ADVERTISEMENT

ಅಲ್‌ಖೈದಾ ನಂಟು: ಬೆಂಗಳೂರಿನಲ್ಲಿ ಜಾರ್ಖಂಡ್‌ನ ಮಹಿಳೆ ಸೆರೆ

ಹೆಬ್ಬಾಳದ ಎಂ.ಆರ್.ಪಾಳ್ಯದಲ್ಲಿ ನೆಲಸಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 0:30 IST
Last Updated 31 ಜುಲೈ 2025, 0:30 IST
ಸಮಾ ಪರ್ವೀನ್‌
ಸಮಾ ಪರ್ವೀನ್‌   

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅಲ್‌ಖೈದಾ ಭಯೋತ್ಪಾದಕ ಸಂಘಟನೆ ಪರ ಪ್ರಚಾರ ನಡೆಸುತ್ತಿದ್ದ ಹಾಗೂ ಉಗ್ರರ ಸಂಘಟನೆಗಳ ಮುಖಂಡರ ಪ್ರಚೋದನಕಾರಿ ಭಾಷಣಗಳನ್ನು ಹಂಚಿಕೊಳ್ಳುತ್ತಿದ್ದ ಆರೋಪದ ಮೇಲೆ ಜಾರ್ಖಂಡ್‌ನ ಶಮಾ ಪರ್ವೀನ್‌ (30) ಅವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್‌) ಅಧಿಕಾರಿಗಳು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

ಆರೋಪಿಯಿಂದ ಲ್ಯಾಪ್‌ಟಾಪ್, ಮೊಬೈಲ್ ಫೋನ್‌ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿಯನ್ನು ಬಂಧಿಸಿ ಗುಜರಾತ್‌ಗೆ ಕರೆದೊಯ್ಯಲಾಗಿದೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ತನ್ನ ಸಹೋದರನ ಜೊತೆಗೆ ಆರ್‌.ಟಿ.ನಗರದ ಮನೋರಾಯನಪಾಳ್ಯದಲ್ಲಿ ಶಮಾ ಪರ್ವೀನ್‌ ವಾಸವಿದ್ದರು. ಜಾರ್ಖಂಡ್‌ನಿಂದ ತಲೆಮರೆಸಿಕೊಂಡು ನಗರಕ್ಕೆ ಬಂದು ನೆಲಸಿದ್ದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಶಮಾ ಪರ್ವೀನ್ ಪದವೀಧರೆಯಾಗಿದ್ದು, ಎಲ್ಲೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅಲ್‌ಖೈದಾ ಸಂಘಟನೆಯ ಸಿದ್ದಾಂತ ಬೆಂಬಲಿಸುತ್ತಿದ್ದರು. ಅಲ್‌ಖೈದಾದ ನಾಯಕರು, ಕಾರ್ಯಕರ್ತರ ವಿಡಿಯೊ ಹಂಚಿಕೊಳ್ಳುತ್ತಿದ್ದರು. ಈ ಸಂಬಂಧ ಗುಜರಾತ್‌ನಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಇನ್‌ಸ್ಟ್ರಾಗಾಂ ಮೂಲಕ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಅಹಮದಾಬಾದ್‌ನ ತೇವಾಡಿಯ ಶೇಖ್, ಗುಜರಾತಿನ ಸೈಫುಲ್ಲಾ ಖುರೇಷಿ, ದೆಹಲಿಯ ಮೊಹಮ್ಮದ್ ಶೇಖ್‌, ಉತ್ತರ ಪ್ರದೇಶದ ಜೀಶನ್ ಅಲಿಯನ್ನು ಜುಲೈ 22ರಂದು ಗುಜರಾತ್ ರಾಜ್ಯದ ಎಸ್‌ಐಟಿ ಪೊಲೀಸರು ಬಂಧಿಸಿದ್ದರು. ಶಂಕಿತ ಉಗ್ರರ ವಿಚಾರಣೆ ವೇಳೆ ದಕ್ಷಿಣ ಭಾರತದಲ್ಲಿ ಅಲ್‌ ಖೈದಾ ಉಗ್ರ ಸಂಘಟನೆ ಉಸ್ತುವಾರಿ ಹಾಗೂ ಸಾಮಾಜಿಕ ಜಾಲತಾಣಗಳ ಇತರೆ ಖಾತೆಗಳ ನಿರ್ವಹಣೆ ಮಾಡುತ್ತಿದ್ದ ಶಮಾ ಪರ್ವೀನ್ ಬಗ್ಗೆ ಬಾಯಿ ಬಿಟ್ಟಿದ್ದರು. ತಕ್ಷಣ ಎಚ್ಚೆತ್ತುಕೊಂಡ ಎಟಿಎಸ್ ಅಧಿಕಾರಿಗಳು, ಬೆಂಗಳೂರು ಪೊಲೀಸರ ನೆರವಿನೊಂದಿಗೆ ಮಂಗಳವಾರ ರಾತ್ರಿ ಕಾರ್ಯಾಚರಣೆ ನಡೆಸಿ ಶಮಾ ಪರ್ವೀನ್ ಅವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರೋಪಿಯನ್ನು ನಗರದ ನ್ಯಾಯಾಲಯದ ಎದುರು ಹಾಜರುಪಡಿಸಿ, ಟ್ರಾನ್ಸಿಟ್ ವಾರಂಟ್ ಪಡೆದ ಬಳಿಕ ಗುಜರಾತ್‌ಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

‘ಹಿಂಸಾಚಾರಕ್ಕೆ ಪ್ರಚೋದನೆ’

‘ಬೆಂಗಳೂರಿನಲ್ಲಿ ಬಂಧಿಸಲಾಗಿರುವ ಶಮಾ ಪರ್ವಿನ್‌ ಹಾಗೂ ಈಗಾಗಲೇ ಬಂಧಿಸಲಾಗಿರುವ ಆರೋಪಿಗಳು ಎಕ್ಯೂಐಎಸ್‌ (ಭಾರತ ಉಪಖಂಡದಲ್ಲಿ ಅಲ್‌ಖೈದಾ) ಸಿದ್ಧಾಂತ ಬೋಧಿಸುತ್ತಿದ್ದರು. ತನ್ನ ಸಿದ್ಧಾಂತದಲ್ಲಿ ನಂಬಿಕೆ ಇಲ್ಲದವರನ್ನು ಗುರಿಯಾಗಿಸಿ ಹಿಂಸಾಚಾರ ಅಥವಾ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗುವಂತೆ ಭಾರತದ ಮುಸ್ಲಿಮರನ್ನು ಪ್ರಚೋದಿಸುತ್ತಿದ್ದರು’ ಎಂದು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್‌) ಅಧಿಕಾರಿಗಳು ತಿಳಿಸಿದ್ದಾರೆ.

‘ಸರ್ಕಾರದ ವಿರುದ್ಧ ಸಶಸ್ತ್ರ ದಂಗೆ ಏಳುವ ಮೂಲಕ ಭಾರತದ ಬಗ್ಗೆ ಅಸಮಾಧಾನ ಹೊಂದುವಂತೆ ಮಾಡಬೇಕು ಹಾಗೂ ಆ ಮೂಲಕ ಇಸ್ಲಾಮಿಕ್‌ ಶರೀಯತ್‌ ಅಥವಾ ಖಿಲಾಫತ್‌ ಅನುಸರಿಸುವ ಸರ್ಕಾರದ ಸ್ಥಾಪನೆ ಮಾಡಬೇಕು ಎಂಬ ದುರುದ್ದೇಶದಿಂದಲೂ ಪ್ರಚೋದನೆ ನೀಡುತ್ತಿದ್ದರು’ ಎಂದು ಹೇಳಿದ್ದಾರೆ.

‘ಮೂಲಭೂತವಾದ ಸಿದ್ಧಾಂತ ಹಾಗೂ ಉಗ್ರ ಸಂಘಟನೆಗಳತ್ತ ಸ್ಥಳೀಯ ಯುವಕರು ಆಕರ್ಷಿಸಿ ಅವರಲ್ಲಿ ಅಶಾಂತಿ ಮೂಡಿಸುವುದು ಹಾಗೂ ಬಂಡಾಯವೇಳುವಂತೆ ಮಾಡುವ ಕಾರ್ಯದಲ್ಲಿಯೂ ತೊಡಗಿದ್ದರು’ ಎಂದು ತಿಳಿಸಿದ್ದಾರೆ.

‘ಪರ್ವೀನ್‌ ಅವರನ್ನು ಬಂಧಿಸಿ ಸ್ಥಳೀಯ(ಬೆಂಗಳೂರು) ಪೊಲೀಸ್‌ ಠಾಣೆಗೆ ಕರೆದುಕೊಂಡ ಬಂದ ವೇಳೆ ಆಕೆಯಲ್ಇಲ ಯಾವುದೇ ಪಶ್ಚಾತ್ತಾಪ ಕಂಡುಬರಲಿಲ್ಲ. ಆ ಮಟ್ಟಿಗೆ ಆಕೆ ಮೂಲಭೂತವಾದಿಯಾಗಿದ್ದರು. ತನ್ನ ಬಂಧನ ಕೂಡ ಜಿಹಾದ್‌ನ ಭಾಗವೇ ಆಗಿದೆ. ಇದಕ್ಕೆ ತಾನು ಸಿದ್ಧ ಎಂಬುದಾಗಿ ಹೇಳಿದ್ದಳು’ ಎಂದೂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.