ADVERTISEMENT

‘ಕೃಷಿ ಅರಣ್ಯ’ಕ್ಕೆ ಗ್ರಹಣ: ರೈತರನ್ನು ತಲುಪದ ಪ್ರೋತ್ಸಾಹಧನ

ಮಂಜುನಾಥ್ ಹೆಬ್ಬಾರ್‌
Published 8 ಮಾರ್ಚ್ 2020, 21:16 IST
Last Updated 8 ಮಾರ್ಚ್ 2020, 21:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರೈತರ ಜಮೀನಿನಲ್ಲಿ ಸಸಿಗಳನ್ನು ಬೆಳೆಸುವ ‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ’ಗೆ ಗ್ರಹಣ ಹಿಡಿದಿದೆ. ಸಸಿಗಳನ್ನು ಬೆಳೆಸಿದ ಸಾವಿರಾರು ರೈತರಿಗೆ ಸರಿಯಾಗಿ ಪ್ರೋತ್ಸಾಹಧನವೇ ಸಿಕ್ಕಿಲ್ಲ.

ಯೋಜನೆಯಡಿ ರೈತರಿಗೆ ವಿತರಿಸಿದ ಪ್ರೋತ್ಸಾಹಧನದ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಿನಾರಾಯಣ ಈ ಮಾಹಿತಿ ‍ಪಡೆದಿದ್ದಾರೆ. ಈ ಪ್ರಕಾರ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ) ನೀಡಿರುವ ಮಾಹಿತಿಗಳ ನಡುವೆ ಅಜಾಗಜಾಂತರವಿದ್ದು, ₹25 ಕೋಟಿ ವ್ಯತ್ಯಾಸ ಕಂಡು ಬಂದಿದೆ. ‘ಅರಣ್ಯ ಇಲಾಖೆಯ ಅಧಿಕಾರಿಗಳ ಧೋರಣೆಯಿಂದ ಈ ಸೌಲಭ್ಯ ರೈತರಿಗೆ ತಲುಪಿಲ್ಲ. ಈ ಮೂಲಕ ವಂಚನೆ ಮಾಡಲಾಗಿದೆ’ ಎಂದು ಲಕ್ಷ್ಮೀನಾರಾಯಣ ದೂರಿದ್ದಾರೆ.

ಈ ಯೋಜನೆಯನ್ನು 2011–12ನೇ ಸಾಲಿನ ಬಜೆಟ್‌ನಲ್ಲಿ, ‘ರಾಜ್ಯದಲ್ಲಿ ಸಂರಕ್ಷಿತ ಅರಣ್ಯ ಪ್ರದೇಶದ ಹೊರಗಡೆ ಮರಗಳ ಹೊದಿಕೆಯು ಶೇ 2.96ರಷ್ಟು ಮಾತ್ರ ಇದ್ದು, ಇದರ ‍ಪ್ರಮಾಣ ಹೆಚ್ಚಿಸಲು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಸಸಿಗಳನ್ನು ನೆಟ್ಟು ಪೋಷಿಸುವ ರೈತರಿಗೆ, ಸಾರ್ವಜನಿಕರಿಗೆ ಹಾಗೂ ಸಂಘಸಂಸ್ಥೆಗಳಿಗೆ ಪ್ರೋತ್ಸಾಹಧನ ನೀಡಲಾಗುವುದು’ ಎಂದು ಪ್ರಕಟಿಸಲಾಗಿತ್ತು.

ADVERTISEMENT

ರಾಜ್ಯದಲ್ಲಿ 3,306 ರೈತರು 8.51 ಲಕ್ಷ ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ. ಅವರಿಗೆ ₹6.18 ಕೋಟಿ ಪ್ರೋತ್ಸಾಹಧನ ನೀಡಬೇಕಿದ್ದು, 2019–20ನೇ ಸಾಲಿನಲ್ಲಿ ₹3.09 ಕೋಟಿ ಪ್ರೋತ್ಸಾಹಧನ ಹಂಚಿಕೆ ಮಾಡಲಾಗಿದೆ ಎಂದು ಪಿಸಿಸಿಎಫ್‌ (ಅಭಿವೃದ್ಧಿ) ಕಚೇರಿ ಮಾಹಿತಿ ನೀಡಿದೆ. ಈ ಪ್ರಕಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ₹19.93 ಲಕ್ಷ ನೀಡಲಾಗಿದೆ. ಆದರೆ, ಬೆಂಗಳೂರು ಡಿಸಿಎಫ್‌ ಕಚೇರಿ ಮಾಹಿತಿ ‍ಪ್ರಕಾರ, ಜಿಲ್ಲೆಗೆ ಅವಶ್ಯವಿರುವ ಪ್ರೋತ್ಸಾಹಧನದ ಮೊತ್ತ ₹40.56 ಲಕ್ಷ. ಪಿಸಿಸಿಎಫ್ ಕಚೇರಿ ಪ್ರಕಾರ ಚಿಕ್ಕಬಳ್ಳಾಪುರ ಪ್ರಾದೇಶಿಕ ವಿಭಾಗಕ್ಕೆ ₹43.77 ಲಕ್ಷ ಬೇಕಿದ್ದರೆ, ಅಲ್ಲಿನ ಡಿಸಿಎಫ್‌ ‍ಪ್ರಕಾರ ₹1.42 ಕೋಟಿ ಪ್ರೋತ್ಸಾಹಧನ ನೀಡಬೇಕಿದೆ. ಎಲ್ಲ ಜಿಲ್ಲೆಗಳ ಲೆಕ್ಕಾಚಾರದಲ್ಲೂ ಇಂತಹ ವ್ಯತ್ಯಾಸಗಳು ಕಂಡುಬಂದಿವೆ.

‘ಈ ಲೋಪದ ಬಗ್ಗೆ ಅರಣ್ಯ ಸಚಿವರಿಗೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಪಿಸಿಸಿಎಫ್ ಅವರಿಗೆ ದೂರು ಸಲ್ಲಿಸಲಾಗಿದೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಧ್ಯಪ್ರವೇಶಿಸಿ ರೈತರಿಗೆ ನ್ಯಾಯ ಕೊಡಿಸಬೇಕು’ ಎಂದು ಲಕ್ಷ್ಮಿನಾರಾಯಣ ಒತ್ತಾಯಿಸಿದರು.

‘ಯೋಜನೆಯ ಅನುಷ್ಠಾನದಲ್ಲಿ ಲೋಪಗಳು, ಅಕ್ರಮಗಳು ಕಂಡುಬಂದಿದ್ದರೆ ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು’ ಎಂದು ಅರಣ್ಯಪಡೆ ಮುಖ್ಯಸ್ಥ ಪುನಟಿ ಶ್ರೀಧರ್ ಅವರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರೋತ್ಸಾಹಧನ ಹೆಚ್ಚಳ: ಜಾರಿ ಗೊಂದಲ
ಬದುಕುಳಿದ ಸಸಿಗೆ ಮೊದಲ ವರ್ಷ ₹30, ಎರಡನೇ ವರ್ಷ ₹30 ಹಾಗೂ ಮೂರನೇ ವರ್ಷ ₹40 ನೀಡಲಾಗುತ್ತಿತ್ತು. ಈಗ ಅದನ್ನು ಅನುಕ್ರಮವಾಗಿ ₹35, ₹40 ಹಾಗೂ ₹50ಕ್ಕೆ ಏರಿಸಲಾಗಿದೆ. ಆದರೆ, ಈ ಮೊತ್ತವನ್ನು ಯಾವ ವರ್ಷದಿಂದ ನೀಡಬೇಕು ಎಂಬ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲ. ಈ ಬಗ್ಗೆ ಸ್ಪಷ್ಟ ಆದೇಶ ಹೊರಡಿಸುವಂತೆ ‍ಅರಣ್ಯ ಪಡೆಯ ಮುಖ್ಯಸ್ಥರು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

*
ಈ ಪ್ರೋತ್ಸಾಹಧನ ರೈತರ ಕಣ್ಣೊರೆಸುವ ತಂತ್ರ ಅಷ್ಟೇ. ರೈತರಿಗೆ ಪ್ರೋತ್ಸಾಹಧನ ವಿತರಿಸದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು.farmers
-ಲಕ್ಷ್ಮಿನಾರಾಯಣ, ನಿವೃತ್ತ ಡಿಸಿಎಫ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.