
ಬೆಂಗಳೂರು: ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್ (ಎಐ ಆ್ಯಂಡ್ ಎಂಎಲ್) ಕ್ಷೇತ್ರದಲ್ಲಿನ ತಾಂತ್ರಿಕ ಕೌಶಲಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡುವ ಉದ್ದೇಶದಿಂದ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯವು ಲ್ಯಾಬ್ ಆರಂಭಿಸಲಿದೆ.
‘ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಆದರೆ, ಉದ್ಯೋಗ ಪಡೆಯಲು ಬೇಕಾದ ಕೌಶಲ ವಿದ್ಯಾರ್ಥಿಗಳಲ್ಲಿ ಇಲ್ಲ. ಇದನ್ನು ಮನಗಂಡು ಎಐ ಆ್ಯಂಡ್ ಎಂಎಲ್ ಲ್ಯಾಬ್ ಆರಂಭಿಸುತ್ತಿದ್ದು, ಮುಂದಿನ ತಿಂಗಳು ಶುರುವಾಗಲಿದೆ’ ಎಂದು ಕುಲಪತಿ ಪ್ರೊ. ಬಿ.ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ಉದ್ಯಮ ವಲಯ ಮತ್ತು ಶೈಕ್ಷಣಿಕ ವಲಯ ಒಟ್ಟಾಗಿ ಸೇರಿ ಮಾರುಕಟ್ಟೆ ಯಲ್ಲಿನ ಉದ್ಯೋಗ ಅವಕಾಶಗಳಿಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ಕೌಶಲಗಳ ಬಗ್ಗೆ ತಿಳಿಸಿಕೊಡಬೇಕಾಗುತ್ತದೆ. ಆ ಕೆಲಸವನ್ನು ಮಾಡುವ ನಿಟ್ಟಿನಲ್ಲಿ ಲ್ಯಾಬ್ ಆರಂಭಿಸಲಾಗುತ್ತಿದೆ. ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿ ಮತ್ತು ಸ್ನಾತಕೋತ್ತರ ಪದವಿಯ ಸುಮಾರು 2,500 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ.
ಇದಾದ ಬಳಿಕ ಆರ್‌ಸಿ ಕಾಲೇಜು (5 ಸಾವಿರ ವಿದ್ಯಾರ್ಥಿಗಳು) ಮತ್ತು ಸರ್ಕಾರಿ ಕಲಾ ಕಾಲೇಜಿನ (3 ಸಾವಿರ) ವಿದ್ಯಾರ್ಥಿಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗುತ್ತದೆ. ಅಲ್ಲದೆ ವಿಶ್ವ ವಿದ್ಯಾಲಯದ ಸಂಯೋಜನೆ ಪಡೆದಿರುವ ಕಾಲೇಜುಗಳ ವಿದ್ಯಾರ್ಥಿ ಗಳು ಇದರ ಉಪಯೋಗ ಪಡೆದುಕೊಳ್ಳ ಬಹುದು ಎಂದು ರಮೇಶ್ ವಿವರಿಸಿದರು.
ಭಾಷೆಗಳ ಲ್ಯಾಬ್: ವಿದೇಶಿ ಭಾಷೆಗಳ ಲ್ಯಾಬ್ ಮತ್ತು ಇಂಗ್ಲಿಷ್ ಭಾಷೆಯ ಲ್ಯಾಬ್ ಅನ್ನು ಮಾರ್ಚ್‌ನಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ. 14 ವಿದೇಶಿ ಭಾಷೆಗಳಲ್ಲಿ ಸರ್ಟಿಫಿಕೇಟ್, ಡಿಪ್ಲೊಮಾ, ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
‘ವಿದೇಶಿ ಭಾಷೆಗಳಿಗೆ ಸಂಬಂಧಪಟ್ಟ ಹಾಗೆ ಪ್ರತ್ಯೇಕ ಲ್ಯಾಬ್ ಆರಂಭಿಸುವ ಮೂಲಕ ಸಂವಹನ ಮತ್ತು ಕೌಶಲದ ಬಗ್ಗೆ ತಿಳಿಸಿಕೊಡಲಾಗುತ್ತದೆ. ಇದರಿಂದ ವಿದೇಶಗಳಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗಲಿದೆ. ಮಲೇಷ್ಯಾದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯ ಇವೆ. ನಮ್ಮ ವಿದ್ಯಾರ್ಥಿಗಳು ‘ಮಲಯ’ ಭಾಷೆಯಲ್ಲಿ ಉತ್ತಮವಾದ ಸಂವಹನ ಕೌಶಲ ಬೆಳೆಸಿಕೊಂಡರೆ ಅಲ್ಲಿ ಹೋಗಿ ಕೆಲಸ ಮಾಡಲು ಅನುಕೂಲವಾಗಲಿದೆ’ ಎನ್ನುತ್ತಾರೆ ರಮೇಶ್.
ವಿಶ್ವವಿದ್ಯಾಲಯದಲ್ಲಿ ಜಪಾನೀಸ್, ಇಟಾಲಿಯನ್, ಸ್ಪ್ಯಾನಿಷ್, ಜರ್ಮನ್ ಸೇರಿದಂತೆ ಹಲವು ವಿದೇಶಿ ಭಾಷೆಗಳ ಕೋರ್ಸ್‌ಗಳಿವೆ. ಈ ಕೋರ್ಸ್ ಮಾಡಿ ದವರಿಗೆ ಉದ್ಯೋಗಾವಕಾಶ ಕಲ್ಪಿಸಲು ವಿವಿಧ ದೇಶಗಳ ಕಾನ್ಸುಲೆಟ್‌ಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಹಿನ್ನೆಲೆಯಿಂದ ಬಂದವರು. ಅವರಿಗೆ ಇಂಗ್ಲಿಷ್ ಭಾಷೆಯ ಮೇಲೆ ಸಾಕಷ್ಟು ಹಿಡಿತ ಇಲ್ಲ. ಹೀಗಾಗಿ ಉದ್ಯೋಗ ಪಡೆಯುವುದು ಕಷ್ಟವಾಗುತ್ತಿದೆ. ಇದನ್ನು ಮನಗಂಡು ಇಂಗ್ಲಿಷ್ ಭಾಷೆಯ ಲ್ಯಾಬ್ ಆರಂಭಿಸುತ್ತಿದ್ದು, ಹಂತ ಹಂತವಾಗಿ ಎಲ್ಲ ವಿದ್ಯಾರ್ಥಿಗಳಿಗೆ ಸಂವಹನ ಕೌಶಲದ ಬಗ್ಗೆ ತರಬೇತಿ ನೀಡಲಾಗುತ್ತದೆ.
‘ಇಂಗ್ಲಿಷ್‌ನಲ್ಲಿ ಪದಗಳ ಬಳಕೆ, ಉಚ್ಚಾರಣೆ, ವ್ಯಾಕರಣ, ಯಾವುದು ಸರಿ, ಯಾವುದು ತಪ್ಪು, ಸಂವಹನ ನಡೆಸುವ ವಿಧಾನ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡ ಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ತಂತ್ರಾಂಶ ಇರುತ್ತದೆ. ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಸಿಗಬೇಕು. ಸ್ಪರ್ಧೆ ಎದುರಿಸುವ ಸಾಮರ್ಥ್ಯ ಅವರಲ್ಲಿ ಬರಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಅವರನ್ನು ಸಜ್ಜುಗೊಳಿಸಲಾಗುವುದು’ ಎಂದರು.