ADVERTISEMENT

ಏರೊ ಇಂಡಿಯಾ | ಬಿರು ಬಿಸಿಲು: ಅರ್ಧಕ್ಕೆ ಹೊರಟ ಪ್ರೇಕ್ಷಕರು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2025, 15:53 IST
Last Updated 12 ಫೆಬ್ರುವರಿ 2025, 15:53 IST
<div class="paragraphs"><p>ವೈಮಾನಿಕ ಪ್ರದರ್ಶನದಲ್ಲಿ ಸೂರ್ಯ ಕಿರಣ್‌ ತಂಡವು ಆಕಾಶದಲ್ಲಿ ಬಗೆ ಬಗೆಯ ಚಿತ್ರ ಬಿಡಿಸಿ ನೋಡುಗರಲ್ಲಿ ಬೆರಗು ಮೂಡಿಸಿತು</p></div>

ವೈಮಾನಿಕ ಪ್ರದರ್ಶನದಲ್ಲಿ ಸೂರ್ಯ ಕಿರಣ್‌ ತಂಡವು ಆಕಾಶದಲ್ಲಿ ಬಗೆ ಬಗೆಯ ಚಿತ್ರ ಬಿಡಿಸಿ ನೋಡುಗರಲ್ಲಿ ಬೆರಗು ಮೂಡಿಸಿತು

   

ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ಬೆಂಗಳೂರು: ವೈಮಾನಿಕ ಪ್ರದರ್ಶನದ ಮೂರನೇ ದಿನವಾದ ಬುಧವಾರ ಕೇವಲ ಪ್ರದರ್ಶಕರಿಗಷ್ಟೇ ಅವಕಾಶವಿದ್ದರೂ ಪ್ರೇಕ್ಷಕರಿಗೆ ಕೊರತೆ ಇರಲಿಲ್ಲ. ಪ್ರವೇಶ ದ್ವಾರದಲ್ಲಿ ಉದ್ದುದ್ದ ಸಾಲಿನಲ್ಲಿ ನಿಂತು ಜನರು ಪಾಸ್ ತೋರಿಸಿ, ಪ್ರವೇಶ ಪಡೆದುಕೊಳ್ಳುತ್ತಿದ್ದರು.

ADVERTISEMENT

ಮೊದಲ ಮೂರು ದಿನ ಉದ್ಯಮಿಗಳು, ದೇಶ, ವಿದೇಶಗಳ ಸೇನಾಪಡೆ ಮುಖ್ಯಸ್ಥರು, ಕೈಗಾರಿಕೋದ್ಯಮಿಗಳು, ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ, ಎಚ್‌ಎಎಲ್, ಬಿಇಎಲ್, ಐಎಎಫ್, ಡಿಆರ್‌ಡಿಒ, ಎನ್‌ಎಎನ್‌ ಸಿಬ್ಬಂದಿ, ನಿವೃತ್ತ ಸಿಬ್ಬಂದಿ ಹಾಗೂ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು. ಪೊಲೀಸ್ ಹಾಗೂ ಅಧಿಕಾರಿಗಳ ಕುಟುಂಬದವರು ಸಹ ಬಂದಿದ್ದರು.

ವಾಯುನೆಲೆಯ ಕೆಲವು ಕಡೆ ಸ್ಥಾಪಿಸಿರುವ ಮೊಬೈಲ್ ಶೌಚಾಲಯಗಳ ಎದುರು ಮಹಿಳೆಯರು ಸಾಲುಗಟ್ಟಿ ನಿಂತಿದ್ದರು.  

‘ಗುರುವಾರದಿಂದ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಹಾಗಾಗಿ ಶೌಚಾಲಯಗಳ ಸಂಖ್ಯೆ ಮತ್ತಷ್ಟು ಹೆಚ್ಚಿಸಬೇಕು’ ಎಂದು ಮಹಿಳೆಯರು ಆಗ್ರಹಿಸಿದರು.

ಮಧ್ಯಾಹ್ನ 12ಕ್ಕೆ ಸರಿಯಾಗಿ ವೈಮಾನಿಕ ಪ್ರದರ್ಶನ ಆರಂಭಗೊಂಡಿತು. ಅರ್ಧ ತಾಸು ಬಿಸಿಲಿನಲ್ಲಿಯೇ ನಿಂತು ವೀಕ್ಷಿಸಿದರು. ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ಹೆಚ್ಚಿನ ಜನರು ಪ್ರದರ್ಶನ ಮುಗಿಯುವವರೆಗೂ ಇರದೇ, ಅರ್ಧಕ್ಕೆ ಮನೆಯತ್ತ ಹೊರಟರು.

ಸೂರ್ಯ ಕಿರಣ್‌ ವಿಮಾನಗಳು ಆಗಸದಲ್ಲಿ ಬಗೆ ಬಗೆಯ ಚಿತ್ರಗಳನ್ನು ಬಿಡಿಸಿ ನೋಡುಗರಲ್ಲಿ ಬೆರಗು ಮೂಡಿಸಿದವು. ಒಂದೊಂದು ವಿನ್ಯಾಸ ಮೂಡಿಸುವಾಗಲೂ ವಿಮಾನಗಳು ಒಂದೊಂದು ದಿಕ್ಕಿನಿಂದ ಬಂದು ಜನರ ಹೃದಯ ಬಡಿತ ಹೆಚ್ಚಿಸಿದವು. ಕೇವಲ 5 ಮೀಟರ್‌ ಅಂತರದಲ್ಲಿ ಸೂರ್ಯಕಿರಣ್ ನ 9 ವಿಮಾನಗಳ ಹಾರಾಟವು ಸ್ಪೃತಿ ಪಟಲದಲ್ಲಿ ಉಳಿಯುವಂತಿತ್ತು. 

ರಷ್ಯಾದ ಎಸ್‌ಯು 57 ಮತ್ತು ಅಮೆರಿಕದ ಎಫ್ 35 ಯುದ್ದ ವಿಮಾನಗಳ ಶರವೇಗದ ಹಾರಾಟ ಪ್ರಮುಖ ಆಕರ್ಷಣೆಯಾಗಿದ್ದವು. ಕಿವಿ ಗುಂಯ್ ಎನ್ನುವಷ್ಟು ಶಬ್ಧದೊಂದಿಗೆ 90 ಡಿಗ್ರಿಯಲ್ಲಿ ಆಕಾಶಕ್ಕೆ ಏರುವ ವೇಳೆ ಎಲ್ಲರೂ ಒಂದು ಕ್ಷಣ ಮೂಕವಿಸ್ಮಿತರಾದರು.

ಬಾನಂಗಳದಲ್ಲಿ  ಸೂರ್ಯಕಿರಣ್‌ ತಂಡದ ಕಸರತ್ತು. ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ತಂದೆಯೊಂದಿಗೆ ಕಂದಮ್ಮ ವೈಮಾನಿಕ ಪ್ರದರ್ಶನವನ್ನು ಕಿವಿ ಮುಚ್ಚಿಕೊಂಡು ವೀಕ್ಷಿಸಿತು.  ಚಿತ್ರ: ಎಂ.ಎಸ್‌.ಮಂಜುನಾಥ್‌
ಸುಡು ಬಿಸಿಲಿನ ನಡುವೆ ವೈಮಾನಿಕ ಪ್ರದರ್ಶನದ ದೃಶ್ಯವನ್ನು ಜನರು ಮೊಬೈಲ್‌ನಲ್ಲಿ ಸೆರೆ ಹಿಡಿದರು.   ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.