ADVERTISEMENT

ಅಗರ: ಸಂಗ್ರಹವಾಯಿತು 5 ಲೋಡ್‌ ಪ್ಲಾಸ್ಟಿಕ್‌ ಕಸ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 22:13 IST
Last Updated 27 ಫೆಬ್ರುವರಿ 2021, 22:13 IST
ಪ್ಲಾಗ್‌ ರನ್‌ ಕಾರ್ಯಕ್ರಮದಲ್ಲಿ ಸ್ವಯಂಸೇವಕರು ಪ್ಲಾಸ್ಟಿಕ್‌ ಕಸ ಹೆಕ್ಕಿದರು
ಪ್ಲಾಗ್‌ ರನ್‌ ಕಾರ್ಯಕ್ರಮದಲ್ಲಿ ಸ್ವಯಂಸೇವಕರು ಪ್ಲಾಸ್ಟಿಕ್‌ ಕಸ ಹೆಕ್ಕಿದರು   

ಬೆಂಗಳೂರು: ಎಚ್.ಎಸ್.ಆರ್ ಬಡಾವಣೆಯ ಅಗರ ಕೆರೆ ಪರಿಸರದಲ್ಲಿ ಶನಿವಾರ ಸ್ವಯಂಸೇವಕರು ಪ್ಲಾಗ್‌ ರನ್‌ ನಡೆಸಿ ಆಟೊಟಿಪ್ಪರ್‌ನಲ್ಲಿ ಐದು ಲೋಡ್‌ ಆಗುವಷ್ಟು ಪ್ಲಾಸ್ಟಿಕ್ ಕವರ್ ಹಾಗೂ ಪ್ಲಾಸ್ಟಿಕ್‌ ಬಾಟಲಿಗಳನ್ನು ಸಂಗ್ರಹಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ‘ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021’ರ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಪ್ಲಾಗ್‌ ರನ್‌ ಅನ್ನು ಶಾಸಕ ಸತೀಶ್ ರೆಡ್ಡಿ ಉದ್ಘಾಟಿಸಿದರು.

ಬಿಡಿಎ ಕಾಂಪ್ಲೆಕ್ಸ್ ಬಳಿಯ ಅಗರ ದ್ವಾರದಿಂದ ಜಗನ್ನಾಥ ದೇವಸ್ಥಾನದವರೆಗೆ ಬೆಳಗ್ಗೆ 6.45 ರಿಂದ ಬೆಳಗ್ಗೆ 9.30ರವರೆಗೆ ಪ್ಲಾಗ್‌ ರನ್‌ ನಡೆಯಿತು. ಸುಮಾರು 150 ಮಂದಿ ಸ್ವಯಂಸೇವಕರು ಈ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.

ADVERTISEMENT

ಬಿಬಿಎಂಪಿ ವಿಶೇಷ ಆಯುಕ್ತ (ಕಸ ವಿಲೇವಾರಿ) ಡಿ. ರಂದೀಪ್‌, ‘ಸ್ವಚ್ಛ ಸರ್ವೇಕ್ಷಣ್‌ ಅಭಿಯಾನದಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ವಿಶೇಷ ಮಹತ್ವ ಇದೆ. ನಗರದಲ್ಲಿ ಇದುವರೆಗೆ ನಾಗರಿಕರಿಂದ 97 ಸಾವಿರ ಪ್ರತಿಕ್ರಿಯೆಗಳು ಬಂದಿದ್ದು, ಮಾರ್ಚ್ ಅಂತ್ಯದಲ್ಲಿ ಇದು 1.5 ಲಕ್ಷ ತಲುಪುವ ನಿರೀಕ್ಷೆ ಇದೆ’ ಎಂದರು.

‘ಬಿಬಿಎಂಪಿ ಅಧಿಕಾರಿಗಳು, ಪೌರಕಾರ್ಮಿಕರು ಹಾಗೂ ಮಾರ್ಷಲ್‌ಗಳಿಂದ ಮಾತ್ರ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ನಾಗರಿಕರ ಬೆಂಬಲವೂ ಅಗತ್ಯ. ಸ್ವಚ್ಛ ಬೆಂಗಳೂರು ನಿರ್ಮಾಣಕ್ಕೆಪ್ರತಿಯೊಬ್ಬರೂ ಪಣತೊಡಬೇಕು. ಎಷ್ಟೆಲ್ಲಾ ಅನಗತ್ಯ ವಸ್ತುಗಳನ್ನು ಬಳಸುತ್ತಿದ್ದೇವೆ ಎಂಬ ಅರಿವು ಪ್ಲಾಗ್ ರನ್ ವೇಳೆ ಸಾರ್ವಜನಿಕರಿಗೆ ಮನವರಿಕೆ ಆಗುತ್ತದೆ. ಮರುಬಳಕೆ ಮಾಡುವ ವಸ್ತುಗಳನ್ನು ಮಾತ್ರ ಹೆಚ್ಚಾಗಿ ಬಳಸಲು ಇದರಿಂದ ಉತ್ತೇಜನ ಸಿಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.