ADVERTISEMENT

ಬಸವನಗುಡಿಯ ಶ್ರೀ ಗುರುರಾಘವೇಂದ್ರ ಬ್ಯಾಂಕ್‌ ಮೇಲೆ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 14:53 IST
Last Updated 18 ಜೂನ್ 2020, 14:53 IST
ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಣವನ್ನು ವಂಚಿಸಿರುವ ಹಿನ್ನೆಲೆಯಲ್ಲಿ ಎಸಿಬಿ ಸಿಬ್ಬಂದಿಗಳು ಪರಿಶೀಲಿಸುತ್ತಿದ್ದು ಗ್ರಾಹಕರು ಸ್ಥಳಕ್ಕೆ ಹಾಜಾರ್ ಆಗಿರುವ ದೃಶ್ಯ
ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಣವನ್ನು ವಂಚಿಸಿರುವ ಹಿನ್ನೆಲೆಯಲ್ಲಿ ಎಸಿಬಿ ಸಿಬ್ಬಂದಿಗಳು ಪರಿಶೀಲಿಸುತ್ತಿದ್ದು ಗ್ರಾಹಕರು ಸ್ಥಳಕ್ಕೆ ಹಾಜಾರ್ ಆಗಿರುವ ದೃಶ್ಯ   

ಬೆಂಗಳೂರು: ಸಾವಿರಾರು ಗ್ರಾಹಕರ ಠೇವಣಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು, ಭಾರಿ ಅವ್ಯವಹಾರ ನಡೆಸಿದ ಆರೋಪಕ್ಕೊಳಗಾಗಿರುವ ಬಸವನಗುಡಿ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕಿನ‌‌ ಪ್ರಧಾನ ಕಚೇರಿ, ಶಾಖಾ ಕಚೇರಿ ಸೇರಿದಂತೆ ಐದು ಸ್ಥಳಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಗುರುವಾರ ಬೆಳಿಗ್ಗೆ ದಾಳಿ ನಡೆಸಿ, ದಾಖಲೆ ಪರಿಶೀಲಿಸುತ್ತಿದ್ದಾರೆ.

ಶಂಕರಮಠ ಬಳಿಯ ಶ್ರೀ ಗುರುಸಾರ್ವಭೌಮ ಸೌಹಾರ್ದ ಸಹಕಾರ ಸೊಸೈಟಿ, ವಜಾಗೊಂಡ ಬ್ಯಾಂಕಿನ ಆಡಳಿತ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ವಾಸುದೇವ ಮಯ್ಯ ಅವರ ಚಿಕ್ಕಲ್ಲಸಂದ್ರದ ಮನೆ ಮತ್ತು ಬ್ಯಾಂಕಿನ ಅಧ್ಯಕ್ಷ ರಾಮಕೃಷ್ಣ ಅವರ ಬಸವನಗುಡಿಯ ಮನೆಗಳನ್ನೂ ಶೋಧಿಸಲಾಗುತ್ತಿದೆ.

ಗ್ರಾಹಕರ ಹಣದಲ್ಲಿ ₹ 1400 ಕೋಟಿಯನ್ನು ಬ್ಯಾಂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಅಕ್ರಮವಾಗಿ ವರ್ಗಾವಣೆ ಮಾಡಿ ಅವ್ಯವಹಾರ ನಡೆಸಿರುವುದು ರಿಸರ್ವ್‌ ಬ್ಯಾಂಕ್‌ ಮತ್ತು ಸಹಕಾರ ಸಂಘಗಳ ರಿಜಿಸ್ಟ್ರಾರ್ ವಿಚಾರಣೆಯಿಂದ ಬಯಲಿಗೆ ಬಂದಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ADVERTISEMENT

ರಿಸರ್ವ್‌ ಬ್ಯಾಂಕ್‌ ನಿಯಮಗಳಿಗೆ ವಿರುದ್ಧವಾಗಿ ಕೃತಕ ಠೇವಣಿ ಸೃಷ್ಟಿಸಿ 60 ಕಾಲ್ಪನಿಕ ಗ್ರಾಹಕರಿಗೆ ₹ 150 ಕೋಟಿ ಮಂಜೂರು ಮಾಡಲಾಗಿದೆ. ವಸೂಲಾಗದ ಸಾಲದ ಪ್ರಮಾಣ ಶೇ 1ಕ್ಕಿಂತಲೂ ಕಡಿಮೆ ಇದೆ ಎಂದು ಬ್ಯಾಂಕಿನ ಪ್ರಚಾರ ಸಾಹಿತ್ಯದಲ್ಲಿ (ಬ್ರೌಷರ್‌) ಹೇಳಲಾಗಿದೆ. ಆದರೆ, ವಾಸ್ತವವಾಗಿ ಶೇ 25 ರಿಂದ 30ರಷ್ಟಿರುವುದು ತನಿಖೆಯಿಂದ ಗೊತ್ತಾಗಿದೆ.

ದಾಖಲೆಗಳೇ ಇಲ್ಲ

ಗುರು ರಾಘವೇಂದ್ರ ಬ್ಯಾಂಕ್‌ನಲ್ಲಿ 2,876 ಸಾಲದ ಖಾತೆಗಳು ಹಾಗೂ ಇವುಗಳಿಗೆ ನೀಡಿರುವ ಸಾಲಕ್ಕೆ ದಾಖಲೆಗಳೇ ಇಲ್ಲ ಎಂದು ಸಹಕಾರಿ ಸಂಘಗಳ ರಿಜಿಸ್ಟ್ರಾರ್‌ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.

ಬ್ಯಾಂಕ್‌ ಸಿಕ್ಕಾಪಟ್ಟೆ ನಷ್ಟದಲ್ಲಿದ್ದರೂ ಲಾಭದಲ್ಲಿದೆ ಎಂಬಂತೆ ಬಿಂಬಿಸಲಾಗಿದೆ. ₹149 ಕೋಟಿ ಲಾಭ ಮಾಡಿದೆ ಎಂದು ದಾಖಲೆಯಲ್ಲಿ ತೋರಿಸಲಾಗಿದೆ. ₹ 2,000 ಕೋಟಿಗೂ ಹೆಚ್ಚು ಠೇವಣಿ ಸಂಗ್ರಹಿಸಿದ್ದು, ₹ 650 ಕೋಟಿಯಷ್ಟು ಸಾಂಸ್ಥಿಕ ಠೇವಣಿಯೂ ಸೇರಿದೆ. ಗುರುಸಾರ್ವಭೌಮ ಸೌಹಾರ್ದ ಸಹಕಾರಿ ಸಂಘಕ್ಕೆ ಬ್ಯಾಂಕಿನ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಆರೋಪವೂ ಬ್ಯಾಂಕಿನ‌ ಸಿಇಒ ಹಾಗೂ ಅಧ್ಯಕ್ಷರ ಮೇಲಿದೆ.

ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ಜಾರಿ ನಿರ್ದೇಶನಾಲಯ (ಇ.ಡಿ) ಗುರುರಾಘವೇಂದ್ರ ಬ್ಯಾಂಕ್‌ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದೆ. ಈಚೆಗಷ್ಟೇ ಸಹಕಾರ ಸಂಘಗಳ ರಿಜಿಸ್ಟ್ರಾರ್‌ ಪ್ರಸನ್ನ ಕುಮಾರ್‌, ಬ್ಯಾಂಕ್‌ ಆಡಳಿತ ಮಂಡಳಿಯನ್ನು ವಜಾ ಮಾಡಿ ದಿವಾಕರ್‌ ಅವರನ್ನು ಆಡಳಿತಾಧಿಕಾರಿ ಆಗಿ ನೇಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.