ADVERTISEMENT

ಹೊಸ ಜಗತ್ತಿನ ಅನುಭವ: ಶೆಟ್ಟರ್ ಪುಳಕ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2012, 19:30 IST
Last Updated 9 ಆಗಸ್ಟ್ 2012, 19:30 IST

ಬೆಂಗಳೂರು: `ಬರಗಾಲಕ್ಕೂ ಫಲಪುಷ್ಪ ಪ್ರದರ್ಶನಕ್ಕೂ ಸಂಬಂಧ ಇಲ್ಲ. ಪ್ರತಿವರ್ಷ ನಡೆಯುವ ಫಲಪುಷ್ಪ ಪ್ರದರ್ಶನವು ಇನ್ನಷ್ಟು ಆಕರ್ಷಣಿಯವಾಗುವಂತೆ ಸಂಘಟಕರು ನೋಡಿಕೊಳ್ಳಬೇಕಿತ್ತು~ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಲಹೆ ನೀಡಿದರು.

65ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತೋಟಗಾರಿಕಾ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘವು ನಗರದ ಲಾಲ್‌ಬಾಗ್‌ನಲ್ಲಿ ಏರ್ಪಡಿಸಿರುವ ಏಳು ದಿನಗಳ ಫಲಪುಷ್ಪ ಪ್ರದರ್ಶನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿ, `ಇಲ್ಲಿರುವ ಮನಮೋಹಕ ಹೂವುಗಳನ್ನು ನೋಡಿದರೆ ಮನಸ್ಸು ಪುಳಕಗೊಳ್ಳುತ್ತದೆ. ಅಪರೂಪದ ಆಕರ್ಷಕ ಪುಷ್ಪಗಳನ್ನು ಕಂಡು ಹೊಸ ಜಗತ್ತಿಗೆ ಬಂದಂತೆ ಆಗಿದೆ~ ಎಂದು ಬಣ್ಣಿಸಿದರು.

`ಇಲ್ಲಿ ಪ್ರದರ್ಶಿತವಾಗುತ್ತಿರುವ ಹೂಗಳು ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಆಕರ್ಷಕ ಹೂಗಳಾಗಿವೆ. ವೀಕ್ಷಣೆಗೆ ಬಂದವರಿಗೆ ಹೊಸತೊಂದು ಅನುಭವ ನೀಡಲಿದೆ. ಗಿಡ-ಮರಗಳನ್ನು ಬೆಳೆಸುವ ಆಸೆ ಹುಟ್ಟುತ್ತದೆ. ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಪ್ರದರ್ಶಕ್ಕೆ ಭೇಟಿ ನೀಡಿ ಹೂ-ಗಿಡ-ಮರಗಳ ಬಗ್ಗೆ ಪ್ರೀತಿ ಬೆಳೆಸಿಕೊಳ್ಳಬೇಕು. ನಗರಕ್ಕೆ ಆಗಮಿಸುವ ಪ್ರವಾಸಿಗಳು ಪ್ರದರ್ಶನಕ್ಕೂ ಆಗಮಿಸಿ ಸೌಂದರ್ಯವನ್ನು ಸವಿಯಬೇಕು~ ಎಂದು ಅವರು ತಿಳಿಸಿದರು.

ಉಪಮುಖ್ಯಮಂತ್ರಿ ಆರ್ ಅಶೋಕ, ತೋಟಗಾರಿಕಾ ಸಚಿವ ಎಸ್.ಎ.ರವೀಂದ್ರನಾಥ್, ಶಾಸಕರಾದ ಡಾ.ಹೇಮಚಂದ್ರ ಸಾಗರ್, ಎಂ. ಕೃಷ್ಣಪ್ಪ, ಮೇಯರ್ ಡಿ.ವೆಂಕಟೇಶಮೂರ್ತಿ, ಉಪಮೇಯರ್ ಎಲ್.ಶ್ರೀನಿವಾಸ್, ಆಡಳಿತ ಪಕ್ಷದ ನಾಯಕ ಎನ್.ನಾಗರಾಜ್, ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಂದಿತಾ ಶರ್ಮ, ಇಲಾಖೆಯ ನಿರ್ದೇಶಕ ಕೆ.ಜಿ.ಜಗದೀಶ್ ಉಪಸ್ಥಿತರಿದ್ದರು.

ತರಕಾರಿಗಳ ಕೆತ್ತನೆ, ಥಾಯ್‌ಆರ್ಟ್, ಬೋನ್ಸಾಯ್, ಇಕೆಬಾನ, ಜಾನೂರು, ಕುಂಡಗಳಲ್ಲೇ ಬೆಳೆಸಿದ ತರಕಾರಿ ಬಿಟ್ಟ ಗಿಡಗಳು, ಆಂಥೋರಿಯಂ, ಆರ್ಕಿಡ್, ವಿಂಕಾ, ಇಂಪೇಷನ್ಸ್, ಸೈಕ್ಲೊಮನ್, ಪೆಟೂನಿಯಾ, ಪಾಯಿನ್ಸಿಟಿಯಾ, ಪೇಟೊನೂನಿಯಾ ಸೇರಿದಂತೆ 200ಕ್ಕೂ ಹೆಚ್ಚು ಅಪರೂಪದ ಜಾತಿಯ ಹೂ ಗಿಡಗಳು ಪ್ರದರ್ಶನದ ಮೆರುಗು ಇಮ್ಮಡಿಗೊಳಿಸಿವೆ.

ಹೂ, ಗಿಡ, ಹಣ್ಣು ತರಕಾರಿಗಳನ್ನು ಬಳಸಿ ವಿವಿಧ ಪ್ರಾಣಿಗಳನ್ನು ನಿರ್ಮಿಸಿರುವ `ಟ್ರೀ ಹಟ್~ ಪ್ರದರ್ಶನದ ವಿಶೇಷ. 13ರಂದು ಬೆಳಿಗ್ಗೆ 8ರಿಂದ 12 ಗಂಟೆಯ ವರೆಗೆ ಹಾಗೂ 15ರಂದು ಬೆಳಿಗ್ಗೆ 9ರಿಂದ 6 ಗಂಟೆಯ ವರೆಗೂ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.