ADVERTISEMENT

ನಗರದಲ್ಲಿ ಮತ್ತೆ ಹೋರ್ಡಿಂಗ್‌ಗೆ ಅವಕಾಶ! ಬಿಎಸ್‌ವೈ ಅಧಿಕಾರದ ಕೊನೆ ದಿನ ಅಧಿಸೂಚನೆ

ಜಾಹೀರಾತು ಏಜೆನ್ಸಿಗಳ ಲಾಬಿಗೆ ಮಣಿಯಿತೇ ಸರ್ಕಾರ?

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 20:17 IST
Last Updated 27 ಜುಲೈ 2021, 20:17 IST
ವಿಧಾನ ಸೌಧ
ವಿಧಾನ ಸೌಧ   

ಬೆಂಗಳೂರು: ನಗರದಲ್ಲಿ ಖಾಸಗಿ ಜಾಹೀರಾತು ಏಜೆನ್ಸಿಗಳು ಬೇಕಾಬಿಟ್ಟಿ ಹೋರ್ಡಿಂಗ್‌ಗಳನ್ನು ಅಳವಡಿಸುವುದಕ್ಕೆ ಇದ್ದ ನಿರ್ಬಂಧ ಕೊನೆಗೊಂಡಿದೆ. ಹೋರ್ಡಿಂಗ್‌ಗಳನ್ನು ಅಳವಡಿಸಲು ಅವಕಾಶ ಕಲ್ಪಿಸುವ ‘ಬಿಬಿಎಂಪಿ ಜಾಹೀರಾತು ನಿಯಮಗಳು 2019’ ಜಾರಿಗೆ ಬಿಜೆಪಿ ಸರ್ಕಾರವು 2021ರ ಜುಲೈ 26ರಂದು ಅಧಿಸೂಚನೆ ಹೊರಡಿಸಿದೆ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ಬಿ.ಎಸ್‌.ಯಡಿಯೂರಪ್ಪ ತರಾತುರಿಯಲ್ಲಿ ಸಹಿ ಹಾಕಿದ ಕಡತಗಳಲ್ಲಿ ಇದೂ ಒಂದು. ಅಚ್ಚರಿ ಎಂದರೆ, ‘ಬಿಬಿಎಂಪಿ ಜಾಹೀರಾತು ನಿಯಮಗಳು–2019’ ಸ್ವತಃ ಬಿಬಿಎಂಪಿ 2018ರಲ್ಲಿ ಅಂಗೀಕರಿಸಿರುವ ಜಾಹೀರಾತು ನೀತಿಯ ಆಶಯಗಳಿಗೆ ಹಾಗೂ ಅದರನ್ವಯ ಬಿಬಿಎಂಪಿ ರೂಪಿಸಿರುವ ಬೈಲಾಗಳಿಗೆ ತದ್ವಿರುದ್ಧವಾಗಿದೆ. ನಗರದಲ್ಲಿ ಖಾಸಗಿ ಹಾಗೂ ವಾಣಿಜ್ಯ ಉದ್ದೇಶದ ಹೋರ್ಡಿಂಗ್‌ಗಳ ಅಳವಡಿಕೆಯನ್ನು ಬಿಬಿಎಂಪಿ ಬೈಲಾದಲ್ಲಿ ಸಂಪೂರ್ಣ ನಿಷೇಧಿಸಲಾಗಿತ್ತು.

ಹೈಕೋರ್ಟ್‌ ಸೂಚನೆ ಮೇಲೆ ಜಾರಿಗೊಳಿಸಲಾದ ಹೋರ್ಡಿಂಗ್‌ ನಿಷೇಧ ತೆರವುಗೊಳಿಸುವ ಧೈರ್ಯವನ್ನು 2018ರ ಬಳಿಕದ ಯಾವುದೇ ಸರ್ಕಾರವೂ ತೋರಿಸಿರಲಿಲ್ಲ.ಹೋರ್ಡಿಂಗ್‌ಗಳ ಅಳವಡಿಕೆಗೆ ಮತ್ತೆ ಅವಕಾಶ ನೀಡುವಂತೆ ಜಾಹೀರಾತು ಏಜೆನ್ಸಿಗಳು ಆಗಿನಿಂದಲೂ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದವು. ನಗರದಲ್ಲಿ ಹೊರಾಂಗಣ ಜಾಹೀರಾತುಗಳ ಸಂಪೂರ್ಣ ನಿಷೇಧ ಮಾಡುವುದನ್ನು ಬಿಬಿಎಂಪಿಯಲ್ಲಿ ವಿರೋಧ ಪಕ್ಷವಾಗಿದ್ದ ಬಿಜೆಪಿಯೂ ಬೆಂಬಲಿಸಿತ್ತು. ಬಿಜೆಪಿಯ ಸದಸ್ಯರೇ ಈ ನಿಷೇಧದ ಪರವಾಗಿ ಕೌನ್ಸಿಲ್‌ ಸಭೆಯಲ್ಲಿ ಮಾತನಾಡಿದ್ದರು. ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಿಷೇಧ ತೆರವಿಗೆ ಪ್ರಯತ್ನ ನಡೆದಾಗಲೂ ಬಿಜೆಪಿ ಬಲವಾಗಿ ವಿರೋಧಿಸಿತ್ತು. ಈಗ ಬಿಜೆಪಿ ನೇತೃತ್ವದ ಸರ್ಕಾರವೇ ಜಾಹೀರಾತು ಲಾಬಿಗೆ ಮಣಿದು ಈ ನಿರ್ಧಾರ ಕೈಗೊಂಡಿತೇ ಎಂಬ ಶಂಕೆ ವ್ಯಕ್ತವಾಗಿದೆ.

ADVERTISEMENT

25 ಮೀ ಎತ್ತರದವರೆಗಿನ ಹೋರ್ಡಿಂಗ್‌ಗೆ ಅವಕಾಶ:

ನೆಲದಲ್ಲಿ ಅಳವಡಿಸುವ ಹೋರ್ಡಿಂಗ್‌ ಮಾತ್ರವಲ್ಲ, ಕಟ್ಟಡದ ಮೇಲಿನ ಹೋರ್ಡಿಂಗ್‌, ಒಂದರ ಹಿಂದೆ ಒಂದರಂತೆ ಅಳವಡಿಸುವ ಸ್ಯಾಂಡ್‌ವಿಚ್‌, ಕಿಯಾಸ್ಕ್‌ಗಳು ಹಾಗೂ ನಿಯಾನ್‌ ಸೈನ್‌ ಹೋರ್ಡಿಂಗ್‌ಗಳಿಗೂ ಅವಕಾಶ ಕಲ್ಪಿಸಲಾಗುತ್ತಿದೆ. ಹೊಸ ಜಾಹೀರಾತು ನಿಯಮದಲ್ಲಿ ವಾಣಿಜ್ಯ ಉದ್ದೇಶಗಳಿಗೆ ಹೋರ್ಡಿಂಗ್‌ ಅಳವಡಿಸುವುದಕ್ಕೆ ಅವಕಾಶ ನೀಡಲಾಗಿದ್ದರೂ, ಅವುಗಳ ಗಾತ್ರಗಳಿಗೆ ಸಂಬಂಧಿಸಿ ಕೆಲವು ನಿರ್ಬಂಧ ಹೇರಲಾಗಿದೆ. ರಸ್ತೆ ಮಟ್ಟಕ್ಕಿಂತ 25 ಮೀ ಎತ್ತರದವರೆಗಿನ ಹೋರ್ಡಿಂಗ್‌ಗೆ ಅನುಮತಿ ನೀಡಲಾಗುತ್ತದೆ.

ಕಟ್ಟಡದ ಮೇಲೂ ಹೋರ್ಡಿಂಗ್‌ ಅಳವಡಿಸಲು ಅವಕಾಶವಿದೆ. ಆದರೆ, ಅವುಗಳ ಗರಿಷ್ಠ ಎತ್ತರ ಚಾವಣಿ ಮಟ್ಟದಿಂದ 12.2 ಮೀಟರ್‌ಗಳಿಗಿಂತ ಹೆಚ್ಚು ಇರುವಂತಿಲ್ಲ. ಅಂಚಿನಿಂದ ಕನಿಷ್ಠ 1.5 ಮೀ ಅಂತರ ಕಾಪಾಡಬೇಕು. ಹೋರ್ಡಿಂಗ್‌ನ ಕೆಳ ಅಂಚು ನೆಲ ಮಟ್ಟದಿಂದ 10 ಅಡಿಗಳಿಗಿಂತ (3.05 ಮೀ) ಕಡಿಮೆ ಇರುವಂತಿಲ್ಲ.

ಇವುಗಳಿಗೆ ಇಲ್ಲ ಅನುಮತಿ: ಸಂಚಾರ ದ್ವೀಪಗಳಲ್ಲಿ, ಸಿಗ್ನಲ್‌ ಜಂಕ್ಷನ್‌ಗಳಲ್ಲಿ ನಿಲುಗಡೆ ರೇಖೆಯಿಂದ 25 ಮೀ ವ್ಯಾಪ್ತಿಯಲ್ಲಿ ಹೋರ್ಡಿಂಗ್‌ ಅಳವಡಿಸುವಂತಿಲ್ಲ. ಜಾಹೀರಾತುಗಳಿಗೆ ಡೀಸೆಲ್‌ ಜನರೇಟರ್‌ ಬಳಸುವಂತಿಲ್ಲ. 400 ಚ.ಮೀ ವಿಸ್ತೀರ್ಣದಲ್ಲಿ ಎರಡಕ್ಕಿಂತ ಹೆಚ್ಚು ಹೋರ್ಡಿಂಗ್‌ಗೆ ಅವಕಾಶ ಇಲ್ಲ. ಪಾದಚಾರಿ ಮಾರ್ಗಗಳಲ್ಲಿ ಇವುಗಳನ್ನು ಅಳವಡಿಸುವಂತಿಲ್ಲ. ಎರಡು ಹೋರ್ಡಿಂಗ್‌ಗಳನ್ನು ಜೋಡಿಸುವಂತಿಲ್ಲ.

ಅನಧಿಕೃತ, ಅಶ್ಲೀಲ ಅಥವಾ ಆಕ್ಷೇಪಾರ್ಹ ಹೋರ್ಡಿಂಗ್‌ಗೆ ಮುಖ್ಯ ಆಯುಕ್ತರು ಅನುಮತಿ ನಿರಾಕರಿಸಬಹುದು. ಏಳು ದಿನಗಳ ಒಳಗೆ ಅಂತಹ ಜಾಹೀರಾತು ತೆರವುಗೊಳಿಸುವಂತೆ ಆದೇಶದ ನೀಡುವ ಅಧಿಕಾರ ಮುಖ್ಯ ಆಯುಕ್ತರಿಗೆ ಇದೆ. ಯಾವುದಾದರೂ ದೂರು ಬಂದರೆ ಅಥವಾ ಸ್ವಯಂಪ್ರೇರಿತವಾಗಿ ಈ ಕ್ರಮ ಕೈಗೊಳ್ಳಬಹುದು. ತೆರವುಗೊಳಿಸದಿದ್ದರೆ ಬಿಬಿಎಂಪಿಯಿಂದಲೇ ಅದನ್ನು ತೆರವುಗೊಳಿಸಿ ಅದಕ್ಕೆ ತಗುಲಿದ ವೆಚ್ಚವನ್ನು ಆ ಹೋರ್ಡಿಂಗ್‌ನ ಮಾಲೀಕರಿಂದ ವಸೂಲಿ ಮಾಡಬಹುದು.

ಜಾಹೀರಾತು: ಮೂರು ವರ್ಷಗಳಲ್ಲಿ ನಡೆದುದೇನು?

2018 ಆ. 01: ನಗರದಲ್ಲಿ ಎಲ್ಲ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಿ ಎಂದ ಹೈಕೋರ್ಟ್‌

2018 ಆ.6: ಒಂದು ವರ್ಷ ಹೊರಾಂಗಣ ಜಾಹೀರಾತು ನಿಷೇಧಿಸಿ ಪಾಲಿಕೆ ಕೌನ್ಸಿಲ್‌ ಸಭೆ ನಿರ್ಣಯ

2018 ಆ.28: ‘ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶ ನೀತಿ ಹಾಗೂ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ -2018’ಕ್ಕೆ ಪಾಲಿಕೆ ಕೌನ್ಸಿಲ್‌ ಸಭೆ ಅನುಮೋದನೆ

2018ರ ಸೆ. 11: ಬೈಲಾ ಕರಡು ರಾಜ್ಯಪತ್ರದಲ್ಲಿ ಪ್ರಕಟ– ಸಾರ್ವಜನಿಕರಿಂದ ಸಲಹೆ ಆಹ್ವಾನ ಎರಡು ತಿಂಗಳ ಬಳಿಕ ಸರ್ಕಾರಕ್ಕೆ ಪರಿಷ್ಕೃತ ಕರಡು ಸಲ್ಲಿಕೆ.

2019ರ ಫೆ.6: ಜಾಹೀರಾತು ನಿಷೇಧಿಸುವ ಪಾಲಿಕೆ ನಿರ್ಣಯಕ್ಕೆ ಹೈಕೋರ್ಟ್‌ ಏಕ ಸದಸ್ಯ ಪೀಠದಿಂದ ತಡೆ

2019ರ ಫೆ.7: ಏಕ ಸದಸ್ಯ ಪೀಠದ ಆದೇಶ ರದ್ದುಪಡಿಸಿದ ವಿಭಾಗೀಯ ನ್ಯಾಯಪೀಠ

2019 ಜು 15: ‘ಬಿಬಿಎಂಪಿ ಜಾಹೀರಾತು ನಿಯಮ 2019’ರ ಕರಡು ಅಧಿಸೂಚನೆ ಪ್ರಕಟಿಸಿದ ನಗರಾಭಿವೃದ್ಧಿ ಇಲಾಖೆ

2021ರ ಜು 26: ‘ಬಿಬಿಎಂಪಿ ಜಾಹೀರಾತು ನಿಯಮ 2019’ ಅಂತಿಮ ಅಧಿಸೂಚನೆ ಪ್ರಕಟ

ಇವುಗಳಿಗೆ ನಿಷೇಧ ಮುಂದುವರಿಕೆ

* ನಗರದ ಸೌಂದರ್ಯಕ್ಕೆ ಧಕ್ಕೆ ತರುವ ಭಿತ್ತಿಪತ್ರಗಳು ಹಾಗೂ ಬಿತ್ತಿ ಬರಹಗಳು

* ಮರಗಳಿಗೆ ಯಾವುದೇ ತರಹದ ಜಾಹೀರಾತು ಹಚ್ಚುವುದು, ಮೊಳೆ ಹೊಡೆದು ಅಳವಡಿಸುವುದು, ಕಟ್ಟುವುದು.

* ಪ್ರಾಣಿಗಳ ಮೇಲೆ, ಅವುಗಳನ್ನು ಸಾಗಿಸುವ ವಾಹನಗಳಲ್ಲಿ ಜಾಹೀರಾತು ಅಳವಡಿಕೆ ಹಾಗೂ ಜಾಹೀರಾತಿಗೆ ಪ್ರಾಣಿಗಳ ಬಳಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.