ಬೆಂಗಳೂರು: ‘ನಮ್ಮ ಮೆಟ್ರೊ’ ಸಿಬ್ಬಂದಿಗೆ ಈಚೆಗೆ ನಡೆಸಿದ್ದ ಕೋವಿಡ್ ಪರೀಕ್ಷೆ ಫಲಿತಾಂಶ ಬಂದಿದ್ದು, 28 ಲೊಕೊ ಪೈಲಟ್‌ಗಳಿಗೆ (ಮೆಟ್ರೊ ರೈಲು ಚಾಲಕ) ಸೋಂಕು ತಗುಲಿರುವುದು ದೃಢಪಟ್ಟಿದೆ.
ಪ್ರಸ್ತುತ 450 ಲೊಕೊ ಪೈಲಟ್‌ಗಳು ಮತ್ತು ನಿಲ್ದಾಣ ನಿಯಂತ್ರಕರು ರೈಲು ಕಾರ್ಯಾಚರಣೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೋಂಕಿತ ಲೊಕೊ ಪೈಲಟ್‌ಗಳು ಸ್ವಯಂ ಐಸೋಲೇಷನ್‌ಗೆ ಒಳಪಟ್ಟಿದ್ದಾರೆ. ಯಾರೂ ಸೋಂಕು ತಗುಲಿರುವ ಲಕ್ಷಣ ಹೊಂದಿರಲಿಲ್ಲ. ಆರೋಗ್ಯದಲ್ಲಿಯೂ ಯಾವುದೇ ಸಮಸ್ಯೆ ಇಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
‘ಸಿಬ್ಬಂದಿ ಹಿತದೃಷ್ಟಿಯಿಂದ ಬನ್ನೇರುಘಟ್ಟ ರಸ್ತೆಯಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲಾಗಿದೆ. ಅಲ್ಲಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ಮುನ್ನ ನಿತ್ಯ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಕಳುಹಿಸಲಾಗುತ್ತಿದೆ. ಮುಖಗವಸು ಕೂಡ ಕಡ್ಡಾಯಗೊಳಿಸಿದ್ದು, ಮಾರ್ಗಸೂಚಿಯಂತೆ ಎಲ್ಲ ಕ್ರಮಗಳನ್ನು ಅನುಸರಿಸಲಾಗುತ್ತಿದೆ’ ಎಂದು ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಮೆಟ್ರೊ ರೈಲಿನಲ್ಲಿ ಪ್ರಸ್ತುತ ನಿತ್ಯ 35 ಸಾವಿರದಿಂದ 40 ಸಾವಿರ ಜನ ಸಂಚರಿಸುತ್ತಿದ್ದಾರೆ. ಸೆಪ್ಟೆಂಬರ್ 7ರಿಂದ ತಿಂಗಳಾಂತ್ಯದವರೆಗೆ ಸರಿಸುಮಾರು 6.92 ಲಕ್ಷ ಜನ ಪ್ರಯಾಣಿಸಿದ್ದಾರೆ. ಇದು ಕೋವಿಡ್ ಮೊದಲಿನ ಪ್ರಮಾಣಕ್ಕೆ ಹೋಲಿಸಿದರೆ, ದಿನಕ್ಕೆ ಶೇ 10ರಷ್ಟೂ ಆಗುವುದಿಲ್ಲ.
ನಿತ್ಯ ನೇರಳೆ ಮತ್ತು ಹಸಿರು ಮಾರ್ಗ ಎರಡರಲ್ಲೂ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಸೇವೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.