ADVERTISEMENT

ಸುಧಾಮೂರ್ತಿ ಹೆಸರಲ್ಲಿ ತೆಲುಗು ನಟನಿಗೆ ಪತ್ರ!

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 19:57 IST
Last Updated 28 ಫೆಬ್ರುವರಿ 2019, 19:57 IST

ಬೆಂಗಳೂರು: ‘ಇನ್ಫೋಸಿಸ್’ ಅಧ್ಯಕ್ಷೆ ಸುಧಾಮೂರ್ತಿ ಅವರ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಸೃಷ್ಟಿಸಿದ ಕಿಡಿಗೇಡಿಯೊಬ್ಬ, ‘ನಾವು ಹೊಸ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದ್ದೇವೆ. ಅದಕ್ಕೆ ನೀವು ಬ್ರಾಂಡ್ ಅಂಬಾಸಿಡರ್ ಆಗಿ ಬರಬೇಕು’ ಎಂದು ತೆಲುಗು ನಟ ವಿಜಯ್ ದೇವರಕೊಂಡ ಅವರಿಗೆ ಪತ್ರ ಕಳುಹಿಸಿದ್ದಾನೆ.

ಈ ಸಂಬಂಧ ‘ಇನ್ಫೋಸಿಸ್ ಫೌಂಡೇಷನ್’ ಕಚೇರಿ ನೌಕರ ಎಂ.ರಮೇಶ್ ಅವರು ಮಂಗಳವಾರ ಜಯನಗರ ಠಾಣೆಗೆ ದೂರು ಕೊಟ್ಟಿದ್ದಾರೆ. ಆ ಆ್ಯಪ್‌ನಲ್ಲಿರುವ ಮಾಹಿತಿ ಆಧರಿಸಿ ಎಲ್‌.ಎಸ್. ಕೃಷ್ಣ ಎಂಬಾತನ ವಿರುದ್ಧ ವಂಚನೆ(420) ಹಾಗೂ ನಕಲಿ ದಾಖಲೆ ಸೃಷ್ಟಿ (467,468) ಆರೋಪಗಳಡಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

ಹೀಗಿತ್ತು ಪತ್ರ: ‘ಇನ್ಫೋಸಿಸ್ ಫೌಂಡೇಷನ್’ ಎಂಬ ಲೆಟರ್‌ಹೆಡ್‌ನಲ್ಲೇ ಪತ್ರ ಸೃಷ್ಟಿಸಿದ್ದ ಆರೋಪಿ, ‘ನಮ್ಮ ಕಂಪನಿಯು ‘ಆಫರ್ಸ್ ನಿಯರ್ ಬೈ’ ಎಂಬ ಮೊಬೈಲ್ ಆ್ಯಪ್ ತೆರೆಯುತ್ತಿದೆ. ಅದಕ್ಕೆ ನೀವು ಬ್ರಾಂಡ್ ಅಂಬಾಸಿಡರ್ ಅಥವಾ ಪಾರ್ಟ್‌ನರ್ ಆಗಿ ಬರಬೇಕು’ಎಂದುಬರೆದಿದ್ದ. ಅಲ್ಲದೆ, ಸುಧಾಮೂರ್ತಿ ಅವರ ಸಹಿಯನ್ನೂ ನಕಲು ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಆ ಪತ್ರವನ್ನು ‘ವಿಜಯ್ ದೇವರಕೊಂಡ, ಮೈತ್ರಿ ಮೂವಿ ಮೇಕರ್ಸ್, ಕಮಲಗಿರಿ ಟವರ್ಸ್, ಮಧುರಾನಗರ, ತೆಲಂಗಾಣ’ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮಾಡಿದ್ದ. ಆದರೆ, ವಿಳಾಸದಲ್ಲಿ ಗೊಂದಲವಿದ್ದ ಕಾರಣ ಅದು ನಟನ ಕಚೇರಿ ತಲುಪಿರಲಿಲ್ಲ. ಪತ್ರದ ಹಿಂಬದಿಯಲ್ಲಿ ಆರೋಪಿ ‘ಇನ್ಫೋಸಿಸ್ ಫೌಂಡೇಷನ್‌’ನ ಹೆಸರು ಬರೆದಿದ್ದ ಕಾರಣ ಪತ್ರ ಸುಧಾ ಮೂರ್ತಿ ಕಚೇರಿಗೇ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.