ADVERTISEMENT

ಲಂಚ ಪ್ರಕರಣ: ಆರ್‌ಐ, ಎಚ್‌ಸಿ ಬಂಧನ, ಇನ್‌ಸ್ಪೆಕ್ಟರ್‌ ಪರಾರಿ

ಮ್ಯುಟೇಷನ್‌ ಬದಲಾವಣೆಗೆ ₹ 11 ಲಕ್ಷ ಲಂಚ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 6:38 IST
Last Updated 8 ಜನವರಿ 2021, 6:38 IST
ರಾಜು
ರಾಜು   

ಬೆಂಗಳೂರು: ಬೆಂಗಳೂರು ಉತ್ತರ ತಾಲ್ಲೂಕಿನ ಜಾಲ ಹೋಬಳಿಯಲ್ಲಿ ವ್ಯಕ್ತಿಯೊಬ್ಬರು ಖರೀದಿಸಿದ್ದ 5 ಎಕರೆ ಜಮೀನಿನ ಮ್ಯುಟೇಷನ್‌ ಬದಲಾವಣೆ ಮತ್ತು ನ್ಯಾಯಾಲಯದಲ್ಲಿ ದಾವೆ ಇರುವ ಕುರಿತು ಫಲಕ ಅಳವಡಿಸಲು ₹ 11 ಲಕ್ಷ ಲಂಚ ಪಡೆಯುತ್ತಿದ್ದ ರಾಜಸ್ವ ನಿರೀಕ್ಷಕ ಮತ್ತು ಹೆಡ್‌ ಕಾನ್‌ಸ್ಟೆಬಲ್‌ ಒಬ್ಬರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶುಕ್ರವಾರ ಬಂಧಿಸಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾಗಿರುವ ಚಿಕ್ಕಜಾಲ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಪರಾರಿಯಾಗಿದ್ದಾರೆ.

ಜಾಲ ಹೋಬಳಿಯ ಕಂದಾಯ ನಿರೀಕ್ಷಕ ಎಚ್‌. ಪುಟ್ಟ ಹನುಮಯ್ಯ ಅಲಿಯಾಸ್‌ ಪ್ರವೀಣ್ ಮತ್ತು ಚಿಕ್ಕಜಾಲ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ರಾಜು ಬಂಧಿತರು. ಚಿಕ್ಕಜಾಲ ಠಾಣೆಯ ಇನ್‌ಸ್ಪೆಕ್ಟರ್‌ ಯಶವಂತ ಎಸಿಬಿ ದಾಳಿಯ ವಿಷಯ ತಿಳಿದು ಪರಾರಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ.

ಪ್ರಕರಣದ ದೂರುದಾರರು, ಜಾಲ ಹೋಂಬಳಿಯಲ್ಲಿ 2018ರಲ್ಲಿ 5 ಎಕರೆ ಜಮೀನು ಖರೀದಿಸಿದ್ದರು. ಅದೇ ಜಮೀನನ್ನು ಪುನಃ ಬೇರೊಬ್ಬರಿಗೆ ಮಾರಾಟ ಮಾಡಲು ಮೂಲ ಮಾಲೀಕರು ಒಪ್ಪಂದ ಮಾಡಿಕೊಂಡಿದ್ದರು. ಈ ಕುರಿತು ದೂರುದಾರರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಜಮೀನು ಮರು ಮಾರಾಟಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.

ADVERTISEMENT

2018ರ ಖರೀದಿ ಆಧಾರದಲ್ಲಿ ಜಮೀನಿನ ಮ್ಯುಟೇಷನ್‌ನಲ್ಲಿ ಹೆಸರು ಬದಲಾವಣೆ ಮಾಡುವಂತೆ ಖರೀದಿದಾರರು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕ್ರಿಯೆ ಪೂರ್ಣಗೊಳಿಸಲು ₹ 50 ಲಕ್ಷ ಲಂಚ ನೀಡುವಂತೆ ಪುಟ್ಟ ಹನುಮಯ್ಯ ಬೇಡಿಕೆ ಇಟ್ಟಿದ್ದರು. ಜಮೀನಿನ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವ ಕುರಿತು ಸ್ಥಳದಲ್ಲಿ ಮಾಹಿತಿ ಫಲಕ ಅಳವಡಿಸಿ, ರಕ್ಷಣೆ ನೀಡುವಂತೆ ದೂರುದಾರರು ಚಿಕ್ಕಜಾಲ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿದ್ದರು. ₹ 10 ಲಕ್ಷ ಲಂಚಕ್ಕೆ ಇನ್‌ಸ್ಪೆಕ್ಟರ್‌ ಬೇಡಿಕೆ ಇಟ್ಟಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಜಮೀನು ಮಾಲೀಕರು ಎಸಿಬಿಗೆ ದೂರು ನೀಡಿದ್ದರು. ಶುಕ್ರವಾರ ಬೆಳಿಗ್ಗೆ ಪುಟ್ಟ ಹನುಮಯ್ಯ ಮೊದಲ ಕಂತಿನ ₹ 6 ಲಕ್ಷ ಪಡೆಯುತ್ತಿದ್ದಾಗ ದಾಳಿಮಾಡಿ ಅವರನ್ನು ಬಂಧಿಸಲಾಯಿತು. ಇನ್‌ಸ್ಪೆಕ್ಟರ್‌ ಯಶವಂತ ಪರವಾಗಿ ಹೆಡ್‌ ಕಾನ್‌ಸ್ಟೆಬಲ್‌ ರಾಜು ಮೊದಲ ಕಂತಿನ ₹ 5 ಲಕ್ಷ ಪಡೆಯುತ್ತಿದ್ದಾಗ ಕಾರ್ಯಾಚರಣೆ ನಡೆಸಿ ಅವರನ್ನೂ ಬಂಧಿಸಲಾಯಿತು. ಎಸಿಬಿ ಬೆಂಗಳೂರು ನಗರ ಘಟಕದ ಎಸ್‌ಪಿ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.