ADVERTISEMENT

150 ವರ್ಷಗಳಷ್ಟು ಹಿಂದಿನ 'ಬೆಂಗಳೂರು ಗೇಟ್‌'ಗೆ ಹೊಸ ರೂಪ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 9:02 IST
Last Updated 19 ಡಿಸೆಂಬರ್ 2020, 9:02 IST
ಚಾಮರಾಜಪೇಟೆಯ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ ಮೈದಾನದ ಕಾಂಪೌಂಡ್ ಬಳಿಯ ಪಾರಂಪರಿಕ 'ಬೆಂಗಳೂರು ಗೇಟ್' ಹಳೇ ಸ್ಥಿತಿ. ನವೀಕರಣಗೊಂಡ ನಂತರ ಸದ್ಯದ ಸ್ಥಿತಿ (ಚಿತ್ರ: @deepolice12)
ಚಾಮರಾಜಪೇಟೆಯ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ ಮೈದಾನದ ಕಾಂಪೌಂಡ್ ಬಳಿಯ ಪಾರಂಪರಿಕ 'ಬೆಂಗಳೂರು ಗೇಟ್' ಹಳೇ ಸ್ಥಿತಿ. ನವೀಕರಣಗೊಂಡ ನಂತರ ಸದ್ಯದ ಸ್ಥಿತಿ (ಚಿತ್ರ: @deepolice12)   

ಬೆಂಗಳೂರು: ಇಲ್ಲಿಯ ಚಾಮರಾಜಪೇಟೆಯಲ್ಲಿರುವ 150 ವರ್ಷ ಹಳೆಯದ್ದಾದ ‘ಬೆಂಗಳೂರು ಗೇಟ್‌’ ಪಾರಂಪರಿಕ ಚೌಕಿಯನ್ನು ಸಂರಕ್ಷಣೆ ಮಾಡಿ ಹೊಸ ರೂಪ ನೀಡಲಾಗುತ್ತಿದ್ದು, ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ಯಾರ ಗಮನಕ್ಕೂ ಬಾರದೆ ಪಾಳು ಬಿದ್ದಿದ್ದ ಬೆಂಗಳೂರು ಗೇಟ್ ಸಂರಕ್ಷಿಸಬೇಕೆಂಬ ಕೂಗು 2020ರಲ್ಲಿ ಕೇಳಿಬಂದಿದ್ದು, ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಸಂರಕ್ಷಣೆ ಬಗ್ಗೆ ಟ್ವೀಟ್ ಸಹ ಮಾಡಿದ್ದರು.

ಗೇಟ್ ಸಂರಕ್ಷಣೆ ಮಾಡಬೇಕೆಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಸೇರಿದಂತೆ ನೂರಾರು ಸಾರ್ವಜನಿಕರೂ ಆಗ್ರಹಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಅಭಿಯಾನವೇ ನಡೆದಿತ್ತು. ಇದರ ಫಲವಾಗಿ, ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಬೆಂಗಳೂರು ಗೇಟ್‌ ಅಭಿವೃದ್ಧಿ ಮಾಡಿಸುತ್ತಿದ್ದಾರೆ.

ADVERTISEMENT

ಚಾಮರಾಜಪೇಟೆಯ ನಗರ ಸಶಸ್ತ್ರ ಮೀಸಲು ಪಡೆಯ ಕಾಂಪೌಂಡ್‌ನಲ್ಲಿರುವ ಗೇಟ್‌ಗೆ ಬಣ್ಣ ಬಳಿದು, ಸುತ್ತಲಿನ ಸ್ಥಳವನ್ನು ಸ್ವಚ್ಛಗೊಳಿಸಲಾಗುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಭಾಸ್ಕರ್‌ ರಾವ್, ಚೌಕಿ ಸಂರಕ್ಷಣೆ ಮಾಡಿ ಅಭಿವೃದ್ಧಿಪಡಿಸುತ್ತಿರುವ ಸರ್ಕಾರಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಅಭಿವೃದ್ಧಿಗಾಗಿ ಕೆಲಸ ಮಾಡಿದ್ದ ಪೊಲೀಸ್ ಅಧಿಕಾರಿಗಳಾದ ವರ್ಟಿಕಾ ಕಟಿಯಾರ್, ದಿವ್ಯಾ ಹಾಗೂ ಸುಚೇತ್‌ ಅವರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬ್ರಿಟಿಷರ ಕಾಲದಲ್ಲಿ ಮೈಸೂರಿನಿಂದ ನಗರಕ್ಕೆ ಬರುವವರ ಬಗ್ಗೆ ನಿಗಾ ವಹಿಸಲು ‘ಬೆಂಗಳೂರು ಗೇಟ್’ ಚೌಕಿ ನಿರ್ಮಿಸಲಾಗಿತ್ತು. ಕಾವಲುಗಾರರು ಈ ಚೌಕಿಯಲ್ಲಿರುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.