ADVERTISEMENT

371 ಮರ: 8.61 ಎಕರೆ ಪ್ರದೇಶವನ್ನು ‘ಜೀವವೈವಿಧ್ಯ ಪಾರಂಪರಿಕ ತಾಣ’ ಎಂದು ಘೋಷಣೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 1:00 IST
Last Updated 11 ಸೆಪ್ಟೆಂಬರ್ 2025, 1:00 IST
ರೈಲ್ವೆ ಕಾಲೊನಿಯಲ್ಲಿ ಮರಗಳಿರುವ ಪ್ರದೇಶ
ರೈಲ್ವೆ ಕಾಲೊನಿಯಲ್ಲಿ ಮರಗಳಿರುವ ಪ್ರದೇಶ   

ಬೆಂಗಳೂರು: ರೈಲ್ವೆ ಕಂಟೊನ್ಮೆಂಟ್‌ ಕಾಲೊನಿಯಲ್ಲಿ 371 ಮರಗಳಿರುವ ಎಂಟು ಎಕರೆಗೂ ಹೆಚ್ಚು ಪ್ರದೇಶವನ್ನು ‘ಜೀವವೈವಿಧ್ಯ ಪಾರಂಪರಿಕ ತಾಣ’ ಎಂದು ಘೋಷಿಸಿ, ಅರಣ್ಯ ಇಲಾಖೆ ಅಧಿಸೂಚನೆ ಹೊರಡಿಸಿದೆ.

ವಸಂತನಗರದಲ್ಲಿರುವ ದಂಡು ಪ್ರದೇಶದ ಬಳಿಯ ರೈಲ್ವೆ ಕಾಲೊನಿಯಲ್ಲಿ ವಾಣಿಜ್ಯ ಕೇಂದ್ರ ಅಭಿವೃದ್ಧಿಗೆ 368 ಮರ ತೆರವುಗೊಳಿಸುವುದಕ್ಕೆ ಪರಿಸರ ಕಾರ್ಯಕರ್ತರಿಂದ 2025ರಿಂದ ಏಪ್ರಿಲ್‌ನಿಂದ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕಾಗಿ ಹೋರಾಟವನ್ನೂ ನಡೆಸಿದ್ದರು. ಪರಿಸರ ಕಾರ್ಯಕರ್ತರ ಒತ್ತಾಸೆ ಹಾಗೂ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರ ಭರವಸೆಯಂತೆ ನಗರದಲ್ಲಿ ಮೊದಲ ಬಾರಿಗೆ ‘ಜೀವವೈವಿಧ್ಯ ಪಾರಂಪರಿಕ ತಾಣ’ವಾಗಿದೆ.

ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಆವರಣ 167 ಎಕರೆಯನ್ನು ಈ ಹಿಂದೆ ‘ಜೀವವೈವಿಧ್ಯ ಪಾರಂಪರಿಕ ತಾಣ’ ಎಂದು ಘೋಷಿಸಲಾಗಿತ್ತು. ಇದರ ನಂತರ, ರೈಲ್ವೆ ಕಂಟೊನ್ಮೆಂಟ್‌ ಕಾಲೊನಿ ಈ ಹೆಗ್ಗಳಿಕೆಗೆ ಪಾತ್ರವಾಗಿದೆ.

ADVERTISEMENT

ರಾಜ್ಯ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷರೂ ಆಗಿರುವ ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್‌ 10ರಂದು ಮಂಡಳಿಯ ವಿಶೇಷ ಸಭೆ ನಡೆಯಿತು. ಬೆಂಗಳೂರಿನ ಕಂಟೊನ್ಮೆಂಟ್‌ ರೈಲು ನಿಲ್ದಾಣಕ್ಕೆ ಹೊಂದಿಕೊಂಡಿರುವ 8.61 ಎಕರೆ ಪ್ರದೇಶವನ್ನು ಹಸಿರು ವಲಯವನ್ನಾಗಿ ಪರಿಗಣಿಸಿ, ಸಂರಕ್ಷಣೆಯ ಅಗತ್ಯವನ್ನು ಮನಗಂಡು, ಜೀವ ವೈವಿದ್ಯ ಕಾಯ್ದೆ–2002 ನಿಬಂಧನೆಗಳ ಅಡಿಯಲ್ಲಿ ಈ ಸ್ಥಳವನ್ನು ‘ಜೀವವೈವಿದ್ಯ ಪಾರಂಪರಿಕ ತಾಣ’ (ಬಿಎಚ್‌ಎಸ್‌) ಎಂದು ಘೋಷಿಸಲು ತೀರ್ಮಾನಿಸಲಾಯಿತು.

ಸಾರ್ವಜನಿಕರಿಂದ ಸಾವಿರಾರು ಪ್ರತಿಕ್ರಿಯೆಗಳು ಬಂದಿದ್ದು, ಪ್ರದೇಶದ ರಕ್ಷಣೆಗೆ ಬೆಂಬಲ ಸೂಚಿಸಿವೆ. ಈ ಅಭಿಪ್ರಾಯಗಳನ್ನು ಪರಿಗಣಿಸಿ, ಜೀವ ವೈವಿಧ್ಯ ಪಾರಂಪರಿಕ ತಾಣವೆಂದು ಘೋಷಿಸಲು ರಾಜ್ಯ ಜೀವವೈವಿಧ್ಯ ಮಂಡಳಿಯ ಪ್ರಸ್ತಾವವನ್ನು ಸ್ವೀಕರಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ವೇಗವಾಗಿ ನಗರೀಕರಣಗೊಳ್ಳುತ್ತಿರುವ ಬೆಂಗಳೂರು ಅದರ ಸಾಂಸ್ಕೃತಿಕ, ನೈತಿಕ ಮತ್ತು ಸೌಂದರ್ಯದ ಮಹತ್ವಕ್ಕೂ ಪ್ರಾಮುಖ್ಯ ಹೊಂದಿದೆ. ರೈಲ್ವೆ ಕಂಟೊನ್ಮೆಂಟ್‌ ಕಾಲೊನಿಯ ಪ್ರದೇಶವು ವಸಾಹತುಶಾಹಿ ಯುಗದ ಅಭಿವೃದ್ಧಿ, ಪಾರಂಪರಿಕ ರಚನೆ ಮತ್ತು ದೀರ್ಘಕಾಲದ ಮಾನವ ವಸಾಹತುಗಳೊಂದಿಗೆ ಸಂಬಂಧ ಹೊಂದಿರುವ ಐತಿಹಾಸಿಕ ದಂಡು ಪ್ರದೇಶದ ಭಾಗವಾಗಿದೆ. ಈ ತಾಣದಲ್ಲಿ, 1920ರಲ್ಲಿ ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯ ಚಳವಳಿಗಾರರೊಂದಿಗೆ ಸಂವಾದ ನಡೆಸಿದ ಹಸಿರುವ ವಲಯವಾಗಿದೆ.

ನೈತಿಕ ಮೌಲ್ಯ, ವೇಗವಾದ ನಗರ ವಿಸ್ತರಣೆ ಹಿನ್ನೆಲೆಯಲ್ಲಿ ನೈಸರ್ಗಿಕ ಆವಾಸಸ್ಥಾನಗಳನ್ನು ಸಂರಕ್ಷಿಸುವುದು ಸಮಾಜ ಮತ್ತು ಸರ್ಕಾರಿ ಸಂಸ್ಥೆಗಳ ಸಾಮೂಹಿಕ ನೈತಿಕ ಜವಾಬ್ದಾರಿಯಾಗಿದೆ. ಈ ತಾಣವನ್ನು ರಕ್ಷಿಸುವುದು ಪ್ರಸಕ್ತ ಮತ್ತು ಭವಿಷ್ಯದ ಪೀಳಿಗೆಗೆ ಜೀವವೈವಿಧ್ಯತೆ ಮತ್ತು ಪರಿಸರ ಆರೋಗ್ಯವನ್ನು ರಕ್ಷಿಸುವ ನೈತಿಕ ಬದ್ಧತೆಯನ್ನೂ ಪ್ರತಿಬಿಂಬಿಸುತ್ತದೆ.

ರಾಜಧಾನಿಯ ಪರಿಸರದ ಹೃದಯ ಭಾಗದಲ್ಲಿ 50 ವಿವಿಧ ಜಾತಿ 371 ಮರಗಳಿದ್ದು, ರಮಣೀಯ ಸೌಂದರ್ಯ, ಹಕ್ಕಿಗಳ ಚಿಲಿಪಿಲಿಯ ಹಸಿರು ತಾಣವಾಗಿದೆ. ನಾಗರಿಕರಿಗೆ ಮಾನಸಿಕ ನೆಮ್ಮದಿ ಮತ್ತು ಆಯಾಸರಹಿತ ಶುದ್ಧ ಗಾಳಿಯ ಪರಿಸರ ಒದಗಿಸುತ್ತದೆ. ನಗರದ ವಾಸಯೋಗ್ಯತೆಯನ್ನು ಉತ್ತಮಪಡಿಸಿ, ನೈಸರ್ಗಿಕ ಹಸಿರು ಹೆಗ್ಗುರುತಾಗಿ ಈ ಪ್ರದೇಶ ಕಾರ್ಯನಿರ್ವಹಿಸುತ್ತದೆ ಎಂದು ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಪಾರಂಪಾರಿಕ ತಾಣದ ವಿವರ

ತಾಣ: ಬೆಂಗಳೂರು ರೈಲ್ವೆ ಕಂಟೋನ್ಮೆಂಟ್‌ ಕಾಲೊನಿ ವೃಕ್ಷ ಪ್ರದೇಶ

ಜಿಲ್ಲೆ: ಬೆಂಗಳೂರು ನಗರ

ತಾಲ್ಲೂಕು: ಬೆಂಗಳೂರು ಉತ್ತರ

ಪ್ರದೇಶ: ವಸಂತನಗರ

ವ್ಯಾಪ್ತಿ: 8.61 ಎಕರೆ (34,843 ಚದರ ಮೀಟರ್‌)

ಸರ್ವೆ ಸಂಖ್ಯೆಗಳು: ಸಿಟಿ ಸರ್ವೆ ನಂ. 1047, 1028

ಮರಗಳ ಸಂಖ್ಯೆ: 50 ವಿವಿಧ ಜಾತಿ 371 ಮರ

ಷರತ್ತುಗಳು:

  • ಸೂಕ್ಷ್ಮ ಅನುಮೋದಿತ ನಿರ್ವಹಣಾ ಯೋನೆಯಂತೆ ಪಾರಂಪರಿಕ ತಾಣವನ್ನು ನಿರ್ವಹಿಸಬೇಕು

  • ಸ್ಥಳೀಯರ ಹಕ್ಕುಗಳು ಮತ್ತು ಸವಲತ್ತುಗಳು ಸದಾ ಅಸ್ತಿತ್ವದಲ್ಲಿರುತ್ತದೆ

  • ಪಾರಂಪರಿಕ ತಾಣದ ನಿರ್ವಹಣೆಯಲ್ಲಿ ಸ್ಥಳೀಯ ಜನರು ಸಂಪೂರ್ಣವಾಗಿ ಪಾಲ್ಗೊಳ್ಳಬೇಕು

  • ಜೀವವೈವಿಧ್ಯತೆಯ ಸಂರಕ್ಷಣೆಗೆ ವಿರುದ್ಧವಾದ ಯಾವುದೇ ಚಟುವಟಿಕೆಗಳನ್ನು ಅನುಮತಿಸಲಾಗುವುದಿಲ್ಲ

15 ಸಾವಿರ ಜನರ ಬೆಂಬಲ: ಈಶ್ವರ ಖಂಡ್ರೆ

ಕಂಟೋನ್ಮೆಂಟ್ ರೈಲ್ವೆ ಕಾಲೊನಿಯ 8.61 ಎಕರೆ ಪ್ರದೇಶವನ್ನು ಜೀವವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸುವಂತೆ 15 ಸಾವಿರಕ್ಕೂ ಹೆಚ್ಚು ಜನರು ಬೆಂಬಲ ವ್ಯಕ್ತಪಡಿಸಿದ್ದರು ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಈ ಪ್ರದೇಶದಲ್ಲಿ ಸಸ್ಯ ಸಂಕುಲ, ಪಕ್ಷಿ ಸಂಕುಲ ಮತ್ತು ಕೀಟ ಸಂಕುಲದ ತಾಣವಷ್ಟೇ ಅಲ್ಲದೆ ಬೆಂಗಳೂರು ನಗರಕ್ಕೆ ಅತ್ಯಗತ್ಯವಾದ ಶ್ವಾಸತಾಣವಾಗಿದೆ. 50-60 ವರ್ಷಗಳಿಂದ ಬೆಳೆದ ಬೃಹತ್ ಮರಗಳಿರುವ ಈ ಸುಂದರ ಪ್ರದೇಶವನ್ನು ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರ ಖಾಸಗಿ ಸಂಸ್ಥೆಯೊಂದಕ್ಕೆ 60 ವರ್ಷಗಳ ದೀರ್ಘಾವಧಿಗೆ ಗುತ್ತಿಗೆ ನೀಡಿತ್ತು. ಗುತ್ತಿಗೆ ಪಡೆದ ಸಂಸ್ಥೆ ಇಲ್ಲಿರುವ 368 ಮರಗಳನ್ನು ಕಡಿಯಲು ಅನುಮತಿ ಕೋರಿತ್ತು. ಮರಗಳ ಹನನಕ್ಕೆ ಸ್ಥಳೀಯರು ಸೇರಿದಂತೆ ಪರಿಸರ ಪ್ರೇಮಿಗಳು, ವೃಕ್ಷ ಪ್ರೇಮಿಗಳು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು ಎಂದು ವಿವರ ನೀಡಿದರು.

‘ಜೀವ ವೈವಿಧ್ಯ ಪಾರಂಪರಿಕ ತಾಣ’ ಎಂದು ಘೋಷಿಸುವ ಸಂಬಂಧ ಸಲಹೆ, ಸೂಚನೆ ಮತ್ತು ಆಕ್ಷೇಪಣೆ ಸಲ್ಲಿಸುವಂತೆ ಸಾರ್ವಜನಿಕರನ್ನು ಕೋರಲಾಗಿತ್ತು. ಸುಮಾರು 15 ಸಾವಿರ ಜನರಿಂದ ವೃಕ್ಷ ರಕ್ಷಣೆಗೆ ಮನವಿ ಬಂದಿತ್ತು. ಮರಗಳನ್ನು ಕಡಿದು ವಾಣಿಜ್ಯ ಚಟುವಟಿಕೆ ನಡೆಸದಂತೆ ನಡೆದ ಆನ್‌ಲೈನ್ ಸಹಿ ಸಂಗ್ರಹ ಅಭಿಯಾನದಲ್ಲಿ 3,081 ಜನರು ಬೆಂಬಲ ನೀಡಿದ್ದರು. 368 ವೃಕ್ಷಗಳ ಹನನ ಮಾಡದಂತೆ ನಡೆದ ಮತ್ತೊಂದು ಡಿಜಿಟಲ್ ಅಭಿಯಾನದಲ್ಲಿ 10,670 ಜನರು ಸೂಚಿಸಿದ್ದರು. ಇದರ ಜೊತೆಗೆ 972 ಪರಿಸರ ಪ್ರೇಮಿಗಳು, ಸಾರ್ವಜನಿಕರು ಇ-ಮೇಲ್ ಮೂಲಕ ಪಾರಂಪರಿಕ ತಾಣ ಎಂದು ಘೋಷಿಸುವ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದರು. ವಿರುದ್ಧವಾಗಿ ಕೇವಲ ಎರಡು ಮನವಿ ಮಾತ್ರ ಬಂದಿದ್ದವು ’ ಎಂದು ಅಂಕಿ–ಅಂಶ ನೀಡಿದರು.

‘368 ಮರ ಕಡಿಯದಂತೆ ಪರಿಸರ ಕಾರ್ಯಕರ್ತರು ಮನವಿ ಮಾಡಿದ್ದರು. ಇಲ್ಲಿ ಸಮೀಕ್ಷೆ ನಡೆಸಿದಾಗ 371 ಮರಗಳಿರುವುದು ದೃಢಪಟ್ಟಿತು’ ಎಂದರು.

ಮುಂದಿನ ಪೀಳಿಗೆಗೆ ಹಸಿರನ್ನು ರಕ್ಷಿಸಿಕೊಟ್ಟ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಅಭಿನಂದನೆಗಳು. ಮರಗಳನ್ನು ಉಳಿಸಿ ಹಸಿರನ್ನು ಸಂರಕ್ಷಿಸಿ ಉಸಿರಾಗಿಸಲು ಎಲ್ಲರೂ ಪ್ರಯತ್ನಪಡಬೇಕು.
ಎ.ಟಿ. ರಾಮಸ್ವಾಮಿ, ಅಧ್ಯಕ್ಷರು, ‘ಪರಿಸರಕ್ಕಾಗಿ ನಾವು’ ಸಂಘಟನೆ 
ನಗರದ ವಾಯು ಗುಣಮಟ್ಟವು ಕುಸಿದಿದೆ. ಹಸಿರು ಹೊದಿಕೆ ಕ್ಷೀಣಿಸಿದೆ. ಈ ಸಂದರ್ಭದಲ್ಲಿ 371 ಮರಗಳನ್ನು ಸಂರಕ್ಷಿಸುವ ನಿರ್ಧಾರ ಐತಿಹಾಸಿಕವಾದುದು.
ಈಶ್ವರ ಬಿ. ಖಂಡ್ರೆ, ಅರಣ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.