ತೆರವು ಕಾರ್ಯಾಚರಣೆ ನಡೆದಿತ್ತು. ಕೆಲವರು ಸ್ವಯಂಪ್ರೇರಣೆಯಿಂದ ತೆರವಿಗೆ ಸಹಕರಿಸಿದರು. ಕೆಲವರು ಅಧಿಕಾರಿಗಳ ಜತೆಗೆ ವಾಗ್ವಾದಕ್ಕೆ ಇಳಿದರು. ಅಧಿಕಾರಿ ಅಗೌರವ ತೋರಿದ್ದಾರೆ ಎಂಬ ಕಾರಣ ಸಮುದಾಯದ ಹಲವಾರು ಜನ ಧರಣಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.