ADVERTISEMENT

ಪರಿಸರ ನಿಯಮ ಉಲ್ಲಂಘನೆ: 67 ಕೈಗಾರಿಕೆಗಳಿಗೆ ದಂಡ

ಕೆಎಸ್‌ಪಿಸಿಬಿ ಕ್ರಮ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 21:33 IST
Last Updated 15 ಫೆಬ್ರುವರಿ 2020, 21:33 IST

ಬೆಂಗಳೂರು: ಪರಿಸರ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಪೀಣ್ಯ, ಆನೇಕಲ್ ಮತ್ತು ಜಿಗಣಿ ಕೈಗಾರಿಕಾ ಪ್ರದೇಶದ 67 ಕೈಗಾರಿಕೆಗಳಿಗೆ ಕರ್ನಾಟಕ ಮಾಲಿನ್ಯ ನಿಯಂತ್ರಣಾ ಮಂಡಳಿ ₹25 ಲಕ್ಷದಿಂದ ₹1 ಕೋಟಿವರೆಗೆ ದಂಡ ವಿಧಿಸಿದೆ.

‘ಉದ್ಯಮ ಆರಂಭಕ್ಕೆ ಮುನ್ನ ಹಾಗೂ ಆರಂಭದ ನಂತರ ಮಂಡಳಿಯಿಂದ ಅನುಮತಿ ಪಡೆಯುವುದು ಕಡ್ಡಾಯ. ಅನುಮತಿ ಪಡೆಯದಿರುವುದು ಹಾಗೂ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಹಾಗೂ ಹೈಕೋರ್ಟ್‌ ಆದೇಶದಂತೆ ದಂಡ ನಿಗದಿ ಮಾಡಿ ನೋಟಿಸ್ ನೀಡಲಾಗಿದೆ’ ಎಂದು ಮಂಡಳಿಯ ಸದಸ್ಯ ಕಾರ್ಯದರ್ಶಿ ಬಸವರಾಜ್ ವಿ.ಪಾಟೀಲ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕಳೆದೊಂದು ತಿಂಗಳಿಂದ 50ಕ್ಕೂ ಹೆಚ್ಚು ಕೈಗಾರಿಕೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ನಿಯಮ ಉಲ್ಲಂಘಿಸಿದವರಿಗೆ ಸರಿಪಡಿಸಿಕೊಳ್ಳಲು ಅವಕಾಶವನ್ನೂ ನೀಡದೆ ಏಕಾಏಕಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದನ್ನು ನಾವು ಖಂಡಿಸುತ್ತೇವೆ’ ಎಂದು ‌ಕಾಸಿಯಾ (ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ) ಅಧ್ಯಕ್ಷ ಆರ್‌. ರಾಜು ಹೇಳಿದರು.

ADVERTISEMENT

‘ಕೈಗಾರಿಕಾ ಪ್ರದೇಶದಲ್ಲಿ ಮಾಲಿನ್ಯ ಹೆಚ್ಚಳಕ್ಕೆ ಕೈಗಾರಿಕೆಗಳೇ ಕಾರಣವಲ್ಲ. ಮೂಲಸೌಕರ್ಯ ಕೊರತೆ ಹಾಗೂ ಸಂಚಾರ ದಟ್ಟಣೆಯೂ ಕಾರಣ. ಒಂದೇ ಲೇಥ್ ಮಷಿನ್ ಇರುವ ಕೈಗಾರಿಕೆಯನ್ನೂ ಮುಚ್ಚಿಸಲಾಗಿದೆ. ಅದರಿಂದ ಯಾವ ಮಾಲಿನ್ಯ ಉಂಟಾಗುತ್ತದೆ’ ಎಂದು ಅವರು ಪ್ರಶ್ನಿಸಿದರು.

‘ಈ ರೀತಿ ಕೈಗಾರಿಕೆಗಳ ಬಾಗಿಲು ಮುಚ್ಚಿಸಿದರೆ ಉದ್ಯಮಿಯ ಮೇಲೆ ಕಾರ್ಮಿಕರು, ಬ್ಯಾಂಕ್‌ನವರು ಸೇರಿ ಎಲ್ಲರೂ ವಿಶ್ವಾಸ ಕಳೆದುಕೊಳ್ಳುತ್ತಾರೆ. ಆ ಉದ್ಯಮಿ ಚೇತರಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ’ ಎಂದರು.

ಯಾರಿಗೆ ಎಷ್ಟು ದಂಡ

* 26 ಬೃಹತ್ ಕೈಗಾರಿಕೆಗಳು ತಲಾ ₹1 ಕೋಟಿ

* 6 ಮಧ್ಯಮ ಕೈಗಾರಿಕೆಗಳಿಗೆ ತಲಾ ₹50 ಲಕ್ಷ

* 35 ಸಣ್ಣ ಕೈಗಾರಿಕೆಗಳಿಗೆ ತಲಾ ₹25 ಲಕ್ಷ

‘ಅನುಮತಿ ಮೇಳ ನಡೆಸಿ’:ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳು ಮಾಲಿನ್ಯ ನಿಯಂತ್ರಣಾ ಮಂಡಳಿಯ ಅನುಮತಿ ಪಡೆಯಲು ಅನುಕೂಲವಾಗುವಂತೆ ಮೇಳ ನಡೆಸುವುದು ಸೂಕ್ತ ಎಂದು ಉದ್ಯಮಿ ಆರ್. ಪೃಥ್ವಿರಾಜ್ ಹೇಳಿದರು.

ಒತ್ತಡದಲ್ಲಿ ಅನುಮತಿ ನವೀಕರಣ ಮಾಡಿಸಲು ಆಗದಿದ್ದವರಿಗೆ ಅನುಕೂಲವಾಗಲಿದೆ. ಅದಕ್ಕೆ ಬೇಕಿರುವ ಸಹಕಾರವನ್ನು ಕಾಸಿಯಾ ನೀಡಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.