ಬೆಂಗಳೂರು: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ 'ಏರೋ ಇಂಡಿಯಾ’12ನೇ ಆವೃತ್ತಿಗೆ ಬುಧವಾರ ಬೆಳಗ್ಗೆ ಯಲಹಂಕ ವಾಯುನೆಲೆಯಲ್ಲಿ ಚಾಲನೆನೀಡಿದರು.
ಶೇ 100 ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್‌ಡಿಐ)ಗೆ ಅನುಮತಿ ನೀಡಿದ ಬಳಿಕ ಭಾರತವು ಹೆಲಿಕಾಪ್ಟರ್, ಲಘು ವಿಮಾನ ಸೇರಿದಂತೆ ಈವರೆಗೆ 4000 ವಿಮಾನಗಳನ್ನು ತಯಾರಿಸಿದೆ. ನೇಪಾಳ, ಮಾರಿಷಸ್, ರಷ್ಯಾ ರಾಷ್ಟ್ರಗಳಿಗೆ ಭಾರತವು ರಕ್ಷಣಾ ಸರುಕುಗಳನ್ನು ರಫ್ತುಮಾಡುತ್ತಿದೆ ಎಂದು ನಿರ್ಮಲಾ ಸೀತಾರಾಮನ್ಹೇಳಿದರು.
ಐಟಿ ಉದ್ಯಮವು ಜಿಡಿಪಿಗೆ ಉತ್ತಮ ಕೊಡುಗೆ ನೀಡುತ್ತಿದೆ. ಬೆಂಗಳೂರು ಸೇವಾ ಕ್ಷೇತ್ರದ ಮೂಲಕ ಜಿಡಿಪಿಗೆ ಉತ್ತಮ ಕೊಡುಗೆ ನೀಡುತ್ತಿರುವ ನಗರವಾಗಿದೆ. ಪ್ರಧಾನಿ ಮೋದಿಯವರು ಭಾರತದಲ್ಲೇ ಉತ್ಪಾದಿಸುವಂತೆ ಉದ್ಯಮಿಗಳಿಗೆ ಕರೆ ನೀಡಿರುವುದು ಪರಿಣಾಮ ಬೀರಿದೆ ಎಂದು ಹೇಳಿದರು.
ಮೇಕ್ ಇನ್ ಇಂಡಿಯಾ ಯೋಜನೆಯು ಏರೋಸ್ಪೇಸ್ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದು, ರಕ್ಷಣಾ ಸಾಮಗ್ರಿ ಖರೀದಿಗೆ ಸಂಬಂಧಿಸಿದಂತೆ ಎರಡು ವರ್ಷಗಳಲ್ಲಿ ₹1.27 ಲಕ್ಷ ಕೋಟಿ ಮೊತ್ತದ 150 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ರಕ್ಷಣಾ ಕ್ಷೇತ್ರದ ಉತ್ಪಾದನೆಗೆ 164 ಪ್ರಸ್ತಾವಗಳನ್ನು ಸಲ್ಲಿಸಲಾಗಿದೆಎಂದರು.
‘ರಕ್ಷಣಾ ಉತ್ಪಾದನೆಗೆ ಸಂಬಂಧಿಸಿದಂತೆ ನಾಲ್ಕು ವರ್ಷಗಳಲ್ಲಿ 424 ಕಂಪನಿಗಳಿಗೆ ಪರವಾನಗಿ ನೀಡಲಾಗಿದೆ. ಶೇ.80 ರಷ್ಟು ಬಿಡಿಭಾಗಗಳ ಪೂರೈಕೆಗೆ ಖಾಸಗಿಯವರಿಗೂ ಅವಕಾಶ ನೀಡಲಾಗಿದೆ. ಇದರಿಂದ 10 ಸಾವಿರಕ್ಕೂ ಹೆಚ್ಚು ಬೃಹತ್ ಹಾಗೂ ಸಣ್ಣ ಕಂಪನಿಗಳಿಗೆ ಅನುಕೂಲವಾಗಲಿದೆ’ ಎಂದರು.
12ನೇ ಆವೃತ್ತಿಯ ಏರೋ ಇಂಡಿಯಾದಲ್ಲಿ 600 ಸ್ವದೇಶಿ, 200 ವಿದೇಶಿ ಕಂಪನಿಗಳು ಭಾಗವಹಿಸಿವೆ.
ಮಿಲಿಟರಿ, ವೈಮಾನಿಕ ಕ್ಷೇತ್ರದ ತಂತ್ರಜ್ಞಾನಗಳ ಹಾಗೂ ಉತ್ಪನ್ನಗಳ ಬಗ್ಗೆ ಆ ಕಂಪನಿಗಳು ಏರ್ ಶೋ ಮೂಲಕ ದೇಶವ್ಯಾಪಿ ಮಾಹಿತಿ ಪಸರಿಸಲಿವೆ’ ಎಂದು ಹೇಳಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ‘ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಬೆಂಗಳೂರು ವಿಶ್ವ ಮನ್ನಣೆ ಗಳಿಸಿದೆ. ದೇವನಹಳ್ಳಿ ವಿಮಾನ ನಿಲ್ದಾಣದ ಬಳಿ ವೈಮಾನಿಕ ಪಾರ್ಕ್ ಸ್ಥಾಪಿಸಲಾಗಿದೆ. ಮಂಗಳೂರಿನಲ್ಲಿ ಡಿಫೆನ್ಸ್ ಕ್ಲಸ್ಟರ್ ಸ್ಥಾಪಿಸುವ ಉದ್ದೇಶ ಇದೆ. ಡಸೌಲ್ಟ್ ಕಂಪನಿ ಸಹಯೋಗದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಸಹ ಸ್ಥಾಪಿಸುವ ಉದ್ದೇಶವಿದೆ’ ಎಂದರು.
ಕೇಂದ್ರ ಸಚಿವ ಸುರೇಶ್ ಪ್ರಭು ‘ದೇಶದಲ್ಲಿ ನಾಗರಿಕ ವಿಮಾನಯಾನ ಕ್ಷೇತ್ರ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಉಡಾನ್ ಯೋಜನೆ ಮೂಲಕ ದೇಶದ ಉದ್ದಗಲಕ್ಕೂ ವಿಮಾನ ಸೇವೆ ವಿಸ್ತರಣೆಗೆ ಅವಕಾಶವಾಗಿದೆ. 2040ಕ್ಕೆ ಭಾರತವು ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಪ್ರಥಮ ಸ್ಥಾನ ಪಡೆಯುವ ಗುರಿ ಇದೆ. ಮುಂದಿನ ದಿನಗಳಲ್ಲಿ ದೇಶವು 2,300 ವಿಮಾನಗಳ ಖರೀದಿಸುವ ಉದ್ದೇಶ ಇದೆ’ ಎಂದರು.
ಉದ್ಘಾಟನೆಗೂ ಮುನ್ನ ಮಂಗಳವಾರ ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್ ಸಾಹಿಲ್ ಗಾಂಧಿ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಿಸಲಾಯಿತು.
ಇದೇ ಸಮಾರಂಭದಲ್ಲಿ ‘ಇಂಡಿಯಾ ಏರೋಸ್ಪೇಸ್ ಟೇಕಿಂಗ್ ಆಫ್’, ‘ಟ್ರಯಲ್ ಬ್ಲೇಝರ್’ ಪುಸ್ತಕಗಳನ್ನುಬಿಡುಗಡೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.