ADVERTISEMENT

ಪುಟ್ಟ ಪೋರನಿಗೆ ಪ್ರಪಂಚವೇ ಪರಿಚಿತ!

ನೆನಪಿನ ಗಣಿ 

ಅಮೃತ ಕಿರಣ ಬಿ.ಎಂ.
Published 21 ಜುಲೈ 2019, 20:30 IST
Last Updated 21 ಜುಲೈ 2019, 20:30 IST
ಭೂಪಟದಲ್ಲಿ ದೇಶಗಳನ್ನು ಗುರುತಿಸುತ್ತಿರುವ ಆದೀಶ್
ಭೂಪಟದಲ್ಲಿ ದೇಶಗಳನ್ನು ಗುರುತಿಸುತ್ತಿರುವ ಆದೀಶ್   

ಚಂದಮಾಮನ ಮೇಲೆ ಮೊದಲು ಕಾಲೂರಿದವರು ಯಾರು, ಜಗತ್ತಿನ ಅದ್ಭುತಗಳಲ್ಲಿ ಒಂದಾದ ಮಾಚುಪಿಚು ಇರುವುದು ಎಲ್ಲಿ,ಸೌರಮಂಡಲದಲ್ಲಿ ಉಂಗುರ ಧರಿಸಿರುವ ಗ್ರಹ ಯಾವುದು, ಕಾರಂತರ ಯಾವ ಕೃತಿಗೆ ಜ್ಞಾನಪೀಠ ಸಿಕ್ಕಿದೆ – ಎಷ್ಟೊಂದು ವೈವಿಧ್ಯಮಯ ಪ್ರಶ್ನೆಗಳು ಅಲ್ಲವೇ? ಇವು ಕೆಲವರಿಗೆ ಕಬ್ಬಿಣದ ಕಡಲೆ ಎನಿಸಬಹುದು. ಆದರೆ ಕೇವಲ ಎರಡೂವರೆ ವರ್ಷದ ಈ ಪುಟ್ಟ ಪೋರನಿಗೆ ಮಾತ್ರ ಇವು ಕಡಲೆ ಮೆಲ್ಲಿದಷ್ಟೇ ಸುಲಲಿತ.

ಹೆಸರು ಆದೀಶ್ ಪಾಟೀಲ್. ಮಲ್ಲೇಶ್ ಪಾಟೀಲ್ ಹಾಗೂ ಜಯಲಕ್ಷ್ಮಿ ಅವರ ಮುದ್ದಿನ ಕಂದ. ತನ್ನ ಓರಗೆಯ ಬಹುತೇಕ ಮಕ್ಕಳಿಗಿಂತ ಭಿನ್ನವಾಗಿ ಆಲೋಚಿಸುವ ಬುದ್ಧಿವಂತ ಈತ. ದೇಶ, ವಿದೇಶಗಳನ್ನೂ ಅರಿತು, ಬಾಹ್ಯಾಕಾಶದ ವಿಚಾರಗಳಿಗೂ ಲಗ್ಗೆಯಿಟ್ಟಿದ್ದಾನೆ. ಕೈಗೆ ಪುಸ್ತಕ ಸಿಕ್ಕರೆ ಓದಿನಲ್ಲಿ ತಲ್ಲೀನನಾಗುವ ತವಕ. ಟೀವಿಯಲ್ಲಿ ಪುನೀತ್ ರಾಜ್‌ಕುಮಾರ್ ಹಾಡು ಕೇಳಿಬಂದರೆ, ಅದಕ್ಕೆ ಹೆಜ್ಜೆ ಹಾಕುವ ಉತ್ಸಾಹ. ಮಾತಂತೂ ಇನ್ನಷ್ಟು ಕೋಮಲ. ಎಳವೆಯಲ್ಲಿಯೇ ಜಗತ್ತನ್ನು ಅರಿಯುವ ಹಂಬಲಕ್ಕೆ ನೀರೆರೆಯುತ್ತಿದ್ದಾರೆ ಪೋಷಕರು.

ನೆನಪಿನ ಗಣಿ

ADVERTISEMENT

ಒಮ್ಮೆ ಕೇಳಿದರೆ ಸಾಕು ಎಂದಿಗೂ ಮರೆಯದ ಜ್ಞಾಪಕ ಶಕ್ತಿ ಆದೀಶ್‌ಗೆ ಸಿದ್ಧಸಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ತಂದೆ ಮಲ್ಲೇಶ್ ಪಾಟೀಲ್. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಇವರಿಗೆ ವಿಜ್ಞಾನದ ಬಗ್ಗೆ ಮೊದಲಿನಿಂದಲೂ ಆಸಕ್ತಿಯಿತ್ತು. ತಾಯಿ ಯುಪಿಎಸ್‌ಸಿ ಪರೀಕ್ಷೆಗೆಂದು ತಯಾರಿ ನಡೆಸಿದ್ದರು. ಹುಟ್ಟಿದ ಒಂದು ವರ್ಷಕ್ಕೆಲ್ಲಾ ಆದಿಶ್‌ನ ಒಳಗಿದ್ದ ಕಲಿಯುವ ಹಂಬಲ ಪೋಷಕರಿಗೆ ವೇದ್ಯವಾಗಿಬಿಟ್ಟಿತ್ತು. ಅವನು ಕೇಳುತ್ತಿದ್ದ ಪ್ರತಿಯೊಂದು ಪ್ರಶ್ನೆಗೂ ಅತ್ಯಂತ ಆಸ್ಥೆಯಿಂದ ಉತ್ತರಿಸುತ್ತಾ ಹೋದರು. ಅವನ ಜ್ಞಾನಾರ್ಜನೆ ವಿಸ್ತೃತ ಸ್ವರೂಪ ಪಡೆಯುತ್ತಾ ಹೋಯಿತು.

ಪುಸ್ತಕದಿಂದ ಮಸ್ತಕಕ್ಕೆ

ಪ್ರತೀ ಬಾರಿ ಅಂಗಡಿಗೆ ಕರೆದೊಯ್ದರೆ ಆಟದ ವಸ್ತುಗಳಿಗಿಂತ ಹೆಚ್ಚಾಗಿ ಪುಸ್ತಕಗಳ ಕಡೆ ಆದೀಶ್ ಗಮನಕೊಡುತ್ತಾನೆ. ಹೀಗೆ ಅವನ ಕಪಾಟು ಸೇರಿರುವ ಪುಸ್ತಕಗಳ ಸಂಖ್ಯೆ ಈಗಾಗಲೇ 35 ದಾಟಿದೆ. ಅಚ್ಚರಿಯೆಂದರೆ, ಅವನ ಪ್ರೀ–ಸ್ಕೂಲ್ ಇನ್ನೂ ಆರಂಭವಾಗಿಲ್ಲ. ನರ್ಸರಿಗೆ ಸೇರುವ ಮುನ್ನವೇ ಜಗತ್ತಿನ ಆಗುಹೋಗುಗಳನ್ನು ತನ್ನ ಮಸ್ತಕದಲ್ಲಿ ಅಡಗಿಸಿಕೊಂಡು ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾನೆ.

ಗ್ಲೋಬ್‌ ಮುಂದಿಟ್ಟುಕೊಂಡು ತಾಯಿ ಕೇಳುವ ಪ್ರತಿ ದೇಶವನ್ನು ಬೆರಳಿನಿಂದ ಗುರುತಿಸಿ ತೋರಿಸುವ ಚಾಕಚಕ್ಯತೆ ಈತನದ್ದು. ದೇಶವೊಂದರ ಹೆಸರು ಹೇಳಿದರೆ ಸಾಕು, ಅದು ಖಂಡದಲ್ಲಿ ಅಡಗಿದ್ದರೂ ತನ್ನ ಸ್ಮೃತಿಪಟಲದಿಂದ ಹೊರತೆಗೆದು ಕ್ಷಣಾರ್ಧದಲ್ಲಿ ಗುರುತಿಸುತ್ತಾನೆ. ಇತ್ತೀಚೆಗೆ ಕೊಂಡುಕೊಂಡ 350 ವಂಡರ್ಸ್ ಆಫ್ ವರ್ಲ್ಡ್‌ ಪುಸ್ತಕದಲ್ಲಿ 200ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಸರಾಗವಾಗಿ ಉತ್ತರಿಸಬಲ್ಲ.

‘ಆದೀಶ್‌ಗೆ ಮೊಬೈಲ್‌ನಲ್ಲಿ ಆಡವಾಡುವ, ಕಾರ್ಟೂನ್ ನೋಡುವ ಅಭ್ಯಾಸ ಅಷ್ಟೊಂದಿಲ್ಲ. ಮನೆಯಲ್ಲೇ ಫುಟ್ಬಾಲ್, ಬ್ಯಾಡ್ಮಿಂಟನ್ ಆಟವಾಡುತ್ತಾನೆ’ ಎನ್ನುತ್ತಾರೆ ತಾಯಿ ಜಯಲಕ್ಷ್ಮಿ

ಸಾಮ್ಯತೆ ಕಲ್ಪಿಸುವ ಸಾಮರ್ಥ್ಯ ಅವನ ಮತ್ತೊಂದು ಶಕ್ತಿ. ಶಾಲೆಗೆ ಹೋಗಲು ಬಹಳ ಇಷ್ಟ. ಒಮ್ಮೊಮ್ಮೆ ತಂದೆಯ ಬ್ಯಾಗನ್ನೇ ಹೆಗಲಿಗೇರಿಸಿ ಶಾಲೆಗೆ ಹೋಗುವೆ ಎಂದು ಹೊರಡಲನುವಾಗುವುದನ್ನು ನೆನಪಿಸಿಕೊಳ್ಳುತ್ತಾರೆ ತಾಯಿ.

‘ಅವನ ಆಸಕ್ತಿಯನ್ನು ಪೋಷಿಸುವುದಷ್ಟೇ ನಮ್ಮ ಕೆಲಸ. ಯಾವುದನ್ನೂ ಒತ್ತಾಯದಿಂದ ಹೇರುವುದಿಲ್ಲ. ಅವನ ಕನಸಿಗೆ ನೀರೆರೆದು, ಆಸಕ್ತಿಯ ಕ್ಷೇತ್ರದತ್ತ ಮುನ್ನಡೆಸುವುದು ನಮ್ಮ ಜವಾಬ್ದಾರಿ’ ಎನ್ನುತ್ತಾರೆ ತಂದೆ ಮಲ್ಲೇಶ್ ಪಾಟೀಲ್. ಈ ಎಳವೆಯಲ್ಲಿಯೇ ಅಸಾಧಾರಣ ಬುದ್ಧಿ ಪ್ರಾಪ್ತಾಂಕ ಹೊಂದಿದ್ದು, ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ಗೆ ನಾಮಿನೇಷನ್ ಕಳುಹಿಸುವ ಯತ್ನದಲ್ಲಿ ಪೋಷಕರು ಇದ್ದಾರೆ

ಕಂಬಾರರನ್ನು ಭೇಟಿಯಾಗುವಾಸೆ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಕನ್ನಡದ ಸಾಹಿತಿಗಳ ಕೃತಿಗಳ ಹೆಸರುಗಳು ಆದೀಶ್‌ ನಾಲಿಗೆ ತುದಿಯಲ್ಲೇ ಇವೆ. ಆದೀಶ್‌ಗೆ ಚಂದ್ರಶೇಖರ ಕಂಬಾರ ಅವರನ್ನು ಭೇಟಿಯಾಗುವ ಪುಟ್ಟ ಆಸೆಯೂ ಇದೆ. ಅವರೊಂದಿಗೆ ಫೋಟೊ ತೆಗೆಸಿಕೊಂಡು, ಅವರಿಂದ ಪುಸ್ತಕವೊಂದಕ್ಕೆ ಹಸ್ತಾಕ್ಷರ ಪಡೆಯುವ ಹಂಬಲ ಇದೆಯಂತೆ.

ಆದೀಶ್‌ಗೆ ಇಷ್ಟೆಲ್ಲಾ ಗೊತ್ತು:

ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರು ಮತ್ತು ಅವರ ಕೃತಿಗಳು

ಖಂಡಗಳ ಹೆಸರು ಹಾಗೂ ಅವುಗಳನ್ನು ನಕ್ಷೆಯಲ್ಲಿ ಗುರುತಿಸುವಿಕೆ

ದೇಶಗಳು, ಅವುಗಳ ರಾಜಧಾನಿ, ಧ್ವಜ ಗುರುತಿಸುವಿಕೆ

ಸೌರಮಂಡಲ, ಗ್ರಹಗಳ ಹೆಸರು, ಅವುಗಳ ಸ್ಥಾನ ಗುರುತು

ಜಗತ್ತಿನ ವಿಸ್ಮಯಗಳನ್ನು ಕುರಿತ ಪ್ರಶ್ನೆಗಳಿಗೆ ಸರಾಗ ಉತ್ತರ

ಜಗತ್ತಿನ ವಿಸ್ಮಯಗಳನ್ನು ಸೂಚಿಸುವ ಚಿತ್ರಗಳನ್ನು ಗುರುತಿಸುವಿಕೆ

* ಮಹಿಳೆಯ ಆಪ್ತ ಸಂಗಾತಿ ಮಹಿ ಳೆಯ ಆಪ್ತ ಸಂಗಾತಿ ಮಹಿಳೆಯ ಆಪ್ತ ಸಂಗಾತಿ ಮಹಿಳೆಯ ಆಪ್ತ ಸಂಗಾತಿ ಮಹಿಳೆಯ ಆಪ್ತ ಸಂಗಾತಿ ಮಹಿಳೆಯ ಆಪ್ತ ಸಂಗಾತಿ ಮಹಿಳೆಯ ಆಪ್ತ ಸಂಗಾತಿ ಮಹಿಳೆಯ ಆಪ್ತ ಸಂಗಾತಿ ಆಪ್ತ ಸಂಗಾತಿ
- ಆಪ್ತ ಸಂಗಾತಿ, ಆಪ್ತ ಸಂಗಾತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.