
ಬಿ.ಎ.ಪಾಟೀಲ
ಕೆಂಗೇರಿ: ‘ಎಐ ತಂತ್ರಜ್ಞಾನದಿಂದ ದೊರಕುವ ಫಲಿತಾಂಶದ ನೈಜತೆ ಹಾಗೂ ನಿಖರತೆಯನ್ನು ಪರಾಮರ್ಶಿಸುವ ಸಾಮರ್ಥ್ಯವನ್ನು ಮಾನವ ಜನಾಂಗ ಎಂದಿಗೂ ಕಳೆದುಕೊಳ್ಳಬಾರದು’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎ. ಪಾಟೀಲ ಎಚ್ಚರಿಸಿದರು.
ಉಲ್ಲಾಳು ಕೆಎಲ್ಇ ಕಾನೂನು ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ 8ನೇ ಸಾಂವಿಧಾನಿಕ ಕಾನೂನು ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ತಂತ್ರಜ್ಞಾನವು ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳನ್ನು ಒಳಗೊಂಡಿರುತ್ತದೆ. ಈ ತಂತ್ರಜ್ಞಾನದ ಬಳಕೆಗೆ ಪೂರಕವಾಗಿ ಮನುಜನು ತನ್ನ ಸ್ವಂತ ಬುದ್ಧಿಮತ್ತೆಯನ್ನೂ ಕಾಪಿಟ್ಟುಕೊಳ್ಳುವ ಜರೂರಿದೆ. ತಂತ್ರಜ್ಞಾನದ ಸದ್ಬಳಕೆ ಹಾಗೂ ದುರ್ಬಳಕೆಯ ಆಯ್ಕೆ ನಮ್ಮದೇ ಆಗಿರುತ್ತದೆ ಎಂದು ಕಿವಿಮಾತು ಹೇಳಿದರು.
ಸ್ಪರ್ಧೆಯ ಜಂಟಿ ಆಯೋಜಕರಾದ ಸುರಾನ ಹಾಗೂ ಸುರಾನ ಸಂಸ್ಥೆಯ ಪ್ರೀತಂ ಸುರಾನ ಮಾತನಾಡಿ, ಅಣಕು ನ್ಯಾಯಾಲಯದಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳ ಯೋಚನಾ ಶಕ್ತಿ ಹಾಗೂ ವಾದದ ಗುಣ ಮಟ್ಟದ ಹೆಚ್ಚಲಿದೆ. ತಜ್ಞ ಹಾಗೂ ಬದ್ಧತೆಯುಳ್ಳ ವಕೀಲರನ್ನು ಸೃಷ್ಟಿಸುವಲ್ಲಿ ಅಣಕು ನ್ಯಾಯಾಲಯ ಸ್ಪರ್ಧೆಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದರು.
ಕಾಲೇಜಿನ ರಜತ ಮಹೋತ್ಸವ ಸಂಭ್ರಮದ ಸಂದರ್ಭದಲ್ಲಿ ಆಯೋಜನೆಗೊಂಡಿರುವ ಈ ರಾಷ್ಟಮಟ್ಟದ ಸ್ಪರ್ಧೆಯಲ್ಲಿ ಸುಮಾರು ಐವತ್ತು ತಂಡಗಳು ಭಾಗವಹಿಸುತ್ತಿವೆ. ಎರಡು ದಿನದ ಈ ಸ್ಪರ್ಧೆ ಭಾನುವಾರ ಸಂಜೆ ಸಮಾರೋಪಗೊಳ್ಳಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಜೆ.ಎಂ. ಮಲ್ಲಿಕಾರ್ಜುನಯ್ಯ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.