ADVERTISEMENT

ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ಲಕ್ಷಾಂತರ ಹಣ ವಂಚನೆ: ಆರೋಪಿ ಸಿಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 6:29 IST
Last Updated 2 ಜುಲೈ 2020, 6:29 IST
ಬಂಧಿತ ಶಿವಕುಮಾರ್ ಹೊಸಹಳ್ಳಿ
ಬಂಧಿತ ಶಿವಕುಮಾರ್ ಹೊಸಹಳ್ಳಿ   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕುಟುಂಬದವರು ಆತ್ಮೀಯರೆಂದು ನಂಬಿಸಿ, ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ವಂಚಿಸುತ್ತಿದ್ದ ವ್ಯಕ್ತಿಯನ್ನು ಕೇಂದ್ರ ಅಪರಾಧ ದಳದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಹಾವೇರಿಯ ಶಿವಕುಮಾರ್ ಹೊಸಳ್ಳಿ ಬಂಧಿತ ಆರೋಪಿ. ಉತ್ತರ ಕರ್ನಾಟಕ ಭಾಗದ ನೂರಾರು ಜನರಿಗೆ ಸರ್ಕಾರಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಲಕ್ಷಾಂತರ ಹಣ ಪಡೆದು ವಂಚಿಸಿದ್ದಾನೆ ಎಂದು ಸಿಸಿಬಿ ಜಂಟಿ ಪೊಲೀಸ್‌ ಕಮಿಷನರ್‌ ಸಂದೀಪ ಪಾಟೀಲ ತಿಳಿಸಿದರು.

'ನನಗೆ ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಸದಸ್ಯರು ತುಂಬ ಆತ್ಮೀಯರು‌. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವು ಹುದ್ದೆಗಳು ಖಾಲಿ ಇವೆ, ನಿಮಗೆ ಕೆಲಸ ಕೊಡಿಸಬೇಕಾದರೆ ಇಂತಿಷ್ಟು ಹಣ ನೀಡಬೇಕು’ ಎಂದು ಹಣ ಪಡೆದು, ಬಳಿಕ ವಂಚನೆ ಮಾಡುತ್ತಿದ್ದುದ್ದು ಆರೋಪಿಯ ವಿಚಾರಣೆಯಿಂದ ಗೊತ್ತಾಗಿದೆ.

ADVERTISEMENT

ಅಲ್ಲದೆ, ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಕೆಲಸವನ್ನು ಗುತ್ತಿಗೆ ಆಧಾರದಲ್ಲಿ ಮಾಡಿಕೊಡುವುದಾಗಿ ನಂಬಿಸುತ್ತಿದ್ದ. ಲೋಕೋಪಯೋಗಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಕಾಮಗಾರಿಯ ಬಿಲ್ ಕ್ಲಿಯರ್ ಮಾಡಿಸುವುದಾಗಿ ಲಕ್ಷಾಂತರ ಹಣ ಪಡೆದಿದ್ದ. ಈ ವಿಷಯವನ್ನು ಕೆಲವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಬಳಿ ಹೇಳಿಕೊಂಡಿದ್ದರು. ಹೀಗಾಗಿ, ಗೃಹ ಸಚಿವರು ಸಿಸಿಬಿ ತನಿಖೆಗೆ ಜವಾಬ್ದಾರಿ‌ ಹೊಣೆ ನೀಡಿದ್ದರು.

‘ಹಣ ಪಡೆದು ವಂಚಿಸಿರುವ ಬಗ್ಗೆ ಆರೋಪಿಯೇ ಬಾಯಿಬಿಟ್ಟಿದ್ದಾನೆ. ತನಿಖೆ ಮುಂದುವರಿದಿದೆ’ ಎಂದೂ ಸಂದೀಪ್ ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.