ಹತ್ಯೆಯಾದ ಹನುಮಂತ ಗೋಪಾಲ ತಳವಾರ; ಒಳ ಚಿತ್ರದಲ್ಲಿ ಬಂಧಿತ ಆರೋಪಿಗಳು ಕ್ರಮವಾಗಿ ಬಸವರಾಜ ತಳವಾರ, ಬಾಪು ಶೇಖ್, ಈರಪ್ಪ ಹಡಗಿನಾಳ, ಸಚಿನ ಕಂಟೆನ್ನವರ
ಬೆಳಗಾವಿ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಕಲ್ಲೋಳಿಯಲ್ಲಿ ಜೀವವಿಮೆಯ ₹50 ಲಕ್ಷ ಹಣಕ್ಕಾಗಿ ಸ್ವಂತ ತಮ್ಮನೇ ತನ್ನ ಸಹಚರರೊಂದಿಗೆ ಸೇರಿ ಅಣ್ಣನ ಕೊಲೆ ಮಾಡಿದ ಪ್ರಕರಣವನ್ನು ಘಟಪ್ರಭಾ ಠಾಣೆ ಪೊಲೀಸರು ಭೇದಿಸಿದ್ದಾರೆ.
ಕಲ್ಲೋಳಿಯ ಹನುಮಂತ ಗೋಪಾಲ ತಳವಾರ (35) ಕೊಲೆಯಾದವರು. ಇವರ ತಮ್ಮ ಬಸವರಾಜ ತಳವಾರ, ಸಂಗಡಿಗರಾದ ಬಾಪು ಶೇಖ್, ಈರಪ್ಪ ಹಡಗಿನಾಳ ಮತ್ತು ಸಚಿನ ಕಂಟೆನ್ನವರ ಬಂಧಿತರು.
‘ನ.7ರಂದು ಮೂಡಲಗಿ– ಕಲ್ಲೋಳಿ ರಸ್ತೆಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಅದು ಕೊಳೆತ ಸ್ಥಿತಿಯಲ್ಲಿತ್ತು. ಮರಣೋತ್ತರ ಪರೀಕ್ಷೆ ನಡೆಸಿದಾಗ, ಇದು ಸಹಜ ಸಾವಲ್ಲ ಎಂದು ವೈದ್ಯರು ಸಂಶಯ ವ್ಯಕ್ತಪಡಿಸಿದ್ದರು. ಇದು ಹನುಮಂತ ಅವರ ಮೃತದೇಹವೆಂದು ನಂತರ ತಿಳಿಯಿತು. ಅವರ ಜತೆಗೆ ಹೋಗಿದ್ದವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದಾಗ, ಭಿನ್ನವಾದ ಹೇಳಿಕೆ ಕೊಟ್ಟರು. ವಿಚಾರಣೆ ಚುರುಕುಗೊಳಿಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಹನುಮಂತ ಅವರ ಹೆಸರಿನಲ್ಲಿ ಬಸವರಾಜ ₹50 ಲಕ್ಷ ಮೊತ್ತದ ಜೀವವಿಮೆ ಪಾಲಸಿಯನ್ನು ಒಂದು ವರ್ಷದ ಹಿಂದೆ ಮಾಡಿದ್ದರು. ಆ ಪಾಲಸಿಗೆ ತಾವೇ ನಾಮಿನಿ ಆಗಿದ್ದರು. ಅಣ್ಣನ ಕೊಲೆ ಮಾಡಿ ಆ ಹಣ ಪಡೆಯಲು ಸಂಚು ರೂಪಿಸಿದರು. ಹನುಮಂತ ಅವರಿಗೆ ಮದ್ಯ ಕುಡಿಸಿ, ಶ್ರೀಗಂಧದ ಕಟ್ಟಿಗೆ ತರೋಣ ಎಂದು ಕರೆದೊಯ್ದಿದ್ದರು. ಅಲ್ಲಿ ತಲೆಗೆ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾರೆ’ ಎಂದರು.
‘ಈ ಕೊಲೆ ಮಾಡಲು ಸಹಕರಿಸಿದರೆ ಒಬ್ಬರಿಗೆ ₹8 ಲಕ್ಷ, ಇಬ್ಬರಿಗೆ ತಲಾ ₹5 ಲಕ್ಷ ನೀಡುವುದಾಗಿ ತಿಳಿಸಲಾಗಿತ್ತು. ಕೊಲೆ ಮಾಡಿದ ವಿಷಯ ಗೊತ್ತಾಗುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದರು. ಮೊಬೈಲ್ ಲೊಕೇಷನ್ ಆಧರಿಸಿ ಅವರನ್ನು ಬಂಧಿಸಿದ್ದೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.