ADVERTISEMENT

‘ಶೇ 10 ರಷ್ಟು ಮೀಸಲಾತಿ: ಶೀಘ್ರ ಅನುಷ್ಠಾನಗೊಳಿಸಿ’

ರಾಜ್ಯ ಸರ್ಕಾರಕ್ಕೆ ಬ್ರಾಹ್ಮಣ ಸಮುದಾಯದ ಮುಖಂಡರ ಒತ್ತಾಯ l ಸಮುದಾಯದ ವಿವಿಧ ಗಣ್ಯರಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 20:45 IST
Last Updated 11 ಏಪ್ರಿಲ್ 2021, 20:45 IST
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾವು ನಗರದಲ್ಲಿ ಭಾನುವಾರ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಉಪಾಧ್ಯಕ್ಷ ಎಸ್. ದತ್ತಾತ್ರಿ, ಕ್ರೀಡಾ ಕ್ಷೇತ್ರದ ಸಾಧಕ ಕೆ.ವೈ. ವೆಂಕಟೇಶ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್‌.ವಿ. ರಾಜೀವ್, ಮೈಸೂರು ಪೇಂಟ್ಸ್‌ ಆ್ಯಂಡ್ ವಾರ್ನಿಶ್ ಲಿಮಿಟೆಡ್‌ನ ಅಧ್ಯಕ್ಷ ಫಣೀಶ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಿ.ಎನ್. ಕಿಶೋರ್ ಅವರಿಗೆ ಸನ್ಮಾನ ಮಾಡಲಾಯಿತು. ಶಾಸಕ ಉದಯ್ ಗರುಡಾಚಾರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಎನ್. ವೆಂಕಟನಾರಾಯಣ ಇದ್ದಾರೆ - ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಕೇಂದ್ರ ಸರ್ಕಾರವು ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ಕಲ್ಪಿಸಿದೆ. ಆದರೆ, ರಾಜ್ಯದಲ್ಲಿ ಈ ಮೀಸಲಾತಿ ಇನ್ನೂ ಅನುಷ್ಠಾನವಾಗದ ಪರಿಣಾಮ ಹಲವರು ಅವಕಾಶ ವಂಚಿತರಾಗಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು’ ಎಂದು ಬ್ರಾಹ್ಮಣ ಸಮುದಾಯದ ಮುಖಂಡರು ಒತ್ತಾಯಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಮುದಾಯದ ಸಾಧಕರಿಗೆ ಅಭಿನಂದನೆ ಸಲ್ಲಿಸಲಾಯಿತು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್‌.ವಿ. ರಾಜೀವ್ ಮಾತನಾಡಿ, ‘ಆರ್ಥಿಕವಾಗಿ ಹಿಂದುಳಿದಿರುವ ರಾಜ್ಯದ ಎಲ್ಲ ಸಾಮಾನ್ಯ ನಾಗರಿಕರು ಶಿಕ್ಷಣ, ಉದ್ಯೋಗಗಳಲ್ಲಿ ಕೇಂದ್ರದ ಮಾದರಿಯಲ್ಲೇ ಮೀಸಲಾತಿಯ ಸೌಲಭ್ಯವನ್ನು ಪಡೆಯುವಂತಾಗಬೇಕು. ಹಲವು ರಾಜ್ಯಗಳಲ್ಲಿ ಈಗಾಗಲೇ ಶೇ 10 ರಷ್ಟು ಮೀಸಲಾತಿ ಅನುಷ್ಠಾನವಾಗದೆ. ಆದರೆ, ಇಲ್ಲಿ ರಾಜ್ಯ ಸರ್ಕಾರವು ಅನುಷ್ಠಾನ ಮಾಡದ ಪರಿಣಾಮ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಸಿಗಬೇಕಾದ ಅವಕಾಶಗಳು ಕೈತಪ್ಪಿವೆ. ಹಾಗಾಗಿ, ಬ್ರಾಹ್ಮಣ ಮಹಾಸಭೆಯು ಇದರನಾಯಕತ್ವವನ್ನು ವಹಿಸಿಕೊಂಡು, ಸರ್ಕಾರದ ಗಮನ ಸೆಳೆಯಬೇಕು’ ಎಂದು ಆಗ್ರಹಿಸಿದರು.

ADVERTISEMENT

ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಉಪಾಧ್ಯಕ್ಷ ಎಸ್. ದತ್ತಾತ್ರಿ, ‘ಸಮುದಾಯದ ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ಎಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣರಿದ್ದಾರೆ. ನಾಗರಿಕ ಸೇವೆ ಸೇರಿದಂತೆ ಉಳಿದ ಕ್ಷೇತ್ರಗಳಲ್ಲಿ ಕೂಡ ಸಾಧನೆ ಮಾಡಬೇಕಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಶೇ 10ರಷ್ಟು ಮೀಸಲಾತಿಯ ಲಾಭ ದೊರೆಯಬೇಕು. ಈ ವರ್ಷದಲ್ಲಿಯೇ ಅದನ್ನು ಸರ್ಕಾರ ಅನುಷ್ಠಾನ ಮಾಡಲು ಕ್ರಮಕೈಗೊಳ್ಳಬೇಕು’ ಎಂದರು.

ಮಹಾಸಭೆಯ ಅಧ್ಯಕ್ಷ ಕೆ.ಎನ್. ವೆಂಕಟನಾರಾಯಣ ಮಾತನಾಡಿ, ‘ರಾಷ್ಟ್ರದ ಕಲ್ಯಾಣಕ್ಕೆ ಸಮುದಾಯದ ಹಲವರು ಕೊಡುಗೆ ನೀಡಿದ್ದಾರೆ. ತಮ್ಮಲ್ಲಿನ ಪ್ರತಿಭೆಯನ್ನು ಸಮಪರ್ಕವಾಗಿ ಉಪಯೋಗಿಸಿಕೊಂಡು ವಿವಿಧ
ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು’ ಎಂದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.