ADVERTISEMENT

ಉಗರಗೋಳ: ಯಲ್ಲಮ್ಮನಗುಡ್ಡದಲ್ಲಿ ಬನದ ಹುಣ್ಣಿಮೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 13:21 IST
Last Updated 3 ಜನವರಿ 2026, 13:21 IST
<div class="paragraphs"><p>ಬನದ ಹುಣ್ಣಿಮೆ ಪ್ರಯುಕ್ತ ಬೆಳಗಾವಿ ಜಿಲ್ಲೆಯ ಉಗರಗೋಳ ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಶನಿವಾರ ನಡೆದ ಬೃಹತ್ ಜಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.</p></div>

ಬನದ ಹುಣ್ಣಿಮೆ ಪ್ರಯುಕ್ತ ಬೆಳಗಾವಿ ಜಿಲ್ಲೆಯ ಉಗರಗೋಳ ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಶನಿವಾರ ನಡೆದ ಬೃಹತ್ ಜಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.

   

ಉಗರಗೋಳ: ಸಮೀಪದ ಯಲ್ಲಮ್ಮನಗುಡ್ಡ ಶನಿವಾರ, ಬನದ ಹುಣ್ಣಿಮೆ ಪ್ರಯುಕ್ತ ಬೃಹತ್ ಜಾತ್ರೆಗೆ ಸಾಕ್ಷಿಯಾಯಿತು. ಮೈಕೊರೆಯುವ ಚಳಿ ಮಧ್ಯೆಯೂ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು, ಶ್ರದ್ಧೆಯಿಂದ ಧಾರ್ಮಿಕ ಆಚರಣೆ ಕೈಗೊಂಡರು.

ಈ ಜಾತ್ರೆಗೆ ಕರ್ನಾಟಕಕ್ಕಿಂತ ಮಹಾರಾಷ್ಟ್ರದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ‘ಎಲ್ಲರ ಅಮ್ಮ’ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ADVERTISEMENT

ಜಾತ್ರೆಗೂ ಒಂದು ದಿನ ಮುಂಚೆಯೇ ಗುಡ್ಡದತ್ತ ಭಕ್ತರ ದಂಡು ಹರಿದುಬಂತು. ಶನಿವಾರ ನಸುಕಿನ ಹೊತ್ತಿಗೆ ಇಡೀ ಗುಡ್ಡದ ಪರಿಸರ ಭಕ್ತರಿಂದ ಕಿಕ್ಕಿರಿದು ತುಂಬಿತ್ತು. ‘ಉಧೋ ಉಧೋ ಯಲ್ಲಮ್ಮ ನಿನ್ಹಾಲ್ಕ ಉಧೋ...’ ಎಂಬ ಜೈಕಾರ ಮುಗಿಲು ಮುಟ್ಟಿತ್ತು.

ಶನಿವಾರ ಬೆಳಿಗ್ಗೆ ಮತ್ತು ಸಂಜೆ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ನೆರವೇರಿತು. ನಸುಕಿನಿಂದಲೇ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವಿ ದರ್ಶನ ಪಡೆದರು.

ಜೋಗುಳಬಾವಿ ಹಾಗೂ ಯಲ್ಲಮ್ಮನಗುಡ್ಡದ ಎಣ್ಣೆ ಹೊಂಡದಲ್ಲಿ ಭಕ್ತರು ಪವಿತ್ರಸ್ನಾನ ಮಾಡಿದರು. ಪುರುಷರು ಮತ್ತು ಮಹಿಳೆಯರಿಗೆ ಸ್ನಾನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ನಂತರ ರಸ್ತೆಬದಿ ಮತ್ತು ಗುಡ್ಡದ ವಿಶಾಲವಾದ ಪರಿಸರದಲ್ಲಿ ನೈವೇದ್ಯ ಸಿದ್ಧಪಡಿಸಿ, ಪರಡಿ ತುಂಬಿ ಭಕ್ತಿ ಸಮರ್ಪಿಸಿದರು.

ಜೋಗತಿಯರ ನೃತ್ಯ, ಜಾನಪದ ಕಲಾತಂಡಗಳ ಪ್ರದರ್ಶನ ಭಕ್ತರನ್ನು ಸೆಳೆಯಿತು. ಯಲ್ಲಮ್ಮನ ಇತಿಹಾಸ ಸಾರುವ ಗೀತೆಗಳು ಮತ್ತು ಭಕ್ತಿಗೀತೆಗಳಿಗೆ ಯುವಜನರು ಉತ್ಸಾಹದಿಂದ ಹೆಜ್ಜೆಹಾಕಿದರು. ಭಂಡಾರದಲ್ಲಿ ಮಿಂದೆದ್ದ ಯುವಜನರು, ದೇವಸ್ಥಾನದ ಮೇಲೂ ಭಂಡಾರ ಹಾರಿಸಿ ಸಂಭ್ರಮಿಸಿದರು.

ತೆಂಗಿನಕಾಯಿ, ಕರ್ಪೂರ, ಕುಂಕುಮ–ಭಂಡಾರ ಸೇರಿದಂತೆ ವಿವಿಧ ಅಂಗಡಿಗಳಲ್ಲಿ ಪೂಜಾ ಸಾಮಗ್ರಿಗಳ ಮಾರಾಟ ಜೋರಾಗಿತ್ತು. ಚೌಕಾಸಿ ಮಧ್ಯೆಯೂ ಜನರು ವಿವಿಧ ವಸ್ತುಗಳ ಖರೀದಿಗೆ ಮುಗಿಬಿದ್ದಿರುವುದು ಕಂಡುಬಂತು.

ಸಂಚಾರ ಸಮಸ್ಯೆ:

ಈ ವರ್ಷವೂ ಜಾತ್ರೆಯನ್ನು ಸಂಚಾರ ಸಮಸ್ಯೆ ಬಿಟ್ಟುಬಿಡದೆ ಕಾಡಿತು. ಕೆಲ ಸವಾರರು ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸಿದ ಪರಿಣಾಮ ಯಲ್ಲಮ್ಮನಗುಡ್ಡ–ಉಗರಗೋಳ ಮಾರ್ಗದಲ್ಲಿ ಸಂಚಾರ ಸಮಸ್ಯೆ ತಲೆದೋರಿತು. ಮೂರ್ನಾಲ್ಕು ಕಿ.ಮೀ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಯಲ್ಲಮ್ಮನಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಉಗರಗೋಳ ಮಾರ್ಗದಲ್ಲಿ ಟ್ರಾಫಿಕ್‌ ಸಮಸ್ಯೆ ಉಂಟಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.