ADVERTISEMENT

ಅಕ್ರಮ ಆರೋಪ: ಎಸಿಬಿಗೆ ಎಎಪಿ ದೂರು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 23:24 IST
Last Updated 14 ಆಗಸ್ಟ್ 2020, 23:24 IST
   

ಬೆಂಗಳೂರು: ಬಿಬಿಎಂಪಿಯಲ್ಲಿ ಟೆಂಡರ್‌ ಪ್ರಕ್ರಿಯೆಯಲ್ಲಿ ನೂರಾರು ಕೋಟಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಮುಖಂಡರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಶುಕ್ರವಾರ ದೂರು ನೀಡಿದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳ ವಿಭಾಗ ಹಾಗೂ ರಾಜಕಾಲುವೆ ವಿಭಾಗಗಳಲ್ಲಿ ನಕಲಿ ದಾಖಲೆಗಳನ್ನು ನೀಡಿ ಕೋಟ್ಯಂತರ ರೂಪಾಯಿಗಳ ಟೆಂಡರ್‌ಗಳನ್ನು ಗುತ್ತಿಗೆದಾರರು ಅಕ್ರಮ ಮಾರ್ಗದಲ್ಲಿ ಪಡೆದಿದ್ದಾರೆ. ಕಾಮಗಾರಿಯ ಗುತ್ತಿಗೆ ನೀಡುವಾಗ ಅಧಿಕಾರಿಗಳು ಸರಿಯಾಗಿ ತಾಂತ್ರಿಕ ಮೌಲ್ಯಮಾಪನ ಮಾಡಿಲ್ಲ. ಅಕ್ರಮದಲ್ಲಿ ಸಚಿವ ವಿ.ಸೋಮಣ್ಣ, ಶಾಸಕರಾದ ಅರವಿಂದ ಲಿಂಬಾವಳಿ, ಎಸ್.ಆರ್.ವಿಶ್ವನಾಥ್ , ಸತೀಶ್ ರೆಡ್ಡಿ ಹಾಗೂ ಬಿಜೆಪಿ ಮುಖಂಡ ಮುನಿರತ್ನ ಭಾಗಿಯಾಗಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘ಟೆಂಡರ್‌ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋ‍ಪಿಸಿ ಮೇಯರ್‌ ಗೌತಮ್‌ ಕುಮಾರ್ ಅವರೇ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್‌ ಅವರಿಗೆ ಪತ್ರ ಬರೆದಿದ್ದಾರೆ. ಇದಕ್ಕಿಂತ ಪ್ರಬಲ ಸಾಕ್ಷಿ ಮತ್ತೊಂದಿಲ್ಲ. ಮೇಯರ್ ಅವರನ್ನೂ ಸಹ ಸಾಕ್ಷಿ ಎಂದು ಪರಿಗಣಿಸಬೇಕು’ ಎಂದು ಕೋರಲಾಗಿದೆ.

ADVERTISEMENT

‘ನಕಲಿ ಪ್ರಮಾಣ ಪತ್ರ ಇದ್ದರೂ ಒಟ್ಟು ₹ 400 ಕೋಟಿ ಮೊತ್ತದ ಕಾಮಗಾರಿ ನೀಡುವಲ್ಲಿ ಆ ಭಾಗದ ಪ್ರಭಾವಿ ಜನಪ್ರತಿನಿಧಿಗಳ
ಕೈವಾಡ ಇದ್ದೇ ಇದೆ. ಈ ಅಕ್ರಮಕ್ಕೆ ಸಹಕರಿಸಿದ ಕಾರ್ಯಪಾಲಕ ಎಂಜಿನಿಯರ್‌ಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.