ADVERTISEMENT

ನೀರು ನಿರ್ವಹಣೆಗೆ AI ಬಳಕೆ: ನಾವೇ ಜಗತ್ತಿಗೆ ಮಾದರಿ– ದೆಹಲಿಯಲ್ಲಿ BWSSB ಅಧ್ಯಕ್ಷ

ದೆಹಲಿ ಎಐ ಶೃಂಗಸಭೆಯಲ್ಲಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 11:34 IST
Last Updated 17 ಫೆಬ್ರುವರಿ 2026, 11:34 IST
<div class="paragraphs"><p> ದೆಹಲಿ ಎಐ ಶೃಂಗಸಭೆಯಲ್ಲಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ (ಎಡದಿಂದ ಎರಡನೆಯವರು)</p></div>

ದೆಹಲಿ ಎಐ ಶೃಂಗಸಭೆಯಲ್ಲಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ (ಎಡದಿಂದ ಎರಡನೆಯವರು)

   

ಬೆಂಗಳೂರು: ನಗರದ ನೀರು ನಿರ್ವಹಣೆಯಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಬೆಂಗಳೂರು ಜಲಮಂಡಳಿಯು ಜಾಗತಿಕ ಮಟ್ಟದಲ್ಲಿ ಮಾದರಿಯಾಗಿ ಹೊರಹೊಮ್ಮಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

ನವದೆಹಲಿಯ ಭಾರತ್ ಮಂಟಪದಲ್ಲಿ ಮಂಗಳವಾರ ನಡೆದ ‘ಎಐ ಇಂಪ್ಯಾಕ್ಟ್ ಶೃಂಗಸಭೆ-2026’ ರಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ADVERTISEMENT

"ಮಾಡೆಲ್‌ ಟೂ ಮಾಸಸ್‌ ಹವಾಮಾನ ವೈಪರೀತ್ಯ ಎದುರಿಸಲು ಎಐ ಬಳಕೆ ಎಂಬ ಸಂವಾದದಲ್ಲಿ ಭಾಗವಹಿಸಿದ ಅವರು, ಜಲಮಂಡಳಿಯು ಸಾಂಪ್ರದಾಯಿಕ ಪದ್ಧತಿಯಿಂದ ಹೊರಬಂದು, ಸ್ಮಾರ್ಟ್ ತಂತ್ರಜ್ಞಾನ ಆಧಾರಿತ ಸಂಸ್ಥೆಯಾಗಿ ಹೇಗೆ ಬದಲಾಗಿದೆ ಎಂಬುದನ್ನು ವಿವರಿಸಿದರು.

ಮಂಡಳಿಯ 'ಐಪಂಪ್‌ನೆಟ್' ವ್ಯವಸ್ಥೆಯ ಯಶಸ್ಸನ್ನು ಪ್ರತಿಪಾದಿಸಿದ ಅವರು, ಪಂಪಿಂಗ್ ಸ್ಟೇಷನ್‌ಗಳು ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ನಿರ್ವಹಣೆಯಲ್ಲಿ ಈ ವ್ಯವಸ್ಥೆ ಕ್ರಾಂತಿ ಮಾಡಿದೆ ಎಂದರು.

"ನಮ್ಮ ಪಂಪಿಂಗ್ ಸ್ಟೇಷನ್‌ಗಳು ಮತ್ತು ಎಸ್‌ಟಿಪಿಗಳಲ್ಲಿ ಎಐ ಆಧಾರಿತ ಪಂಪ್‌ಗಳನ್ನು ಅಳವಡಿಸುವ ಮೂಲಕ ಕಾರ್ಯಕ್ಷಮತೆಯನ್ನು ಹೆಚ್ಚಿಸಿದ್ದೇವೆ. ಇದರಿಂದ ವಾರ್ಷಿಕವಾಗಿ ₹40 ಕೋಟಿ ಗೂ ಅಧಿಕ ವಿದ್ಯುತ್ ವೆಚ್ಚವನ್ನು ಉಳಿತಾಯ ಮಾಡುತ್ತಿದ್ದೇವೆ. ಇದು ಕೇವಲ ಮಂಡಳಿಗೆ ಆರ್ಥಿಕ ಲಾಭವಷ್ಟೇ ಅಲ್ಲ, ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸುವ ಮೂಲಕ ಪರಿಸರಕ್ಕೂ ದೊಡ್ಡ ಕೊಡುಗೆ ನೀಡಿದ್ದೇವೆ," ಎಂದು ಡಾ. ಮನೋಹರ್ ತಿಳಿಸಿದರು.

ಲೆಕ್ಕಕ್ಕೆ ಸಿಗದ ನೀರಿನ ಸವಾಲನ್ನು ಎದುರಿಸಲು ಮಂಡಳಿ ಹೈಟೆಕ್ ಪರಿಹಾರ ಕಂಡುಕೊಂಡಿದೆ. "ನೀರು ಸೋರಿಕೆ ಪತ್ತೆಹಚ್ಚಲು ಮತ್ತು ಅನಧಿಕೃತ ಸಂಪರ್ಕಗಳನ್ನು ನಿಖರವಾಗಿ ಗುರುತಿಸಲು ನಾವು ಈಗ ಎಐ ಚಾಲಿತ ರೋಬೋಟಿಕ್ಸ್ ಬಳಸುತ್ತಿದ್ದೇವೆ. ಮುಂಜಾಗ್ರತಾ ಕ್ರಮಗಳ ಮೂಲಕ ಸೋರಿಕೆಯಾಗುತ್ತಿದ್ದ ನೀರನ್ನು ಉಳಿಸಿ, ಅದನ್ನು ಅಗತ್ಯವಿರುವ ನಾಗರಿಕರಿಗೆ ತಲುಪಿಸಲು ಸಾಧ್ಯವಾಗುತ್ತಿದೆ," ಎಂದು ವಿವರಿಸಿದರು.

ನಗರದ ಅಂತರ್ಜಲ ಮರುಪೂರಣ ಕಾರ್ಯಕ್ಕೆ ವೈಜ್ಞಾನಿಕ ಸ್ಪರ್ಶ ನೀಡಲು ಭಾರತೀಯ ವಿಜ್ಞಾನ ಸಂಸ್ಥೆ ಜತೆಗೆ ಸಹಯೋಗವನ್ನು ಹೊಂದಿರುವ ಬಗ್ಗೆ ವಿವರಣೆ ನೀಡಿದರು.

"ನಾವು ಬೆಂಗಳೂರು ನಗರದಾದ್ಯಂತ 40 ಕೆರೆಗಳನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸುತ್ತಿದ್ದೇವೆ. ಬೆಂಗಳೂರು ನಗರ ಅಂತರ್ಜಲ ಮಟ್ಟ ಮತ್ತು ಪರಿಸರದ ಮೇಲಾಗುವ ಪರಿಣಾಮವನ್ನು ನೈಜ ಸಮಯದಲ್ಲಿ ಅರಿಯಲು ಹಾಗೂ ಅಂತರ್ಜಲ ಮಟ್ಟವನ್ನು ತಿಳಿಯಲು 'ಎಐ ಆಧಾರಿತ ಐಒಟಿ ಸೆನ್ಸಾರ್‌'ಗಳನ್ನು ಅಳವಡಿಸಿದ್ದೇವೆ. ನಾವು ಕೇವಲ ಕೆರೆ ತುಂಬಿಸುತ್ತಿಲ್ಲ, ಜೊತೆಯಲ್ಲಿಯೇ ನಿಖರವಾದ ದತ್ತಾಂಶದೊಂದಿಗೆ ಅಂತರ್ಜಲ ಮಟ್ಟದ ಸುಧಾರಣೆಯನ್ನು ದಾಖಲಿಸುತ್ತಿದ್ದೇವೆ," ಎಂದರು.

ಬೃಹತ್ ಬಳಕೆದಾರರಿಗೆ ನಿಖರವಾದ ಬಿಲ್ ನೀಡಲು ಎಐ ಆಧಾರಿತ ಸ್ಮಾರ್ಟ್ ವಾಟರ್ ಮೀಟರ್‌ಗಳನ್ನು ಅಳವಡಿಸುವ ಪ್ರಸ್ತಾಪವಿದೆ ಎಂದರು. ಅಲ್ಲದೆ, ನಗರದ ನೀರು ಸರಬರಾಜು ವ್ಯವಸ್ಥೆಯ ಮೈಲಿಗಲ್ಲಾದ ಅತ್ಯಾಧುನಿಕ ‘ಎಐ ಸಮಗ್ರ ಸ್ಕಾಡಾ ನಿರ್ವಹಣಾ ವ್ಯವಸ್ಥೆ’ಯನ್ನು ಸದ್ಯದಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು

ಇಂತಹ ಕ್ರಾಂತಿಕಾರಿ ಹೊಸ ತಂತ್ರಜ್ಞಾನದ ಅಳವಡಿಕೆ ನಮ್ಮ ರಾಜ್ಯದ ರಾಜಕೀಯ ಇಚ್ಛಾಶಕ್ತಿ ಪ್ರಮುಖ ಕಾರಣ ತಂತ್ರಜ್ಞಾನವನ್ನು ಜನಸಾಮಾನ್ಯರ ಒಳಿತಿಗಾಗಿ ಬಳಸುವ ನಮ್ಮ ರಾಜ್ಯದ ಬದ್ಧತೆಯಿಂದಾಗಿ ಬೆಂಗಳೂರು ಇಂದು ನೀರಿನ ಭದ್ರತೆಯಲ್ಲಿ ಮುಂಚೂಣಿಯಲ್ಲಿದೆ," ಎಂದು ಡಾ. ಮನೋಹರ್ ಶ್ಲಾಘಿಸಿದರು.

ಈ ಸಂವಾದದಲ್ಲಿ ಗೂಗಲ್ ಡೀಪ್‌ಮೈಂಡ್, ಐಐಟಿ ದೆಹಲಿ ಮತ್ತು ಸಿಇಇಡಬ್ಲ್ಯೂ ನ ಜಾಗತಿಕ ತಜ್ಞರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.