ADVERTISEMENT

ಆಸ್ತಿ ದಾಖಲೆ ಮರಳಿಸಿದ ಆಟೊ ಚಾಲಕ!

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 14:10 IST
Last Updated 18 ಜೂನ್ 2018, 14:10 IST
ಸಯ್ಯದ್‌
ಸಯ್ಯದ್‌   

ಬೆಂಗಳೂರು: ಪ್ರಯಾಣಿಕರೊಬ್ಬರು ಆಟೊದಲ್ಲಿ ಮರೆತು ಹೋಗಿದ್ದ ಆಸ್ತಿ ದಾಖಲೆಗಳನ್ನು ಚಾಲಕ ಅವರಿಗೆ ಮರಳಿಸಿದ ಪ್ರಕರಣ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಯ್ಯದ್‌ ಮಹಮ್ಮದ್‌ ದಾಖಲೆಗಳನ್ನು ಸಂಬಂಧಿಸಿದವರಿಗೆ ಮರಳಿಸಿದ ಆಟೊ ಚಾಲಕ. ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗಳು ವ್ಯಕ್ತವಾಗಿವೆ.

ಖಾಸಗಿ ಕಂಪನಿಯ ಉದ್ಯೋಗಿ ಸುನಿತಾ ಟೆಕಮ್‌ ಎಂಬುವರು ಸಯ್ಯದ್‌ ಅವರ ಆಟೊದಲ್ಲಿ ಕಚೇರಿಗೆ ಹೋಗಿದ್ದರು. ಸುನಿತಾ ಸೇರಿ ಮೂವರು ಪ್ರಯಾಣಿಕರು ಆಟೊದಲ್ಲಿದ್ದರು. ಕಚೇರಿ ತಲುಪಿ ಅವರು ಇಳಿದು ಹೋದ ಬಳಿಕ ಪ್ರಯಾಣಿಕರು ಬ್ಯಾಗ್‌ ಮರೆತು ಹೋಗಿರುವುದನ್ನು ಚಾಲಕ ಸಯ್ಯದ್‌ ಗಮನಿಸಿದ್ದಾರೆ.

ADVERTISEMENT

ಮೂವರು ಪ್ರಯಾಣಿಕರ ಪೈಕಿ ಬ್ಯಾಗ್‌ ಯಾರಿಗೆ ಸೇರಿದ್ದು ಎನ್ನುವುದು ಅವರಿಗೆ ಗೊತ್ತಿರಲಿಲ್ಲ. ತಕ್ಷಣವೇ ಅವರು ಹೈಗ್ರೌಂಡ್ಸ್‌ ಸಂಚಾರ ಪೊಲೀಸ್‌ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ದಿನೇಶ್‌ ಗೌಡ ಅವರನ್ನು ಸಂಪರ್ಕಿಸಿದ್ದಾರೆ.

ದಿನೇಶ್‌ ಅವರು ಬ್ಯಾಗ್‌ ತೆರೆದು ನೋಡಿದಾಗ ಅದರಲ್ಲಿ ಕೆಲವು ದಾಖಲೆಗಳೊಂದಿಗೆ ಸುನಿತಾ ಅವರ ಸಂಬಂಧಿಕರ ಮೊಬೈಲ್‌ ಸಂಖ್ಯೆ ಇತ್ತು. ಅದಕ್ಕೆ ಕರೆ ಮಾಡಿ ವಿಷಯ ತಿಳಿಸಿ, ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ ಬಳಿಕ ಸುನಿತಾ ಅವರಿಗೆ ಮರಳಿಸಲಾಗಿದೆ.

‘ಇದೊಂದೆ ಪ್ರಕರಣವಲ್ಲ ಬಹಳಷ್ಟು ಪ್ರಯಾಣಿಕರು ಮೊಬೈಲ್‌ ಫೋನ್‌, ಬ್ಯಾಗ್‌ ಸೇರಿದಂತೆ ದಾಖಲೆಗಳನ್ನು ಮರೆತು ಹೋಗುತ್ತಾರೆ. ಅವುಗಳನ್ನೆಲ್ಲ ಮರಳಿಸಿದ್ದೇನೆ’ ಎನ್ನುತ್ತಾರೆ ಸಯ್ಯದ್‌

ಇಷ್ಟೆಲ್ಲ ನೆರವು ಮಾಡಿರುವ ಸಯ್ಯದ್‌ ಅವರ ಡ್ರೈವಿಂಗ್‌ ಲೈಸನ್ಸ್‌ ಮೇ ನಲ್ಲಿ ಕಳೆದು ಹೋಗಿದೆ. ಈ ಬಗ್ಗೆ ಅವರು ದೂರನ್ನೂ ದಾಖಲಿಸಿದ್ದಾರೆ. ಆದರೆ, ಲೈಸನ್ಸ್‌ ಇನ್ನೂ ಪತ್ತೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.