
ಯಲ್ಲಮ್ಮನಗುಡ್ಡ (ಬೆಳಗಾವಿ): ಕುಂಕುಮ–ಭಂಡಾರ ಜಾತ್ರೆ, ಹಸಿರು ಬಳೆಗಳ ಜಾತ್ರೆ ಎಂದೆಲ್ಲ ಕರೆಯಲ್ಪಡುವ ಯಲ್ಲಮ್ಮನಗುಡ್ಡದ ಭಾರತ ಹುಣ್ಣಿಮೆ ಜಾತ್ರೆ ‘ಎತ್ತಿನಬಂಡಿಗಳ ಜಾತ್ರೆ’ ಎಂದೂ ಹೆಸರಾಗಿದೆ. ಪ್ರಸ್ತುತ ಸಾಕಷ್ಟು ವಾಹನಗಳ ಸೌಲಭ್ಯವಿದ್ದರೂ, ಭಕ್ತರು ಎತ್ತಿನ ಬಂಡಿಯಲ್ಲಿಯೇ ಗುಡ್ಡಕ್ಕೆ ಬರುವ ಪದ್ಧತಿ ಇಂದಿಗೂ ರೂಢಿಯಲ್ಲಿದೆ.
ಯಲ್ಲಮ್ಮನಗುಡ್ಡದಲ್ಲಿ ವರ್ಷದ 12 ಹುಣ್ಣಿಮೆಗಳಲ್ಲೂ ಜಾತ್ರೆ ನಡೆಯುತ್ತದೆ. ಆದರೆ, ಫೆಬ್ರುವರಿ 1ರಂದು ನಡೆಯುವ ಭಾರತ ಹುಣ್ಣಿಮೆ ಜಾತ್ರೆ ಎಲ್ಲಕ್ಕಿಂತ ದೊಡ್ಡದು. ಇದರಲ್ಲಿ ಪಾಲ್ಗೊಳ್ಳಲು ದೇಶದ ವಿವಿಧೆಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳ ಭಕ್ತರು ಬಂಡಿಗಳಲ್ಲಿ ಬರುತ್ತಾರೆ. ಗುಡ್ಡಕ್ಕೆ ತೆರಳುವ ಮಾರ್ಗದಲ್ಲಿ ಚಕ್ಕಡಿಗಳ ಸಾಲು ಕಾಣುತ್ತದೆ.
‘ಪ್ರತಿ ವರ್ಷ 20 ಟ್ರ್ಯಾಕ್ಟರ್, 15 ಎತ್ತಿನ ಬಂಡಿಗಳಲ್ಲಿ ಬರುತ್ತೇವೆ. ಪೂರ್ವಜರ ಕಾಲದಿಂದ ಈ ಸಂಪ್ರದಾಯವಿದೆ. ಯಾವ ವಾಹನದಲ್ಲಿ ಬಂದರೂ ಈ ಖುಷಿ ಸಿಗದು’ ಎಂದು ಗೋಕಾಕ ತಾಲ್ಲೂಕಿನ ಹಿರೇನಂದಿಯ ರೈತ ಮಲ್ಲಿಕಾರ್ಜುನ ಮೂಲಿಮನಿ ‘ಪ್ರಜಾವಾಣಿ’ಗೆ ತಿಳಿಸಿದರು.
ಇನ್ನೂ ಹಲವು ಭಕ್ತರು ಟಂಟಂ, ಟ್ರ್ಯಾಕ್ಟರ್ ಮತ್ತಿತರ ವಾಹನಗಳಲ್ಲಿ ಗುಡ್ಡಕ್ಕೆ ಬರುತ್ತಾರೆ. ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯೇ ಹೆಚ್ಚಿದೆ.
ಫೆಬ್ರುವರಿ 15ರ ಮಹಾಶಿವರಾತ್ರಿಯವರೆಗೆ ಈ ಜಾತ್ರೆಯು ನಡೆಯಲಿದೆ. ಗುಡ್ಡಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಲಂಕೃತ ಬಂಡಿಗಳು ಬಂದು ಗ್ರಾಮೀಣ ಸೊಗಡು ಹರಡಲಿವೆ.
‘48 ಚಕ್ಕಡಿಗಳಲ್ಲಿ ಬಂದಿದ್ದೇವೆ’
‘ಎಷ್ಟೇ ಸಿರಿವಂತರಿರಲಿ ಬಡವರಿರಲಿ ಬಂಡಿಗಳಲ್ಲೇ ತಪ್ಪದೆ ಗುಡ್ಡಕ್ಕೆ ಬರುತ್ತೇವೆ. ಎಷ್ಟು ದೊಡ್ಡ ಹುದ್ದೆಯಲ್ಲಿದ್ದವರೂ ಇದರಲ್ಲಿ ಭಾಗಿಯಾಗುತ್ತಾರೆ. ಈ ಬಾರಿ 48 ಚಕ್ಕಡಿಗಳೊಂದಿಗೆ ಗುಡ್ಡಕ್ಕೆ ಬಂದಿದ್ದೇವೆ’ ಎಂದು ಯರಗಟ್ಟಿ ತಾಲ್ಲೂಕಿನ ಕಡಬಿಯ ರೈತರು ಹೇಳಿದರು.
ಮನೆಯಲ್ಲಿರುವ ಎಲ್ಲರೂ ಸೇರಿ ಬಂಡಿಗಳಲ್ಲಿ ಗುಡ್ಡಕ್ಕೆ ಬರುತ್ತೇವೆ. ಆಯಾ ಮಾರ್ಗದ ದೇವಸ್ಥಾನ ನದಿದಂಡೆ ಮೇಲೆ ರಾತ್ರಿ ಬಿಡಾರ ಹೂಡುತ್ತೇವೆ. ಅಲ್ಲಿಯೇ ಅಡುಗೆ ಸಿದ್ಧಪಡಿಸಿ ಭೋಜನ ಸೇವಿಸುತ್ತೇವೆ.– ಸಿದ್ದಪ್ಪ ಹಾದಿಮನಿ ಭಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.