ADVERTISEMENT

‘ಆಪ್‌ ಕೇರ್‌’ಗೆ ಚಾಲನೆ | ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲ: ಆರೋಪ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 13:49 IST
Last Updated 6 ಆಗಸ್ಟ್ 2020, 13:49 IST

ಬೆಂಗಳೂರು: ಕೊರೊನಾ ಸೋಂಕು ಹರಡುವುದನ್ನು ತಡೆಯಲು, ಮನೆ–ಮನೆಗೆ ತೆರಳಿ ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡುವ ‘ಆಪ್‌ ಕೇರ್‌’ ಕಾರ್ಯಕ್ರಮಕ್ಕೆ ಆಮ್‌ ಆದ್ಮಿ ಪಕ್ಷ ಚಾಲನೆ ನೀಡಿದೆ.

‘ಪಿಪಿಇ ಕಿಟ್‌ ಧರಿಸಿ ಹೊರಡುವ ಪಕ್ಷದ ಕಾರ್ಯಕರ್ತರು, ಸೋಂಕಿನ ಲಕ್ಷಣವಿರುವ ನಾಗರಿಕರ ಮನೆಗೆ ತೆರಳಿ ಅವರ ದೇಹದ ತಾಪಮಾನ, ಆಮ್ಲಜನಕದ ಮಟ್ಟ ಪರೀಕ್ಷಿಸುತ್ತಾರೆ. ಮನೆಗಳನ್ನು ಸ್ಯಾನಿಟೈಸ್‌ ಕೂಡ ಮಾಡಲಿದ್ದಾರೆ. ಸೋಂಕಿನ ಕುರಿತು ಮಾಹಿತಿ ನೀಡಿ, ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಿದ್ದಾರೆ’ ಎಂದು ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್‌ ದಾಸರಿ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬಿಬಿಎಂಪಿ ಆರೋಗ್ಯ ಅಧಿಕಾರಿಗಳ, ಆಸ್ಪತ್ರೆಗಳ ಸಂಪರ್ಕ ವಿವರಗಳನ್ನು ನಾಗರಿಕರಿಗೆ ಒದಗಿಸಲಾಗುವುದು’ ಎಂದು ಅವರು ಹೇಳಿದರು.

ADVERTISEMENT

ಸರ್ಕಾರ ವಿಫಲ:‘ರಾಜ್ಯದಲ್ಲಿ ಏಪ್ರಿಲ್‌–ಮೇನಲ್ಲಿ ಕೊರೊನಾ ನಿಯಂತ್ರಣದಲ್ಲಿತ್ತು ಮತ್ತು ದೇಶದಲ್ಲಿಯೇ 11ನೇ ಸ್ಥಾನದಲ್ಲಿತ್ತು. ಸರ್ಕಾರ ಸೋಂಕು ತಡೆಯಲು ಸಮರ್ಪಕ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಿಲ್ಲ. ಜುಲೈನಲ್ಲಿ ಪ್ರಕರಣಗಳ ಸಂಖ್ಯೆ ವಿಪರೀತ ಹೆಚ್ಚಾಗಿ ಈಗ 4ನೇ ಸ್ಥಾನದಲ್ಲಿದೆ. ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ದೂರಿದರು.

‘ದೆಹಲಿಯಂತಹ ರಾಜ್ಯಗಳಲ್ಲಿ ವೈದ್ಯಕೀಯ ಉಪಕರಣಗಳು, ಪರೀಕ್ಷೆ ಹಾಗೂ ಚಿಕಿತ್ಸಾ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಜಾರಿ ಮಾಡಿವೆ. ಈ ಯಶಸ್ಸು ನಮ್ಮ ಕಣ್ಣ ಮುಂದೆ ಇದ್ದರೂ ರಾಜ್ಯ ಸರ್ಕಾರ ಇದನ್ನು ಮಾದರಿಯಾಗಿ ಪರಿಗಣಿಸಲಿಲ್ಲ’ ಎಂದು ಅವರು ಆರೋಪಿಸಿದರು.

‘ಆಶಾ ಕಾರ್ಯಕರ್ತೆಯರ ವೇತನ ಸಮಸ್ಯೆಯನ್ನು ಮೂರು ತಿಂಗಳಾದರೂ ಇತ್ಯರ್ಥ ಮಾಡಿಲ್ಲ. ಪೌರಕಾರ್ಮಿಕರಿಗೆ ಸರಿಯಾದ ಸೌಲಭ್ಯ ನೀಡಿಲ್ಲ’ ಎಂದರು.

ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ಸದಂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.