ADVERTISEMENT

ರಕ್ಷಣಾ ಪಾರ್ಕ್‌ ಕಸಿಯಲು ಆಂಧ್ರ ಕಾದು ಕೂತಿದೆ: ಕೈಗಾರಿಕಾ ಸಚಿವ MB ಪಾಟೀಲ ಕಳವಳ

ಭೂಸ್ವಾಧೀನ ವಿರೋಧಿಸಿ ಚನ್ನರಾಯಪಟ್ಟಣ ರೈತರ ಹೋರಾಟ * ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಕಳವಳ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 0:44 IST
Last Updated 9 ಜುಲೈ 2025, 0:44 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ಬೆಂಗಳೂರು: ‘ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆಯೇ ಏರೋಸ್ಪೇಸ್‌ ಪಾರ್ಕ್‌ ಇದೆ. ಈಗ ಉದ್ದೇಶಿತ ವೈಮಾನಿಕ ಮತ್ತು ರಕ್ಷಣಾ ಪಾರ್ಕ್‌ಗಾಗಿ ಭೂಸ್ವಾಧೀನಕ್ಕೆ ಕೈಬಿಟ್ಟರೆ, ಆ ಅವಕಾಶವನ್ನು ಕಸಿದುಕೊಳ್ಳಲು ಆಂಧ್ರಪ್ರದೇಶ ಕಾದು ಕುಳಿತಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರು ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಕುರಿತು ಕೇಳಲಾದ ಪ್ರಶ್ನೆಗೆ, ‘ಆಂಧ್ರ ಪ್ರದೇಶ ಸರ್ಕಾರವು ಮಡಕಶಿರಾ ಮತ್ತು ಪೆನುಕೊಂಡ ನಡುವೆ 10,000 ಎಕರೆ ಜಮೀನನ್ನು ಈಗಾಗಲೇ ಸ್ವಾಧೀನಕ್ಕೆ ತೆಗದುಕೊಂಡಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ 100 ಕಿ.ಮೀ ಅಂತರದಲ್ಲಿ ವೈಮಾನಿಕ ಮತ್ತು ರಕ್ಷಣಾ ಪಾರ್ಕ್‌ಗಾಗಿ ಜಮೀನು ಕೊಡುತ್ತೇವೆ ಎಂದು ಉದ್ಯಮಿಗಳನ್ನು ಆಹ್ವಾನಿಸಿದೆ’ ಎಂದು ‘ಪ್ರಜಾವಾಣಿ’ಗೆ ಉತ್ತರಿಸಿದರು.

ಮಂಗಳವಾರ ಬೆಳಿಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಕರ್ನಾಟಕವು ದೇಶದ ರಕ್ಷಣೆ ಮತ್ತು ವೈಮಾಂತರಿಕ್ಷ ವಹಿವಾಟಿನಲ್ಲಿ ಶೇಕಡ 65ರಷ್ಟು ಪಾಲು ಹೊಂದಿದೆ. ಈ ವಲಯದಲ್ಲಿನ ನಮ್ಮ ಕಾರ್ಯ ಪರಿಸರವು ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ. ಎಚ್ಎಎಲ್, ಸ್ಯಾಫ್ರಾನ್, ಬೋಯಿಂಗ್, ಏರ್ ಬಸ್, ಕಾಲಿನ್ಸ್, ಲಾಕ್ ಹೀಡ್ ಮಾರ್ಟಿನ್ ಮುಂತಾದ ದೈತ್ಯ ಕಂಪನಿಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದನ್ನು ವಿಸ್ತರಿಸುವ ಉದ್ದೇಶದಿಂದ ವೈಮಾನಿಕ ರಕ್ಷಣಾ ಪಾರ್ಕ್‌ ಸ್ಥಾಪಿಸಲಾಗುತ್ತದೆ’ ಎಂದರು.

ADVERTISEMENT

‘ಆಂಧ್ರ ಪ್ರದೇಶದಲ್ಲಿ ಬೇರೆಬೇರೆ ಕೈಗಾರಿಕಾ ಉದ್ದೇಶಗಳಿಗೆ 45,000 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇನ್ಫೊಸಿಸ್, ಕಾಗ್ನಿಜೆಂಟ್, ಟಿಸಿಎಸ್ ಮೊದಲಾದ 100 ಕಂಪನಿಗಳಿಗೆ ವಿಶಾಖಪಟ್ಟಣದಲ್ಲಿ ಎಕರೆಗೆ 99 ಪೈಸೆಯಂತೆ ಭೂಮಿ ಕೊಡಲಾಗಿದೆ ಎಂಬ ವರದಿ ಇದೆ. ಈ ಹಂತದಲ್ಲಿ ಹಿಂದೇಟು ಹಾಕಿದರೆ, ರಾಜ್ಯಕ್ಕೆ ತೀವ್ರ ಹಿನ್ನಡೆಯಾಗುತ್ತದೆ’ ಎಂದು ಹೇಳಿದರು.

‘ಉದ್ದೇಶಿತ ಪಾರ್ಕ್‌ಗೆ ಭೂಮಿ ನೀಡುವ ಸಂತ್ರಸ್ತ ರೈತರಿಗೆ 2013ರ ಭೂಸ್ವಾಧೀನ ಕಾಯ್ದೆಯ ಪ್ರಕಾರವೇ ನ್ಯಾಯಯುತ ಪರಿಹಾರ ಕೊಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಇತ್ತ ತಮಿಳುನಾಡಿನ ಹೊಸೂರು ನಮ್ಮಿಂದ ಕೇವಲ 50 ಕಿ.ಮೀ. ದೂರದಲ್ಲಿದೆ. ಅಲ್ಲಿನ ಸರ್ಕಾರ ಈಗ ಆ ಪ್ರದೇಶವನ್ನು ಕೇಂದ್ರೀಕರಿಸಿ ಕೈಗಾರಿಕಾ ಬೆಳವಣಿಗೆಯನ್ನು ವಿಸ್ತರಿಸುತ್ತಿದೆ. ಜತೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ನಿರ್ಮಿಸಲು ಮುಂದಾಗಿದೆ. ಕೈಗಾರಿಕೆಗಳಿಗೆ ಅಲ್ಲೂ ಅಗ್ಗದ ದರದಲ್ಲಿ ಭೂಮಿ ಕೊಡಲಾಗುತ್ತಿದೆ’ ಎಂದರು.

ಪ್ರಕಾಶ್‌ ರಾಜ್‌ ಆಂಧ್ರ, ತಮಿಳುನಾಡಿನಲ್ಲಿ ಹೋರಾಡುವುದಿಲ್ಲವೇಕೆ?: ‘ನಮ್ಮಲ್ಲಿ ಏರೋಸ್ಪೇಸ್ ಪಾರ್ಕಿಗಾಗಿ ಕೇವಲ 1,282 ಎಕರೆ ಮಾತ್ರ ಸ್ವಾಧೀನಪಡಿಸಿಕೊಳ್ಳಲು ತೀರ್ಮಾನಿಸಿದ್ದೇವೆ. ಆಂಧ್ರದಲ್ಲಿ ಅದೇ ಉದ್ದೇಶಕ್ಕೆ 10,000 ಎಕರೆ ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ. ಪ್ರಕಾಶ್‌ ರಾಜ್ ಅವರು ಅಲ್ಲೇಕೆ ಹೋರಾಡುವುದಿಲ್ಲ’ ಎಂದು ಸಚಿವ ಎಂ.ಬಿ.ಪಾಟೀಲ ಪ್ರಶ್ನಿಸಿದರು.

‘ಅವರ ವಿರುದ್ಧ ನನಗೆ ವೈಯಕ್ತಿಕ ಸಿಟ್ಟೇನೂ ಇಲ್ಲ. ಅವರು ಇಲ್ಲಿಗಿಂತ ಆಂಧ್ರದಲ್ಲಿ ಹೆಚ್ಚು ಜನಪ್ರಿಯರು. ಆದ್ದರಿಂದ ಅವರು ಬೇರೆಬೇರೆ ರಾಜ್ಯಗಳಲ್ಲೂ ರೈತರ ಭೂಸ್ವಾಧೀನದ ವಿರುದ್ಧ ಹೋರಾಟ ಮಾಡಿದರೆ ಒಳ್ಳೆಯದು’ ಎಂದರು.

ಆಂಧ್ರದ ಯೋಜನೆ ಗೆದ್ದರೆ ನಮ್ಮಲ್ಲಿರುವ ವೈಮಾನಿಕ ಮತ್ತು ರಕ್ಷಣಾ ಕಂಪನಿಗಳು ಅಲ್ಲಿಗೆ ಹೋಗಬಹುದು. ಇದರಿಂದ ರಾಜ್ಯಕ್ಕೆ ಆಗುವ ನಷ್ಟವನ್ನು ಅಂದಾಜು ಮಾಡಲೂ ಸಾಧ್ಯವಿಲ್ಲ

-ಎಂ.ಬಿ.ಪಾಟೀಲ ಕೈಗಾರಿಕಾ ಸಚಿವ

ಬುಧವಾರ ರಾಜನಾಥ್ ಸಿಂಗ್ ಭೇಟಿ

‘ಹಿಂದೆ ಕೇಂದ್ರ ಸರ್ಕಾರ ನಮ್ಮನ್ನು ಕಡೆಗಣಿಸಿ ತಮಿಳುನಾಡು ಮತ್ತು ಉತ್ತರಪ್ರದೇಶಕ್ಕೆ ರಕ್ಷಣಾ ಕಾರಿಡಾರ್ ಮಂಜೂರು ಮಾಡಿದೆ. ಈ ಲೋಪವನ್ನು ನಾನು ಹಿಂದೆಯೇ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಕೋಲಾರ-ಚಿಕ್ಕಬಳ್ಳಾಪುರ ಮತ್ತು ಹುಬ್ಬಳ್ಳಿ-ಬೆಳಗಾವಿ ನಡುವೆ ನಮಗೆ ಎರಡು ರಕ್ಷಣಾ ಕಾರಿಡಾರ್ ಕೊಡಬೇಕು. ಇದನ್ನು ಮನದಟ್ಟು ಮಾಡಿಕೊಡಲೆಂದೇ ಬುಧವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡುತ್ತಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಭೇಟಿಯ ವೇಳೆ ಇರಲಿದ್ದಾರೆ’ ಎಂದು ಎಂ.ಬಿ.ಪಾಟೀಲ ತಿಳಿಸಿದ್ದಾರೆ. ‘ಈ ಕ್ಷೇತ್ರದಲ್ಲಿ ರಾಜ್ಯವು ದೇಶಕ್ಕೇ ಅಗ್ರಸ್ಥಾನದಲ್ಲಿದೆ. ಹೀಗಾಗಿ ನಮಗೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲಿ ಒಂದೊಂದು ರಕ್ಷಣಾ ಕಾರಿಡಾರ್ ಅಗತ್ಯವಾಗಿ ಬೇಕಾಗಿದೆ. ಬೇರೆ ರಾಜ್ಯದವರಿಗೆ ರಕ್ಷಣಾ ಕಾರಿಡಾರ್ ಕೊಡುವುದರಲ್ಲಿ ತಪ್ಪಿಲ್ಲ. ಆದರೆ ನಮಗೆ ಸಲ್ಲಬೇಕಾದ್ದು ಸಲ್ಲಲೇಬೇಕು. ಹಿಂದೆ ಮಾಡಿದ ತಪ್ಪು ಕೇಂದ್ರ ಸರ್ಕಾರಕ್ಕೂ ಅರಿವಾಗಿದೆ. ನಮ್ಮ ಹಿಂದಿನ ಭೇಟಿಗಳಲ್ಲಿ ರಾಜನಾಥ್ ಸಿಂಗ್ ಅವರೇ ಇದನ್ನು ಒಪ್ಪಿಕೊಂಡಿದ್ದರು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.