ADVERTISEMENT

ಭೂ ಹಗರಣ: ಬೈರತಿ ಬಸವರಾಜು ರಾಜೀನಾಮೆಗೆ ಎಎಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 20:16 IST
Last Updated 20 ಡಿಸೆಂಬರ್ 2021, 20:16 IST
ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಮೈಸೂರು ಬ್ಯಾಂಕ್‌ ವೃತ್ತದ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು- ಪ್ರಜಾವಾಣಿ ಚಿತ್ರ
ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಮೈಸೂರು ಬ್ಯಾಂಕ್‌ ವೃತ್ತದ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು- ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಭೂಹಗರಣದ ಆರೋಪ ಎದುರಿಸುತ್ತಿರುವ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು’ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ಆಗ್ರಹಿಸಿದೆ.

ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಪಕ್ಷದ ಕಾರ್ಯಕರ್ತರು ಬೈರತಿ ಬಸವರಾಜು ವಿರುದ್ಧ ಘೋಷಣೆಗಳನ್ನು ಕೂಗಿದರು.

ಎಎಪಿ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್‌ ದಾಸರಿ, ‘35 ಎಕರೆ ಜಮೀನು ಕಬಳಿಕೆ ಮಾಡಿರುವ ಪ್ರಕರಣದಲ್ಲಿ ಬೈರತಿ ಅವರಿಗೆ ನಗರದ 42ನೇ ಎಸಿಎಂಎಂ ನ್ಯಾಯಾಲಯವು ನ. 25ರಂದೇ ಸಮನ್ಸ್‌ ಜಾರಿಗೊಳಿಸಿದೆ. ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದೆ. ಬೈರತಿ ವಿರುದ್ಧ ನಕಲಿ ದಾಖಲೆ ಸೃಷ್ಟಿ, ವಂಚನೆ ಸೇರಿದಂತೆ ಹಲವು ಗಂಭೀರ ಆರೋಪಗಳೂ ಇವೆ. ಹೀಗಾಗಿ ಸಚಿವ ಸ್ಥಾನದಲ್ಲಿ ಮುಂದುವರಿಯಲು ಅವರು ಯೋಗ್ಯರಲ್ಲ’ ಎಂದು ಹೇಳಿದರು.

ADVERTISEMENT

ನಗರ ಘಟಕದ ಉಪಾಧ್ಯಕ್ಷ ಬಿ.ಟಿ.ನಾಗಣ್ಣ, ‘ಬೈರತಿ ಅವರು ಸಚಿವ ಸ್ಥಾನದಲ್ಲಿ ಮುಂದುವರಿದರೆ ತಮ್ಮ ಪ್ರಭಾವ ಬಳಸಿ ತನಿಖೆಯ ಹಾದಿ ತಪ್ಪಿಸಬಹುದು. ಹೀಗಾಗಿ ಅವರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ಪಡೆಯಬೇಕು’ ಎಂದು ಒತ್ತಾಯಿಸಿದರು.

ನಗರ ಘಟಕದ ಉಪಾಧ್ಯಕ್ಷ ಸುರೇಶ್‌ ರಾಥೋಡ್‌, ‘ಇದು ಭ್ರಷ್ಟ ಶಾಸಕರನ್ನು ಖರೀದಿಸಿ ರಚನೆಗೊಂಡ ಸರ್ಕಾರ. ಅಧಿಕಾರದಲ್ಲಿದ್ದಷ್ಟು ದಿನ ಲೂಟಿ ಮಾಡುವುದೇ ಅವರ ಧ್ಯೇಯ. ಭ್ರಷ್ಟರಿಗೇ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ನೀಡಲಾಗಿದೆ’ ಎಂದು ಆರೋಪಿಸಿದರು.

ಮುಖಂಡರಾದ ಸುಹಾಸಿನಿ, ಜಗದೀಶ್‌ ವಿ.ಸದಂ, ಕೇಶವ್‌ ಕುಮಾರ್‌, ರಾಜಶೇಖರ್‌ ದೊಡ್ಡಣ್ಣ, ಸತೀಶ್‌ ಗೌಡ, ಅಶೋಕ್‌ ಮೃತ್ಯುಂಜಯ, ಪದ್ಮಾ ಗಿರೀಶ್‌, ಉಷಾ ಮೋಹನ್‌, ಸುಮನ್‌ ಪ್ರಶಾಂತ್‌, ಜಗದೀಶ್‌ ಚಂದ್ರ ಹಾಗೂ ಗೋಪಿನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.