ಬೆಂಗಳೂರು: ನಗರದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಕಾರಿನಲ್ಲಿ ಕದ್ದು ಸಾಗಿಸುತ್ತಿದ್ದ ಕುಖ್ಯಾತ ಅಂತರರಾಜ್ಯ ಕಳ್ಳನೊಬ್ಬನನ್ನು ಹೈಗ್ರೌಂಡ್ಸ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ನಾಗವಾರ ಸಮೀಪದ ಸಾರಾಯಿಪಾಳ್ಯದ ಇಮ್ದಾದ್‌ವುಲ್ಲಾ ಅಲಿಯಾಸ್ ಇಮ್ದಾದ್(23) ಬಂಧಿತ ಆರೋಪಿ. ಈತನಿಂದ ₨ 20 ಲಕ್ಷ ಮೌಲ್ಯದ ಶ್ರೀಗಂಧದ ತುಂಡುಗಳು ಮತ್ತು ಕೃತ್ಯಕ್ಕೆ ಬಳಿಸಿದ ಕಾರನ್ನು ಜಪ್ತಿ ಮಾಡಲಾಗಿದೆ.
ಸದಾಶಿವನಗರದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ಸ್ಯಾಂಕಿ ಕೆರೆ ಹಾಗೂ ಕನ್ನಿಂಗ್ ಹ್ಯಾಂ ರಸ್ತೆಯ ನಿವಾಸಿಯೊಬ್ಬರ ಮನೆಯ ತಡೆಗೋಡೆಯೊಳಗಿದ್ದ ಶ್ರೀಗಂಧದ ಮರಗಳನ್ನು ಕಳವು ಮಾಡಿರುವ ಕುರಿತು ಇತ್ತೀಚೆಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳ ತಪಾಸಣೆಯನ್ನು ಬಿಗಿಗೊಳಿಸಲಾಗಿತ್ತು. ಕೆಲ ದಿನಗಳ ಹಿಂದೆ ಅನುಮಾನಾಸ್ಪದವಾಗಿ ಹೋಗುತ್ತಿದ್ದ ಹುಂಡೈ ಅಸೆಂಟ್ ಕಾರನ್ನು ಸಿಬ್ಬಂದಿ ತಡೆದಾಗ, ಚಾಲಕ ನಿಲ್ಲಿಸದೇ ವೇಗವಾಗಿ ಹೋಗಿದ್ದ. ಕಾರಿನ ಸಂಖ್ಯೆಯನ್ನು ಬರೆದುಕೊಂಡಿದ್ದ ಸಿಬ್ಬಂದಿ ಅದನ್ನು ಪರಿಶೀಲಿಸಿದಾಗ, ಆ ಕಾರು ಇಮ್ದಾದ್‌ಗೆ ಸೇರಿದ್ದೆಂದು ತಿಳಿದು ಬಂದಿತ್ತು ಎಂದು ಪೊಲೀಸರು ಹೇಳಿದರು.
ಘಟನೆ ನಡೆದ ದಿನದಿಂದ ನಗರ ತೊರೆದಿದ್ದ ಇಮ್ದಾದ್, ಸೋಮವಾರ ಸಾರಾಯಿಪಾಳ್ಯದಲ್ಲಿರುವ ತನ್ನ ಮನೆಗೆ ಬಂದಿದ್ದ. ಈ ಕುರಿತು ದೊರೆತ ಸುಳಿವಿನ ಮೇರೆಗೆ, ಆರೋಪಿಯ ಮನೆ ಮೇಲೆ ದಾಳಿ ನಡೆಸಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು.
ತಿಂಗಳ ಹಿಂದೆ ಬಂಧಿಸಲಾಗಿತ್ತು: ಆರೋಪಿ ಇಮ್ದಾದ್ ಒಂದು ತಿಂಗಳ ಹಿಂದೆಯಷ್ಟೆ, ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯ ಸಹಕಾರ ನಗರ ‘ಎಸ್’ ಬ್ಲಾಕ್‌ನ ಮನೆಯೊಂದರ ಆವರಣದಲ್ಲಿದ್ದ ಶ್ರೀಗಂಧದ ಮರ ಕದಿಯಲು ಮುಂದಾಗಿದ್ದ. ಇದನ್ನು ಗಮನಿಸಿದ ಮನೆಯ ಕಾವಲುಗಾರನಿಗೆ ಥಳಿಸಿದ್ದ ಇಮ್ದಾದ್, ಆತನ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದ.
ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕೊಡಿಗೇಹಳ್ಳಿ ಪೊಲಿಸರು, ಇಮ್ದಾದ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇತ್ತೀಚೆಗಷ್ಟೆ ಜೈಲಿನಿಂದ ಬಿಡುಗಡೆಯಾಗಿದ್ದ ಆತ, ಮತ್ತೆ ತನ್ನ ಕೃತ್ಯವನ್ನು ಮುಂದುವರಿಸಿದ್ದ. ಈತನ ಬಂಧನದಿಂದಾಗಿ ಒಟ್ಟು ಮೂರು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.
ತಮಿಳುನಾಡಿನಿಂದ ಬರುತ್ತಿದ್ದ ಕೂಲಿಗಳು
ಪ್ರತಿಷ್ಠಿತ ಸಂಸ್ಥೆಯಾದ ಐಐಎಸ್‌ಸಿ ಸೇರಿದಂತೆ ಕೆಲ ಪ್ರದೇಶಗಳಲ್ಲಿರುವ ಶ್ರೀಗಂಧದ ಮರಗಳನ್ನು ಕಡಿಯುವುದಕ್ಕಾಗಿ ಆರೋಪಿ, ತಮಿಳುನಾಡಿನಿಂದ ಕೂಲಿ ಕಾರ್ಮಿಕರನ್ನು ಕರೆಯಿಸುತ್ತಿದ್ದ. ಇದಕ್ಕಾಗಿ ಅವರಿಗೆ ದಿನಕ್ಕೆ ₨ 2 ಸಾವಿರ ನೀಡುತ್ತಿದ್ದ.
ಶ್ರೀಗಂಧದ ಮರಗಳಿರುವ ಸ್ಥಳಗಳನ್ನು ಪತ್ತೆ ಮಾಡುತ್ತಿದ್ದ ಇಮ್ದಾದ್, ರಾತ್ರಿ ವೇಳೆ ಮರಗಳಿರುವ ಸ್ಥಳಕ್ಕೆ ಕೂಲಿಗಳನ್ನು ಕಳುಹಿಸುತ್ತಿದ್ದ. ಮರಗಳನ್ನು ಕಡಿಯುತ್ತಿದ್ದ ಕೂಲಿಗಳು, ನಂತರ ಇಮ್ದಾದ್ ಹೇಳಿದ ಸ್ಥಳಕ್ಕೆ ತುಂಡುಗಳನ್ನು ಸಾಗಿಸುತ್ತಿದ್ದರು. ಅಲ್ಲಿಂದ ಇಮ್ದಾದ್ ತನ್ನ ಕಾರಿನಲ್ಲಿ ಆಂಧ್ರಪ್ರದೇಶಕ್ಕೆ ತುಂಡುಗಳನ್ನು ಸಾಗಿಸಿ, ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದರು.
ತಂದೆಯಂತೆ ಕಳ್ಳನಾದ!: ಆರೋಪಿ ಇಮ್ದಾದ್‌ನ ತಂದೆ ಅಮ್ಜದುಲ್ಲಾ ಕೂಡ ಕುಖ್ಯಾತ ಕಳ್ಳನಾಗಿದ್ದಾನೆ. ನಗರದ ಹಲವೆಡೆ ಕಳ್ಳತನ ಮಾಡಿ ಜೈಲು ಶಿಕ್ಷೆ ಅನುಭವಿಸಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.