ಬೆಂಗಳೂರು: ಕೆಎಸ್‌ಆರ್‌ಟಿಸಿಯಲ್ಲಿ ಐದು ವರ್ಷಗಳಿಂದ ಬಾಕಿ ಉಳಿದಿದ್ದ ಚಾಲಕ ಕಂ ನಿರ್ವಾಹಕರ ನೇಮಕಾತಿ ಅಂತಿಮ ಹಂತಕ್ಕೆ ಬಂದಿದೆ. ಜೂನ್ ಮೊದಲ ವಾರದಲ್ಲಿ 2000 ಹೊಸ ನೌಕರರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
2020ರಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. 2,545 ಚಾಲಕ ಕಂ ನಿರ್ವಾಹಕ ಹುದ್ದೆ, 1,200 ಚಾಲಕರು, 746 ಮೆಕ್ಯಾನಿಕ್ ಹುದ್ದೆಗಳಿಗೆ ಆಗ ಅರ್ಜಿ ಆಹ್ವಾನಿಸಲಾಗಿತ್ತು. ಆನಂತರ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. 2023ರ ಅಕ್ಟೋಬರ್‌ನಲ್ಲಿ ಈಗಿನ ಸರ್ಕಾರ ನೇಮಕಾತಿ ಪ್ರಕ್ರಿಯೆ ನಡೆಸಲು ಮುಂದಾಗಿತ್ತು. 2,545ರ ಬದಲು 2000 ಚಾಲಕ ಕಂ ನಿರ್ವಾಹಕರು, 746 ಮೆಕ್ಯಾನಿಕ್ ಹುದ್ದೆ ಬದಲು 300 ಮೆಕ್ಯಾನಿಕ್ ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದಿಸಿತ್ತು. 2024ರ ಜನವರಿಯಲ್ಲಿ ತಾಂತ್ರಿಕ ಸಿಬ್ಬಂದಿ ನೇಮಕಾತಿ ಪೂರ್ಣಗೊಳಿಸಿ ವಿಭಾಗ/ ಘಟಕಗಳಿಗೆ ನಿಯೋಜನೆ ಮಾಡಲಾಗಿದೆ.
2000 ಹುದ್ದೆಗೆ 25,494 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ದಾಖಲೆಗಳ ಪರಿಶೀಲನೆಯ ಬಳಿಕ 13,954 ಅಭ್ಯರ್ಥಿಗಳು ಅರ್ಹರಾಗಿದ್ದರು. ಹುಮ್ನಾಬಾದ್ ಮತ್ತು ಹಾಸನದ ಕೆಎಸ್‌ಆರ್‌ಟಿಸಿ ತರಬೇತಿ ಕೇಂದ್ರದಲ್ಲಿ ಒಂದು ವರ್ಷದಿಂದ ಚಾಲನಾ ಪರೀಕ್ಷೆಯನ್ನು ನಡೆಸಲಾಗಿತ್ತು. 12,431 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 7,352 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಮೀಸಲಾತಿ ಪ್ರವರ್ಗದ ಆಧಾರದಲ್ಲಿ ಆಯಾ ವರ್ಗದಲ್ಲಿ ಅಧಿಕ ಅಂಕಗಳಿಸಿದವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಶೇ 100ರಷ್ಟು ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗಿದೆ. ಚಾಲನಾ ಪರೀಕ್ಷೆಯನ್ನು ವಿಡಿಯೊ ಮಾಡಲಾಗಿದೆ. ಪಾರದರ್ಶಕತೆ ಕಾಪಾಡಲು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಪ್ರತಿ ವಾರ ಬದಲಾವಣೆ ಮಾಡಲಾಗುತ್ತಿತ್ತು. ಚಾಲನಾ ವೃತ್ತಿ ಪರೀಕ್ಷೆಯನ್ನು ವೆಬ್‌ಕಾಸ್ಟಿಂಗ್ ಮಾಡಲಾಗಿದೆ. ಕೇಂದ್ರೀಕೃತ ನಿಯಂತ್ರಣಾ ಕೊಠಡಿಯಲ್ಲಿ ಎಲ್ಲವನ್ನೂ ನಿಗಾ ಇಡಲಾಗಿದೆ. ಚಾಲನಾ ತರಬೇತಿ ಮಾರ್ಗದಲ್ಲಿ ಮತ್ತು ಬಸ್‌ನಲ್ಲಿ ಸೇರಿ ಒಟ್ಟು 48 ಕ್ಯಾಮೆರಾಗಳು ಕಣ್ಗಾವಲು ಇದ್ದವು’ ಎಂದು ತಿಳಿಸಿದ್ದಾರೆ.
ಅಲ್ಲದೇ ಇದೇ ಮೊದಲ ಬಾರಿಗೆ ಚಾಲನಾ ವೃತ್ತಿ ಪರೀಕ್ಷೆಗೆ ಸಂಬಂಧಿಸಿದಂತೆ ಆಕ್ಷೇಪಗಳಿದ್ದರೆ ಸಲ್ಲಿಸಲು ಅವಕಾಶ ನೀಡಲಾಗಿದೆ. ದಕ್ಷಿಣ ಕರ್ನಾಟಕದವರಿಗೆ ಅನುಕೂಲ ಆಗುವಂತೆ ಹಾಸನದಲ್ಲಿ, ಉತ್ತರ ಕರ್ನಾಟಕದವರಿಗೆ ಅನುಕೂಲ ಆಗುವಂತೆ ಹುಮ್ನಾಬಾದ್‌ನಲ್ಲಿ ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿತ್ತು. ಈ ಎರಡರಲ್ಲಿ ಯಾವುದನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಅಭ್ಯರ್ಥಿಗೆ ನೀಡಲಾಗಿತ್ತು’ ಎಂದು ಪರೀಕ್ಷಾ ನೋಡಲ್ ಅಧಿಕಾರಿ ವಿವರಿಸಿದರು.
ಗಣಕೀಕೃತ ವೈರಲೆಸ್ ಆಧಾರಿತ ಚಾಲನಾ ವೃತ್ತಿ ಪರೀಕ್ಷೆ ಇದಾಗಿದ್ದು, ಚಾಲನೆ ಮಾಡಿದ ಕೂಡಲೇ ಆಟೊಮೆಟಿಕ್ ಕಂಪ್ಯೂಟರ್ ಆಧಾರಿತ ಅಂಕ ಪ್ರಮಾಣಪತ್ರ ಅಲ್ಲಿಯೇ ಅಭ್ಯರ್ಥಿಗಳ ಕೈ ಸೇರಿದೆ. ಪ್ರತಿದಿನ 100 ರಿಂದ 120 ಅಭ್ಯರ್ಥಿಗಳಿಗೆ ಪರೀಕ್ಷೆ ಮಾಡಲಾಗಿದೆ. ಆಯಾ ದಿನವೇ ಸಂಜೆ ಅಂಕಪಟ್ಟಿಗಳನ್ನು ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ’ ಎಂದು ತಿಳಿಸಿದರು.
ಅಂಕಿ ಅಂಶ:
ಹುಮ್ನಾಬಾದ್‌ನಲ್ಲಿ ಚಾಲನಾ ಪರೀಕ್ಷೆಗೆ ಹಾಜರಾದವರು: 2,510
ಉತ್ತೀರ್ಣರಾದವರು: 1,408
ಉತ್ತೀರ್ಣರಾದ ಪ್ರಮಾಣ: ಶೇ 56.09
ಹಾಸನದಲ್ಲಿ ಚಾಲನಾ ಪರೀಕ್ಷೆಗೆ ಹಾಜರಾದವರು: 9,921
ಉತ್ತೀರ್ಣರಾದವರು: 5,944
ಉತ್ತೀರ್ಣರಾದ ಪ್ರಮಾಣ: ಶೇ 59.91
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.