ಹಡ್ಸನ್ ವೃತ್ತದಲ್ಲಿ ಅಳವಡಿಸಲಾಗಿರುವ ಎಲ್‌ಇಡಿ ಕರ್ಬ್ಸ್
ಬೆಂಗಳೂರು: ನಗರದಲ್ಲಿ ನಡೆಯಲಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಹಾಗೂ ಇನ್ವೆಸ್ಟ್ ಕರ್ನಾಟಕಕ್ಕಾಗಿ ಬಿಬಿಎಂಪಿ ಸಿದ್ಧತೆ ನಡೆಸಿದ್ದು, ಪ್ರಮುಖ ವೃತ್ತ ಹಾಗೂ ಜಂಕ್ಷನ್‌ಗಳ ಸೌಂದರ್ಯೀಕರಣ ಕಾರ್ಯ ಮಾಡುತ್ತಿದೆ.
ಆಕರ್ಷಕವಾಗಿ ಕಾಣುವ ಜೊತೆಗೆ ವಾಹನಗಳ ಸಂಚಾರದ ಸಂದರ್ಭದಲ್ಲಿ ಸುರಕ್ಷತೆಯ ದೃಷ್ಟಿಯಿಂದ ನಗರದಲ್ಲಿ ಪ್ರಥಮ ಬಾರಿಗೆ ‘ಎಲ್‌ಇಡಿ ಕರ್ಬ್ಸ್’ ಅಳವಡಿಸಲಾಗುತ್ತಿದೆ. ಪೊಲೀಸ್ ವೃತ್ತ (ಹಡ್ಸನ್ ವೃತ್ತ), ವಿಧಾನಸೌಧದ ಶಾಸಕರ ಭವನದ ವೃತ್ತ ಹಾಗೂ ಮೌಂಟ್ ಕಾರ್ಮಲ್ ಕಾಲೇಜು ಬಳಿಯ ವೃತ್ತದಲ್ಲಿ ಎಲ್‌ಇಡಿ ಕರ್ಬ್ಸ್ ಅಳವಡಿಕೆ ಕಾರ್ಯ ನಡೆಯುತ್ತಿದೆ.
ಫೆಬ್ರುವರಿ 10ರಿಂದ ‘ವೈಮಾನಿಕ ಪ್ರದರ್ಶನ’, ಫೆ. 11ರಿಂದ ‘ಇನ್ವೆಸ್ಟ್ ಕರ್ನಾಟಕ’ ನಡೆಯಲಿದ್ದು, ವಿವಿಧ ದೇಶ ಹಾಗೂ ರಾಜ್ಯಗಳಿಂದ ಗಣ್ಯರು, ಹೂಡಿಕೆದಾರರು ಭಾಗವಹಿಸುತ್ತಾರೆ. ಈ ಸಂದರ್ಭದಲ್ಲಿ ನಗರವನ್ನು ಆಕರ್ಷಣೀಯವಾಗಿ ಮಾಡಲು ಪಾಲಿಕೆ ಕೈಗೊಂಡಿರುವ ಸಿದ್ಧತೆಗಳನ್ನು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಶುಕ್ರವಾರ ಪರಿಶೀಲಿಸಿದರು.
ಪ್ರಮುಖ ಜಂಕ್ಷನ್‌ಗಳ ಸೌಂದರ್ಯೀಕರಣ, ಥರ್ಮೋಪ್ಲಾಸ್ಟಿಕ್ ಲೇನ್ ಮಾರ್ಕಿಂಗ್, ‘ಝೀರೊ ಟಾಲರೆನ್ಸ್ ವಲಯ’ಗಳು, ‘ಕ್ಯಾಟ್ ಐಸ್’ ಅಳವಡಿಕೆ, ಅಪಾಯ ಸೂಚನಾ ಫಲಕ ಅಳವಡಿಕೆ, ರಸ್ತೆ ವಿಭಜಕಗಳ ಎತ್ತರ ಹೆಚ್ಚಳ, ಕಬ್ಬಿಣದ ಗ್ರಿಲ್‌ಗಳ ಅಳವಡಿಕೆ, ಅತ್ಯಾಧುನಿಕ ಕೋಲ್ಡ್ ಮಿಕ್ಸ್ ವಿನ್ಯಾಸಗಳ ಪೇಂಟಿಂಗ್, ಪಾದಚಾರಿ ದಾಟುವಿಕೆಯ ಪಟ್ಟಿಗಳ ರಚನೆ ಸೇರಿದಂತೆ ವಿವಿಧ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ಹಡ್ಸನ್ ವೃತ್ತ, ಶಾಸಕರ ಭವನ ವೃತ್ತ, ಕಲ್ಪನಾ ಜಂಕ್ಷನ್, ಮೌಂಟ್ ಕಾರ್ಮಲ್ ಕಾಲೇಜು ಬಳಿಯ ವೃತ್ತ, ಗುಟ್ಟಹಳ್ಳಿ ಬಸ್ ನಿಲ್ದಾಣ, ಮೇಕ್ರಿ ವೃತ್ತ, ಮೇಕ್ರಿ ಬಸ್ ನಿಲ್ದಾಣ, ಜಿಕೆವಿಕೆ ಪಾರ್ಕಿಂಗ್ ಸ್ಥಳ ಹಾಗೂ ನಿಟ್ಟಿ ಮೀನಾಕ್ಷಿ ಕಾಲೇಜು ರಸ್ತೆಗೆ ತುಷಾರ್ ಗಿರಿನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಡ್ಸನ್ ವೃತ್ತದ ಬಳಿಯ ವೃತ್ತದ ಬಳಿ ಎಲ್‌ಇಡಿ ಕರ್ಬ್ ಕಾಮಗಾರಿ, ಲ್ಯಾಂಡ್ ಸ್ಕೇಪ್, ಕಾರಂಜಿ, ದೀಪಾಲಂಕಾರ ಹಾಗೂ ಜಂಕ್ಷನ್ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಿದರು.
ರಾಜಭವನದ ಬಳಿ ‘ಗೋಸ್ಟ್ ಐಲ್ಯಾಂಡ್’ ಹಾಗೂ ‘ಝೀರೊ ಟಾಲರೆನ್ಸ್’, ಕಲ್ಪನಾ ಜಂಕ್ಷನ್ ಬಳಿ ‘ಝೀರೊ ಟಾಲರೆನ್ಸ್‘ ಹಾಗೂ ಪಾದಚಾರಿಗಳು ರಸ್ತೆ ದಾಟುವ ಪಟ್ಟಿ ಅಳವಡಿಕೆಯನ್ನು ಪರಿಶೀಲಿಸಿದರು.
ಗುಟ್ಟಹಳ್ಳಿ ಬಸ್ ನಿಲ್ದಾಣದ ಬಳಿ ಜಟಕಾ ಸ್ಟಾಂಡ್ ಇರುವ ರಸ್ತೆಗೆ ಡಾಂಬರೀಕರಣ ಮಾಡಲು, ಮೇಖ್ರಿ ಬಸ್ ನಿಲ್ದಾಣ ಬಳಿ ಸ್ವಚ್ಛತೆ ಕಾಪಾಡಲು ನಿರ್ದೇಶನ ನೀಡಿದರು.
ಜಿಕೆವಿಕೆಯಲ್ಲಿ ಪಾರ್ಕಿಂಗ್ ಸ್ಥಳ ಪರಿಶೀಲಿಸಿ, ‘ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ವಾಹನ ಚಾಲಕರಿಗಾಗಿ ಸಂಚಾರಿ ಇಂದಿರಾ ಕ್ಯಾಂಟೀನ್ ವ್ಯವಸ್ಥೆ, ಇ–ಶೌಚಾಲಯದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಿರಬೇಕು. ಬಿಎಂಟಿಸಿ ವತಿಯಿಂದ ಬಸ್ ವ್ಯವಸ್ಥೆ ಹಾಗೂ ದೂಳು ಬಾರದಂತೆ ನೀರು ಸಿಂಪಡಣೆ ಮಾಡಬೇಕು’ ಎಂದು ಅಧಿಕಾರಿಗಳಿಗೆ ತುಷಾರ್ ಸೂಚನೆ ನೀಡಿದರು.
ಯೋಜನೆ ವಿಭಾಗದ ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್, ಯಲಹಂಕ ವಲಯ ಆಯುಕ್ತ ಕರೀಗೌಡ, ಪ್ರಧಾನ ಎಂಜಿನಿಯರ್ ಪ್ರಹ್ಲಾದ್, ಬಿಎಸ್‌ಡಬ್ಲ್ಯುಎಂಎಲ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ್ ಕಬಾಡೆ ಉಪಸ್ಥಿತರಿದ್ದರು.
ಅಭಿವೃದ್ಧಿಗೊಳಿಸುತ್ತಿರುವ ಸ್ಥಳಗಳು
ಪೊಲೀಸ್ ವೃತ್ತ (ಹಡ್ಸನ್ ವೃತ್ತ)
ಮೇಕ್ ಇನ್ ಇಂಡಿಯಾ ವೃತ್ತ (ವಿಂಡ್ಸರ್ ಮ್ಯಾನರ್ ಹೋಟೆಲ್ ಜಂಕ್ಷನ್)
ಮೇಖ್ರಿ ವೃತ್ತ ಹೈಗ್ರೌಂಡ್ಸ್ ವೃತ್ತ ವಿಧಾನಸೌಧ ಜಂಕ್ಷನ್ (ಶಾಸಕರ ಭವನದ ಬಳಿ)
ಸದಾಶಿವ ನಗರ ಪೊಲೀಸ್ ಠಾಣೆ ಜಂಕ್ಷನ್
ಶಾಂಗ್ರಿ-ಲಾ ಹೋಟೆಲ್ ಬಳಿಯ ಕಲ್ಪನಾ ಜಂಕ್ಷನ್
ಮೌಂಟ್ ಕಾರ್ಮೆಲ್ ಕಾಲೇಜಿನ ಬಳಿಯ ಜಂಕ್ಷನ್
ರಾಜಭವನ ವೃತ್ತ ಕಾಫಿ ಬೋರ್ಡ್ ಜಂಕ್ಷನ್
ಕಿಮ್ಸ್ ಬಳಿ ಟಿಎಂಸಿ ವೃತ್ತ ಕೆ.ಆರ್ ವೃತ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.