ಎ.ಐ ಚಿತ್ರ
ಸ್ವಯಂ ಚಾಲಿತವಾಗಿ ಟ್ರಾಫಿಕ್ ನಿಯಂತ್ರಿಸಲು ಈ ಸಿಗ್ನಲಿಂಗ್ ವ್ಯವಸ್ಥೆ | ಸಾರಿಗೆ ಸಂದಣಿ ಆಧರಿಸಿ ಕಾಲ ಬದ್ಧವಾಗಿ ಡೈನಮಿಕ್ ಬದಲಾವಣೆ
ಬೆಂಗಳೂರು: ನಗರದ 110 ಜಂಕ್ಷನ್‌ಗಳಲ್ಲಿ ಅಡಾಪ್ಟಿವ್ ಟ್ರಾಫಿಕ್ ಸಿಗ್ನಲ್‌ಗಳನ್ನು ₹56.45 ಕೋಟಿ ವೆಚ್ಚದಲ್ಲಿ ಅಳವಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸಭೆಯ ಬಳಿಕ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸುದ್ಧಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಇದು 2 ನೇ ಹಂತ ಯೋಜನೆಯಾಗಿದೆ. ಈ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಸುವ ಮೂಲಕ ಸ್ವಯಂ ಚಾಲಿತವಾಗಿ ಟ್ರಾಫಿಕ್ ನಿಯಂತ್ರಿಸಲು ಸಾಧ್ಯವಾಗುತ್ತದೆ. ಸಾರಿಗೆ ಸಂದಣಿ ಆಧರಿಸಿ ಕಾಲ ಬದ್ಧವಾಗಿ ಬದಲಾವಣೆಯಾಗುವ ಬದಲು, ಕ್ರಿಯಾಶೀಲವಾಗಿ (ಡೈನಮಿಕ್) ಬದಲಾವಣೆಯಾಗುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
ರೋಬೋಟಿಕ್ ವೈದ್ಯಕೀಯ ಉಪಕರಣ:
ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್ ಸಂಸ್ಥೆಗೆ ರೋಬೋಟಿಕ್ ಉಪಕರಣವನ್ನು ₹20 ಕೋಟಿ ಅಂದಾಜು ಮೊತ್ತದಲ್ಲಿ ಖರೀದಿಸಲು ಅನುಮೋದನೆ ನೀಡಲಾಯಿತು.
2 ನೇ ಹಂತದ ಒಳಚರಂಡಿ:
ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ನಗರಕ್ಕೆ 2ನೇ ಹಂತದ ಒಳಚರಂಡಿ ವ್ಯವಸ್ಥೆ ಒದಗಿಸುವ ₹128.74 ಕೋಟಿಗಳ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಅನುಮೋದನೆ ನೀಡಲಾಯಿತು.
ಪ್ರಮುಖ ತೀರ್ಮಾನಗಳು:
*ಹೊರಮಾವುನಲ್ಲಿರುವ 20 ಎಂಎಲ್‌ಡಿ ಬಳಸಿದ ನೀರು ಸಂಸ್ಕರಣಾ ಘಟಕವನ್ನು 5 ವರ್ಷಗಳ ಅವಧಿಗೆ ಸಮಗ್ರ ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡಲು ಅನುಮತಿ ನೀಡಲಾಗಿದೆ. ಇದರ ವೆಚ್ಚ ₹15 ಕೋಟಿ. ಇದನ್ನು ಕೆಟಿಪಿಪಿ ಕಾಯ್ದೆ ಅಡಿ ಅನುಷ್ಠಾನಗೊಳಿಸಬೇಕು. ಅನುದಾನವನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಆಂತರಿಕ ಸಂಪನ್ಮೂಲದಿಂದ ಭರಿಸಬೇಕು
*ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪಿಪಿಪಿ ಮಾದರಿಯಲ್ಲಿ ಪ್ರತಿ ದಿನ 1,750 ಮೆಟ್ರಿಕ್ ಟನ್ ಕಟ್ಟಡಗಳ ಹಾಗೂ ನಿರ್ಮಾಣ ಸಾಮಗ್ರಿಗಳ ಅವಶೇಷ ತ್ಯಾಜ್ಯ ಸಂಗ್ರಹಣೆ ವಿಲೇವಾರಿ ಮಾಡುವ (750 ಟಿಪಿಡಿಯ ಒಂದು ಮತ್ತು 500 ಟಿಪಿಡಿಯ ಎರಡು ಪ್ಯಾಕೇಜ್‌ಗಳು) ಯೋಜನೆಗೆ ಒಪ್ಪಿಗೆ
*ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಜಿಪಿಆರ್ ರೈಸಿಂಗ್ ಮೇನ್ ಸೇರಿ ರಾಜಕಾಲುವೆ ಬಳಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಆವರಣದಲ್ಲಿರುವ ನೀರಿನ ಪಂಪಿಂಗ್ ಸ್ಟೇಷನ್, ದೇವನಹಳ್ಳಿ ಬಳಿಯ ಐಟಿ ಪಾರ್ಕ್ ಕೈಗಾರಿಕಾ ಪ್ರದೇಶದಲ್ಲಿ 40 ಎಂಎಲ್‌ಡಿ ಸಾಮರ್ಥ್ಯದ ಮೂರನೇ ಹಂತದ ಸಂಸ್ಕರಣಾ ಘಟಕದ 5 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ₹45 ಕೋಟಿ
*ಎಲೆಮಲ್ಲಪ್ಪಚೆಟ್ಟಿಯಲ್ಲಿರುವ 15 ದಶ ಲಕ್ಷ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕವನ್ನು ಮತ್ತು ಸಾದರಮಂಗಲದಲ್ಲಿ 5 ದಶ ಲಕ್ಷ ಲೀಟರ್ ಸಾಮರ್ಥ್ಯದ ಐಎಸ್‌ಪಿಎಸ್ ಮತ್ತು 3.5 ಕಿ.ಮೀಗಳ 450 ಮಿ.ಮೀ ಪೈಪ್‌ಲೈನ್ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ₹19.07 ಕೋಟಿ.
ಇಲಾಖಾ ತನಿಖೆಯ ಶಿಫಾರಸು ತಿರಸ್ಕಾರ
ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರ ಅಸ್ವಾಭಾವಿಕ ಮರಣದ ಕುರಿತು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಎನ್.ಕೇಶವನಾರಾಯಣ ನೇತೃತ್ವದ ವಿಚಾರಣಾ ಆಯೋಗದ ವರದಿಯನ್ನು ಸಚಿವ ಸಂಪುಟವು ಭಾಗಶಃ ಒಪ್ಪಿ, ಅಧಿಕಾರಿಗಳ ವಿರುದ್ಧದ ಇಲಾಖಾ ತನಿಖೆಯ ಶಿಫಾರಸನ್ನು ತಿರಸ್ಕರಿಸಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು. ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಎಂ.ಕೆ.ಶ್ರೀವಾಸ್ತವ್ ಅವರ ಅಧ್ಯಯನ ವರದಿಯ ಆಧಾರದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇಲ್ಲಿಗೆ ಈ ಪ್ರಕರಣವನ್ನು
ಮುಕ್ತಾಯಗೊಳಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.